ಇದು ಇಂದು ಜನಸಮೂಹದ ಇತಿಹಾಸವನ್ನು ಕಟ್ಟುವ ಕೆಲಸ. ಇತಿಹಾಸದ ಅರಿವೇ ಇರದ ನವಪೀಳಿಗೆಗೆ ಗತ ಇತಿಹಾಸವನ್ನು ನೆನಪಿಸಿ ಅವರ ಸ್ವಾಭಿಮಾನವನ್ನು ಅವರ ಕೈಗೆ ಕೊಡುವ ಅಮೂಲ್ಯ ಕೆಲಸ ಮತ್ತು ಅತೀ ಕಷ್ಟದ ಕೆಲಸ ಕೂಡಾ. ಇಂಥ ಸಾಹಸಕ್ಕೆ ಕೈಹಾಕಿರುವ ದಿನೇಶ್ ಬಂಗೇರ ಇರ್ವತ್ತೂರು ಅವರನ್ನು ಬೆಂಬಲಿಸುವುದು, ಅವರ ಕೈ ಬಲಪಡಿಸುವುದು ನನ್ನನ್ನೂ ಸೇರಿದಂತೆ ಕುಲಾಲ ಸಮುದಾಯದ ಹೊಣೆಗಾರಿಕೆ ಅಂದುಕೊಂಡಿದ್ದೇನೆ.
ವರ್ತಮಾನದಲ್ಲಿ ನಿಂತು ಭೂತಕಾಲವನ್ನು ಅವಲೋಕಿಸಿ ಭವಿಷ್ಯವನ್ನು ಕಟ್ಟಬೇಕು, ಹಾಗೆಯೇ ಕುಲಾಲ ಜನಸಮುದಾಯದ ಭವಿಷ್ಯವನ್ನು ರೂಪಿಸಬೇಕಾದರೆ ವರ್ತಮಾನದಲ್ಲಿರುವ ನಾವು ಭೂತಕಾಲದ ಮೇಲೆ ನೋಟ ಚೆಲ್ಲುವುದು ಅಗತ್ಯ. ಯಾಕೆಂದರೆ ಕಳೆದು ಹೋಗಿರುವ ಕಾಲದಲ್ಲಿ ಏನೆಲ್ಲಾ ಆಗಿ ಹೋಗಿದೆ ಎನ್ನುವುದು ಈಗಿನ ಪೀಳಿಗೆಯ ಹೊಸ ಕುಡಿಗಳಿಗೆ ಗೊತ್ತಿಲ್ಲ. ಅದನ್ನು ಗೊತ್ತುಪಡಿಸಬೇಕಾದರೆ ಅನಕ್ಷರಕುಕ್ಷಿಗಳಾಗಿದ್ದ ನಮ್ಮ ಹಿರಿಯರು ಅನುಭವಿಸಿರಬಹುದಾದ ಯಾತನೆ, ಸಹಿಸಿಕೊಂಡಿರಬಹುದಾದ ಅವಮಾನ, ಸ್ವಾಭಿಮಾನದ ಬದುಕಿಗಾಗಿ ಹಂಬಲಿಸಿರಬಹುದಾದ ಕಲ್ಪನೆಯನ್ನು ಈಗ ಊಹಿಸಿಕೊಂಡರೆ ಬಹುಷ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು, ಮೈಕೊಡವಿ ಸೆಟೆದು ನಿಲ್ಲಬೇಕು ಅನ್ನಿಸದಿರದು.
ನಮ್ಮ ಹಿರಿಯರ ಹೆಸರಿಗೆ ಯಾವ ಬಣ್ಣವೂ ಇರಲಿಲ್ಲ, ದೇವರ ಹೆಸರಿನ ಲೇಪನವೂ ಇರಲಿಲ್ಲ. ನಕ್ಕುರ, ಪಿಂಜಿರ, ದೂಮೆ, ತೋಮೆ, ಕರಿಯೆ ಇತ್ಯಾದಿ ಹೆಸರು. ರಾಮ, ಕೃಷ್ಣ, ಗೋವಿಂದ, ಶಿವರಾಮ ಎನ್ನುವ ಹೆಸರು ಇಟ್ಟುಕೊಳ್ಳಲೂ ಅನರ್ಹರು ಎನ್ನುವ ಸ್ಥಿತಿಯನ್ನು ದಾಟಿ ಬಂದಿದ್ದೇವೆ.
ಈಗ ನಮ್ಮ ಎದೆಯಲ್ಲೂ ಅಕ್ಷರಗಳು ಅರಳುತ್ತಿವೆ, ಹುಲುಸಾದ ಬೆಳೆ ಬೆಳೆಯುತ್ತಿದೆ. ಬೌದ್ಧಿಕವಾಗಿ ಬಲಿಷ್ಠರಾಗುತ್ತಿದ್ದೇವೆ. ವಿಜ್ಞಾನ, ಸಮಾಜಸೇವೆ, ದೇಶಸೇವೆ, ರಾಜಕೀಯ, ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿ, ಶಿಕ್ಷಣ, ನ್ಯಾಯಾಂಗ, ವೈದ್ಯಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಜನಸಮುದಾಯ ಗುರುತಿಸಿಕೊಂಡಿದೆ. ಈಗ ನಮಗೆ ಕೀಳರಿಮೆ ಬೇಕಾಗಿಲ್ಲ, ಕೈಕಟ್ಟಿ ತಲೆತಗ್ಗಿಸಿ, ಮೈಬಗ್ಗಿಸಿ ದೂರಸರಿದು ನಿಲ್ಲಬೇಕಾಗಿಲ್ಲ. ಸ್ವಾಭಿಮಾನದಿಂದ ಬದುಕಬಲ್ಲೆವು, ಆತ್ಮವಂಚನೆ ಮಾಡಿಕೊಳ್ಳದೆ ಇತಿಹಾಸವನ್ನು ಹೇಳಿಕೊಳ್ಳಬಲ್ಲೆವು, ಇತರರಿಗೆ ಸರಿಸಮಾನವಾಗಿ ಗುರುತಿಸಿಕೊಳ್ಳುವ ಆತ್ಮಬಲ ಮನಗಿದೆ, ಸ್ವಾಭಿಮಾನವೂ ಇದೆ.
ಈಗ ನಮಗೆ ಬೇಕಾಗಿರುವುದು ಐಕ್ಯತೆ. ವಿಶ್ವದಾದ್ಯಂತ ಚದುರಿಹೋಗಿರುವ ನಮ್ಮ ಜನಸಮುದಾಯವನ್ನು ಒಂದು ಚೌಕಟ್ಟಿಗೆ ಒಳಪಡಿಸುವುದು. ಅದಕ್ಕೆ ವೇದಿಕೆ ಈ ವೆಬ್ ಸೈಟ್. ಬೆರಳತುದಿಯಲ್ಲಿ ನಮ್ಮ ಇತಿಹಾಸ, ನಮ್ಮ ನೆಲೆ, ನಮ್ಮ ಸಾಧನೆ, ನಮ್ಮ ಭವಿಷ್ಯದ ಗುರಿಯನ್ನು ಹುಡುಕುವುದು, ಹೊಸ ದಿಕ್ಕಿನತ್ತ ಮುನ್ನಡೆಯುವ ಸಾಧ್ಯತೆಗಳನ್ನು ತೋರಿಸುವುದು. ನಮ್ಮ ನೆಲ, ಜಲ, ಭಾಷೆ, ಕಲೆ, ಸಂಸ್ಕೃತಿಯನ್ನು ಪ್ರೀತಿಸಿ ಪೋಷಿಸಿ ಬೆಳೆಸುವ ದಿಕ್ಕಿನಲ್ಲಿ ಯೋಚಿಸುವುದು. ಇದೆಲ್ಲವನ್ನೂ ಸಾಕಾರಗೊಳಿಸಲು ಈ ವೆಬ್ ಸೈಟ್ ದಿಕ್ಸೂಚಿ ಮಾತ್ರವಲ್ಲ ನಮ್ಮ ಮುಖನೋಡಿಕೊಳ್ಳುವ ಕನ್ನಡಿ ಕೂಡಾ.
ಯಾವುದೇ ದೊಡ್ಡ ಗುರಿ ತಲಪುದಕ್ಕೆ ಬೇಕಾಗಿರುವುದು ಮೊದಲ ಒಂದು ಹೆಜ್ಜೆ. ಆ ಹೆಜ್ಜೆಯೇ ಈ ವೆಬ್ ಸೈಟ್ ಎನ್ನುವುದು ನನ್ನ ಗ್ರಹಿಕೆ. ನಮ್ಮಲ್ಲಿ ದೊಡ್ಡ ಪ್ರತಿಭೆಗಳಿವೆ, ಮಾಧ್ಯಮರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಯುವಪ್ರತಿಭೆಗಳಿವೆ. ಇವು ನಮ್ಮ ವೆಬ್ ಸೈಟ್ ಮುನ್ನಡೆಸುವುದಕ್ಕೆ ದೊಡ್ಡ ಸಂಪತ್ತು ಎನ್ನುವುದು ನನ್ನ ಬಲವಾದ ನಂಬಿಕೆ. ಈ ವೆಬ್ ಸೈಟ್ ನಲ್ಲಿ ದಿನೇಶ್ ಹೆಸರಿಸಿರುವ ಹೆಸರುಗಳ ಮೇಲೆ ಕಣ್ಣಾಡಿಸಿದರೆ ನನ್ನ ಮಾತನ್ನು ನೀವು ಖಂಡಿತಕ್ಕೂ ಒಪ್ಪಿಕೊಳ್ಳುತ್ತೀರಿ ಅಂದುಕೊಳ್ಳುತ್ತೇನೆ. ಯಾಕೆಂದರೆ ಸುದ್ದಿ, ಮಾಹಿತಿ ಹೂರಣವನ್ನು ಕೊಡಬೇಕಾದರೆ, ಚಿಂತನೆಗೆ ಹಚ್ಚುವ ಝಲಕ್ ಗಳನ್ನು ಕೊಡಬೇಕಾದರೆ ವೃತ್ತಿಪರತೆ ಇರುವ ಮತ್ತು ಬದ್ಧತೆ ಇರುವ ಮಾಧ್ಯಮದ ಅನುಭವ ಇರುವ ದೊಡ್ಡ ತಂಡವೇ ಬೇಕಾಗುತ್ತದೆ. ಆ ತಂಡಕ್ಕೆ ಖಂಡಿತಕ್ಕೂ ಕೊರತೆ ಇಲ್ಲ ಎನ್ನುವುದನ್ನು ದಿನೇಶ್ ಸಾಧಿಸಿ ತೋರಿಸಿದ್ದಾರೆ, ಇದು ಎಷ್ಟು ನಿಜ ಎನ್ನುವುದನ್ನು ದಿನಕಳೆದಂತೆ ನೀವೇ ಗುರುತಿಸುತ್ತೀರಿ ಎನ್ನುವುದು ನನ್ನ ನಂಬಿಕೆ.
ನಾನು ಮೊದಲೇ ಹೇಳಿದಂತೆ ಈ ವೆಬ್ ಸೈಟ್ ನಮ್ಮ ಕೈಗನ್ನಡಿ ಆಗಬೇಕು. ಇದರಲ್ಲಿ ನಮ್ಮ ಸಮುದಾಯದ ಪ್ರತಿಯೊಂದು ಪ್ರತಿಭೆಯ ದಾಖಲೀಕರಣವಾಗಿ ಚಿಟಿಕಿ ಹೊಡೆದರೆ ಆ ಮಾಹಿತಿಯ ಪುಟ ತೆರೆದುಕೊಳ್ಳಬೇಕು. ಇದು ನಮ್ಮ ಜನಸಮುದಾಯದ ಡಿಕ್ಷನರಿಯಾಗಬೇಕು. ಯಾವ ಮಾಹಿತಿಗೂ ಕೊರತೆ ಇರಬಾರದು, ವೃತ್ತಿ-ಪ್ರವೃತ್ತಿಯಿಂದ ಹಿಡಿದು ಪ್ರತಿಯೊಂದು ಕ್ಷೇತ್ರಗಳ ಸಮಗ್ರ ಮಾಹಿತಿ ಅದರ ಸಾಧಕರ ಸಾಧನೆಯ ಪರಿಪೂರ್ಣ ಚರಿತ್ರೆ ಒಳಗೊಂಡಿರಬೇಕು. ಇದೆಲ್ಲವೂ ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರ ನೆರವೂ ಬೇಕು. ಒಂದು ತಂಡವಾಗಿ ನಮ್ಮ ಇತಿಹಾಸವನ್ನು ಕಟ್ಟುತ್ತಿದ್ದೇವೆ, ಮುಂದಿನ ಭವಿಷ್ಯವನ್ನು ರೂಪಿಸುತ್ತಿದ್ದೇವೆ ಎನ್ನುವ ಧ್ಯೇಯ ಹಾಗೂ ಬದ್ಧತೆಯಿಂದ ನಮ್ಮ ನಮ್ಮ ಕಾಣಿಕೆಯನ್ನು ಸಲ್ಲಿಸುವ ಉದಾರತೆ ತೋರಬೇಕು.
ಸರ್ವಜ್ಞ ನಮ್ಮ ಸ್ವಾಭಿಮಾನದ ಸಂಕೇತ, ನಮ್ಮ ಅರಿವಿನ ಗುರು, ನಮಗೆ ಮಾದರಿ. ಸರ್ವಜ್ಞ ಎನ್ನುವ ಮೂರಕ್ಷರವನ್ನು ಸ್ಮರಿಸುತ್ತಾ ಮುನ್ನಡೆಯೋಣ. ನಮ್ಮ ಉದ್ದೇಶ ಸಾಧನೆಗಾಗಿ ಮೊದಲ ಹೆಜ್ಜೆ ಇಡೋಣ. ಸ್ವಾಭಿಮಾನಿಗಳಾಗಿ ಬದುಕು ಕಟ್ಟಿಕೊಳ್ಳೋಣ, ಇತರರಿಗೂ ಮಾದರಿಯಾಗೋಣ.
ನಾವು ಯಾರಿಗೂ ಸ್ಪರ್ಧಿಗಳಲ್ಲ, ಯಾರೊಂದಿಗೂ ಪೈಪೋಟಿಗಿಳಿಯುವುದಿಲ್ಲ. ನಾವು ನಮಗಾಗಿ, ನಮ್ಮವರ ನಾಳೆಗಾಗಿ ಸುಂದರ ಕನಸು ಕಟ್ಟಿಕೊಂಡು ಬದುಕುವ ಸಂಕಲ್ಪ ಮಾಡೋಣ. ಅಬ್ದುಲ್ ಕಲಾಂ ಹೇಳಿದಂತೆ ನಾವು ಕನಸು ಕಾಣಬೇಕು, ಅವು ನಿದ್ದೆಯಲ್ಲಿ ಬೀಳುವ ಕನಸಲ್ಲ. ನಿದ್ದೆ ಮಾಡಲು ಬಿಡದಂಥ ಕನಸುಗಳು. ಆ ಕನಸಿಗೆ ಈಗ ಬಿಜಾಂಕುರವಾಗುತ್ತಿದೆ. ಅದು ಮೊಳೆತು, ಚಿಗಿತು, ಗಿಡವಾಗಿ, ಮರವಾಗಿ ಕಾಯಿ, ಹಣ್ಣು ಕೊಡುವ. ನೆಮ್ಮದಿಯ ನೆರಳು ಕೊಡುವ, ನಾವೆಲ್ಲರೂ ಆ ಮರದ ಆಸರೆಯಲ್ಲಿ ಬದುಕುವಂಥ ಕನಸು ಕಾಣುತ್ತಾ ಮುನ್ನಡೆಯೋಣ.


