ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ತನ್ನ ನೈಜ ಅಭಿನಯ, ಪಾತ್ರದ ಗತ್ತು, ಗಾಂಭೀರ್ಯತೆ, ಯಾವುದೇ ಪಾತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುವ ರೀತಿಯಿಂದ ತುಳುನಾಡ ಜನಮನ ಗೆದ್ದು ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಬೆಳೆಯುತ್ತಿರುವ, ತನ್ನದೇ ವೈವಿಧ್ಯ ಮೆರೆದ ಕಲಾವಿದ ರಂಗಭೂಮಿ ಕಲಾವಿದ ಚಿದಾನಂದ ಆದ್ಯಪಾಡಿ.
ಇತ್ತೀಚೆಗೆ ತೆರೆಕಂಡು ಚಿತ್ರ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದ , ವಿಭಿನ್ನ ರೀತಿಯ ಕಥಾಹಂದರವನ್ನೊಳಗೊಂಡ `ಕಂಬಳಬೆಟ್ಟು ಭಟ್ರೆನ ಮಗಲ್’ ಚಿತ್ರದಲ್ಲಿ ಚಿದಾನಂದ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ತನ್ನ ಚೊಚ್ಚಲ ಸಿನಿಮಾದಲ್ಲೇ ಅದ್ಭುತ ಪರ್ಫಾಮೆನ್ಸ್ ಕೊಟ್ಟಿರುವ ಅವರು ತುಳು ಮುಂದೆ ಚಿತ್ರರಂಗದಲ್ಲಿ ಭರವಸೆಯ ಕಲಾವಿದನಾಗಿ ಹೊರ ಹೊಮ್ಮುವ ಲಕ್ಷಣಗಳಿವೆ.
ಆದ್ಯಪಾಡಿಯ ಶಿವಪ್ಪ ಬಂಗೇರ ಹಾಗೂ ರಾಜೀವಿ ದಂಪತಿಯ ಸುಪುತ್ರರಾದ ಚಿದಾನಂದ್ ದಶಕಗಳ ಹಿಂದೆಯೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ `ಭೂಮಿ’ `ಓಂ ಸಾಯಿಬಾಬಾ’ `ಸಜ್ಜಿಗೆ ಬಜಿಲ್’ ಎಂಬಿತ್ಯಾದಿ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಗಳಿಸಿದವರು. ಇವರ ತಂದೆ ಶಿವಪ್ಪ ಬಂಗೇರ ಅವರೂ ರಂಗಭೂಮಿ ಕಲಾವಿದರಾಗಿದ್ದು, ಇವರ ರಂಗ ತಾಲೀಮು ಕಂಡು ತಾನೂ ಕಲಾವಿದನಾಗಿ ಬಣ್ಣ ಹಚ್ಚಬೇಕೆಂಬ ಅದಮ್ಯ ಬಯಕೆ ಹೊಂದಿದ್ದರು. ಆ ಬಳಿಕ ತನ್ನ ಹನ್ನೆರಡನೇ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಅವರು ರಂಗಭೂಮಿ ಪ್ರವೇಶ ಮಾಡಿದರು.
`ಕಾನೂನುದ ಕಣ್ಣ್’ ಎಂಬ ನಾಟಕಕ್ಕೆ ಪ್ರಥಮವಾಗಿ ಬಣ್ಣ ಹಚ್ಚಿದ ಚಿದಾನಂದ್, ಬಳಿಕ ಪ್ರತಿವರ್ಷ ನಾಲ್ಕೈದು ನಾಟಕಗಳಲ್ಲಿ ಅಭಿನಯಿಸುತ್ತಾ ಹೋದಂತೆ ನಾಟಕಗಳ ಮೇಲೆ ವ್ಯಾಮೋಹ ಹೆಚ್ಚಿತು. ಇದೇ ರಂಗದಲ್ಲಿ ಪಳಗಿದ ಅವರು ನಾಟಕ ರಂಗದ ಸ್ನೇಹಿತರನ್ನು ಒಳಗೊಂಡ `ವಿಧಾತ್ರಿ ಕಲಾವಿದೆರ್’ ಎಂಬ ತಂಡ ಕಟ್ಟಿಕೊಂಡು ಕರಾವಳಿ, ಬೆಂಗಳೂರು, ಮೈಸೂರು, ಮುಂಬಯಿ, ಪೂನಾ ಮುಂತಾದೆಡೆ ನಾಟಕ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.
ಹತ್ತು ವರ್ಷಗಳ ಹಿಂದೆ ಭರತ್ ಎಸ್ ಕರ್ಕೇರ ಅವರು ಸ್ಥಾಪಿಸಿದ `ವಿಧಾತ್ರಿ ಕಲಾವಿದೆರ್’ ತಂಡದಲ್ಲಿ ಪ್ರಮುಖ ಕಲಾವಿದನಾಗಿ ಗುರುತಿಸಿಕೊಂಡಿರುವ ಚಿದಾನಂದ್, ತನ್ನ ಮನೋಜ್ಞ ಅಭಿನಯಕ್ಕಾಗಿ ಮೂರು ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸುಮಾರು 200 ನಾಟಕಗಳಲ್ಲಿ ಅಭಿನಯಿಸಿ, ಒಂದೂವರೆ ಸಾವಿರದಷ್ಟು ಪ್ರದರ್ಶನ ನೀಡಿರುವ ಇವರು ನಿರ್ದೇಶನದಲ್ಲೂ ಕೈಯಾಡಿಸಿ ಸೈ ಅನಿಸಿಕೊಂಡಿದ್ದಾರೆ. ಇವರ ನೀರ್ದೇಶನದ `ನಿಕ್ಕ್ ಗೊತ್ತುಂಡಾ’ ಎಂಬ ನಾಟಕ ಜಿಲ್ಲಾ ಮಟ್ಟದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದೆ. `ಕಾಸ್ ಬೋಡಾ..?’ ಎಂಬ ಜನಪ್ರಿಯ ನಾಟಕ ಸಹಿತ 25 ನಾಟಕಗಳು ಚಿದಾನಂದ್ ನಿರ್ದೇಶನದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.
ತುಳು ರಂಗಭೂಮಿಯ ತಮ್ಮ ಅಮೂಲ್ಯ ಸೇವೆಗಾಗಿ `ರಂಗ ಸಾರಥಿ’ `ತುಳುನಾಡ ತುಡರ್’ ಹಾಗೂ `ಕಲಾ ಮಂದಾರ’ ಎಂಬ ಬಿರುದು ಪುರಸ್ಕೃತರಾಗಿರುವ ಚಿದಾನಂದ ಅದ್ಯಪಾಡಿ ಅವರು ಹದಿನೈದಕ್ಕೂ ಹೆಚ್ಚಿನ ವೇದಿಕೆಗಳಲ್ಲಿ ಸನ್ಮಾನ ಪಡೆದಿದ್ದಾರೆ. ರಮೇಶ್ ರಾಯ್ ಕುಕ್ಕುವಳ್ಳಿ ಅವರ ಮೂಲಕ ಚಿತ್ರರಂಗ ಪ್ರವೇಶಗೈದು, ಪ್ರಥಮ ಚಿತ್ರದಲ್ಲೇ ಗಮನಾರ್ಹ ನಟನೆ ನೀಡುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಚಿತ್ರರಂಗದಲ್ಲಿ ನಟನೆ ಮೂಲಕ ಇನ್ನೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕೆಂಬ ಕನಸು ಕಟ್ಟಿಕೊಂಡಿರುವ ಚಿಂದಾನಂದ್ ಅವರ ಕಥೆಯಾಧಾರಿತ ಸಿನಿಮಾವೊಂದು ಸದ್ಯದಲ್ಲೇ ಬರಲಿದೆ. ಚಿದಾನಂದ್ ಕಲಾ ಸೇವೆ ನಿರಂತರವಾಗಿ ಸಾಗುತಿರಲಿ. ಅವರು ಕಲಾಭಿಮಾನಿಗಳಿಗೆ ನೆರಳು ನೀಡುವ ದೈತ್ಯ ಶಕ್ತಿಯಾಗಿ ಬೆಳೆಯಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಶುಭ ಹಾರೈಕೆ.