ಇಲ್ಲಿ ನಗು ಮಾಸಿ ದುಃಖ-ನೋವು ಮಡುಗಟ್ಟಿದೆ. ಮನೆಯಲ್ಲಿದ್ದ ಖುಷಿ ದೂರವಾಗಿ ಬರೀ ವ್ಯಥೆಯೇ ತುಂಬಿಕೊಂಡಿದೆ. ಮನೆಗೊಂದು ಪುಟ್ಟ ಕಂದನ ಆಗಮನವಾಗುತ್ತದೆ ಎಂದು ಸಡಗರದಿಂದಿದ್ದ ಮನೆಮಂದಿಗೆ ಆಘಾತವಾದರೆ, ನವಜಾತ ಶಿಶುವನ್ನು ಮಡಿಲಲ್ಲಿಟ್ಟು ಪೋಷಿಸಬೇಕಿದ್ದ ಅಮ್ಮ ಜೀವಚ್ಛವವಾಗಿ ಮಲಗಿದ್ದಾಳೆ. ಎಳೆ ಹಸುಳೆಯ ರೋದನ ಮುಗಿಲು ಮುಟ್ಟಿದೆ.. ಇದು ಪುತ್ತೂರಿನ ಪ್ರೇಮಾ ಕುಲಾಲ್ ಅವರ ಹೃದಯ ಕಲಕುವ ಕಥೆ…
ಪುತ್ತೂರು(ಮಾ.೨೭, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮವಿತ್ತು, ಬಳಿಕ ಕೋಮಾದ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಒಂದೆಡೆ ಎಳೆ ಕಂದಮ್ಮ ತಾಯಿಗಾಗಿ ರೋಧಿಸುತ್ತಿದ್ದರೆ ಮತ್ತೊಂದೆಡೆ ಚಿಕಿತ್ಸೆಗೆ ಹಣವಿಲ್ಲದೆ ಕುಟುಂಬ ಕಂಗಾಲಾಗಿದೆ.
ಪುತ್ತೂರು ಸೇಡಿಯಾಪು ಗ್ರಾಮದ ಕೃಷ್ಣ ಕುಲಾಲ್ ಅವರ ಸಹೋದರಿ ಪ್ರೇಮಾ ಕುಲಾಲ್(೩೩ ವರ್ಷ) ಅವರೇ ಜೀವಂತ ಶವವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನತದೃಷ್ಟೆ. ಈಕೆಯನ್ನು ಎರಡು ವರ್ಷದ ಹಿಂದೆ ಬಾಬು ಮೂಲ್ಯ ಅವರಿಗೆ ವಿವಾಹ ಮಾಡಿಕೊಟ್ಟಿದ್ದು, ಅವರು ಕೇರಳದ ಕೊಯ್ಲಾ೦ಡಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯಾದ ಪತ್ನಿ ಪ್ರೇಮಾ ತವರು ಮನೆಯಲ್ಲಿದ್ದರು. ಅವರು ಚೊಚ್ಚಲ ಹೆರಿಗೆಗಾಗಿ ಮಾರ್ಚ್ ಒಂದರಂದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯ ವೈದ್ಯರು ನಾರ್ಮಲ್ ಹೆರಿಗೆ ಕಷ್ಟ, ಸಿಸೇರಿಯನ್ ಮಾಡಲೇಬೇಕು ಎಂದಾಗ, ಬೇರೆ ವಿಧಿಯಿಲ್ಲದೇ ಪೋಷಕರು ಕೂಡ ಒಪ್ಪಿದ್ದರು. ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮವಿತ್ತ ಪ್ರೇಮಾ ಅವರು ಬಳಿಕ ಮನೆಗೆ ವಾಪಸಾಗಿದ್ದರು. ಕೆಲ ದಿನಗಳ ಬಳಿಕ ಅಸ್ವಸ್ಥಗೊಂಡ ಅವರನ್ನು ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾರ್ಚ್ 14ರಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಕೋಮಾ ಸ್ಥಿತಿಗೆ ಜಾರಿರುವ ಪ್ರೇಮಾ ಅವರು ಕೆಲವು ದಿನಗಳಾದರೂ ಸಹಜ ಸ್ಥಿತಿಗೆ ಬಂದಿಲ್ಲ.
ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ನೀಡಿರುವ ಅನಸ್ತೇಷಿಯಾ(ಅರಿವಳಿಕೆ ಮದ್ದು) ನೀಡುವಲ್ಲಿ ಆದ ಏರುಪೇರು, ರಕ್ತದೊತ್ತಡ ಸಮಸ್ಯೆ ಈ ಸ್ಥಿತಿಗೆ ಕಾರಣ ಎನ್ನಲಾಗಿದೆ. ಅವರ ಮೆದುಳು ನಿಷ್ಕ್ರಿಯವಾಗಿದ್ದು, ಯಾವಾಗ ಕೋಮಾದಿಂದ ಹೊರಬರುತ್ತಾರೋ ಹೇಳಲು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಪ್ರೇಮಾ ಅವರಿಗೆ ಆಸ್ಪತ್ರೆಯ ತೀರ್ವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈಗಾಗಲೇ ಆಸ್ಪತ್ರೆ ವೆಚ್ಚ ಎರಡೂವರೆ ಲಕ್ಷ ಮೀರಿದ್ದು,ಪರಿಸ್ಥಿತಿ ಸುಧಾರಿಸಿಲ್ಲ. ಕಡುಬಡವರಾದ ಪ್ರೇಮಾ ಕುಟುಂಬಿಕರು ಈಗಾಗಲೇ ಇರುವ ಚಿನ್ನ ಅಡವಿಟ್ಟು, ಸಲ ಮಾಡಿ ಲಕ್ಷ ರೂಪಾಯಿ ಸಂಗ್ರಹಿಸಿದೆ. ಉಳಿದ ಹಣ, ಮುಂದಿನ ಚಿಕಿತ್ಸಾ ವೆಚ್ಚ ಭರಿಸಲಾಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
ಪ್ರೇಮಾ ಅವರ ಪತಿ ಕೂಲಿ ಕೆಲಸದಿಂದ ಸಿಗುತ್ತಿರುವ ಹಣವು ಕುಟುಂಬದ ನಿರ್ವಹಣೆಗೆ ಸಾಲುತ್ತಿಲ್ಲ. ಬಡ ಕುಟುಂಬದ ಪ್ರೇಮಾ ಅವರು ಚೇತರಿಕೆ ಕಾಣಬೇಕಾದರೆ ದಾನಿಗಳ ನೆರವು ಅತ್ಯಗತ್ಯವಾಗಿದೆ. ದಾನಿಗಳು ತಮ್ಮ ನೆರವನ್ನು ಈ ಕೆಳಗಿನ ಬ್ಯಾಂಕ್ ಅಕೌಂಟ್ಗೆ ಕಳುಹಿಸಬಹುದು ಎಂದು ಪ್ರೇಮಾ ಅವರ ಸಹೋದರ ಕೃಷ್ಣ ಕುಲಾಲ್ ಮನವಿ ಮಾಡಿದ್ದಾರೆ.