ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಒಬ್ಬ ವ್ಯಕ್ತಿಯನ್ನು ನಗಿಸುವುದು ಅಥವಾ ಅಳಿಸುವುದು ಅಂದರೆ ಅದು ಸುಲಭದ ಮಾತಲ್ಲ. ಅದು ಒಂದು ಅದ್ಭುತ ಕಲೆ ಎಂದೇ ಹೇಳಬಹುದು. ಈ ಕಲೆ ಎಲ್ಲರಿಗೂ ಸುಲಭವಾಗಿ ಒಲಿದು ಬರುವ ವಿದ್ಯೆಯಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮ ಅತ್ಯಗತ್ಯ ಎಂಬುದನ್ನು ನಟನೆ ಮಾಡುವವರೇ ಬಲ್ಲರು. ಇಂಥ ವಿಶಿಷ್ಟ ಅಭಿನಯ ಕಲೆಯನ್ನು ರೂಢಿಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಹೊತ್ತು ಬಣ್ಣದ ಲೋಕದ ಪಯಣ ಶುರು ಮಾಡಿ ತುಳು ರಂಗಭೂಮಿಯಲ್ಲಿ ಪ್ರಸಿದ್ಧಿಗೆ ಬರುತ್ತಿರುವವರಲ್ಲಿ ಮೇಧಾವಿ ಕುಲಾಲ್ ಅವರೂ ಒಬ್ಬರು.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನವರಾದ ನಿವೃತ್ತ ದೈಹಿಕ ಶಿಕ್ಷಕ ರಮೇಶ್ ಮೂಲ್ಯ ಮತ್ತು ನಿವೃತ್ತ ಚಿತ್ರಕಲಾ ಶಿಕ್ಷಕಿ ಭವಾನಿ ದಂಪತಿಗಳ ಪುತ್ರ, ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಮೇಧಾವಿ ಕುಲಾಲ್ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿರುವ ಇವರು ಚಿತ್ರಕಲೆ ಮತ್ತು ನಾಟಕಾಭಿನಯವನ್ನು ಉಪವೃತ್ತಿಯಾಗಿ ಸ್ವೀಕರಿಸಿಕೊಂಡು ಹಲವು ತುಳು ನಾಟಕಗಳಲ್ಲಿ ಅಭಿನಯಿಸಿ ಕಲಾಭಿಮಾನಿಗಳಿಗೆ ಮನೋರಂಜನೆ ನೀಡುತ್ತಾ ಪ್ರಭುದ್ಧತೆಯ ಮೆಟ್ಟಿಲನ್ನೇರುತ್ತಾ ಬಂದಿದ್ದಾರೆ.
ಶಿಕ್ಷಣವನ್ನು ಗಾರ್ಡಿಯನ್ ಎಂಜೆಲ್ ಹಿರಿಯ ಪ್ರಾಥಮಿಕ ಶಾಲೆ ಮಡಂತ್ಯಾರ್ ನಲ್ಲಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪುಂಜಾಲಕಟ್ಟೆಯಲ್ಲಿ . ಫ್ರೌಢ ಶಿಕ್ಷಣವನ್ನು ಸರಕಾರಿ ಕಾಲೇಜು ಪುಂಜಾಲಕಟ್ಟೆಯಲ್ಲಿ . ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ. ಬಿ.ಕಾಂ ಪದವಿಯನ್ನು ಸೆಕ್ರೇಡ್ ಹಾರ್ಡ್ ಕಾಲೇಜು ಮಡಂತ್ಯಾರಿನಲ್ಲಿ, ಎಂ.ಕಾಂ ಸ್ನಾತಕೋತ್ತರ ಪದವಿಯನ್ನು ಎಸ್.ವಿ.ಎಸ್ ಕಾಲೇಜು ಬಂಟ್ವಾಳದಲ್ಲಿ ಪೂರೈಸಿದ ಮೇಧಾವಿ ಅವರು, ಪ್ರಸ್ತುತ ಇವರು ಸೃಜನ ಡಿಸೈನ್ಸ್ ಮಡಂತ್ಯಾರು ಇಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದಾರೆ.
ಕಾಲೇಜು ದಿನಗಳಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಇವರು, ತಾಲೂಕು , ಜಿಲ್ಲೆ ರಾಜ್ಯಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಕ್ಕೂ ಹೆಚ್ಚು ಪ್ರಶಸ್ತಿಯನ್ನು ಪಡೆದಿರುತ್ತಾರೆ. ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಅವರು ನಡೆಸಿದ ಚಿತ್ರಕಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ, ವಿಷಾಯನ್ ಚಿಲ್ಡ್ರನ್ಸ್ ಆರ್ಟ್ಸ್ ಕಂಟೆಸ್ಟ್ ನಲ್ಲಿ ಜಪಾನಿನಿಂದ ಅಂತರಾಷ್ಟ್ರೀಯ ಪುರಸ್ಕಾರವೂ ಇವರಿಗೆ ದೊರೆತಿದೆ.
ಬಾಲ್ಯದಿಂದಲೇ ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮೇಧಾವಿ, ಐದನೇ ತರಗತಿಯಲ್ಲಿರುವಾಗಲೇ ಶ್ರೀ ಪಾರೆಂಕೇಶ್ವರಿ ಕಲಾ ಸೇವಾ ಸಂಘದ ಮೂಲಕ ಶ್ರೀ ಶ್ಯಾಮರಾಯ ಆಚಾರ್ಯ ನಿರ್ದೇಶನದ “ಪಲಯನ ಪ್ರೀತಿ” ನಾಟಕದಲ್ಲಿ ಅಭಿನಯಿಸಿ ಕಲಾ ಜೀವನದ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದರು. ನಂತರ `ಸಂಸಾರಡೊಂಜಿ ಅಪಸ್ವರ’, `ಕಲ್ಪಂದಿನಾಯನ ಗತಿ’ ನಾಟಕಗಳಲ್ಲಿ ಬಾಲ ನಟನಾಗಿ ಅಭಿನಯಿಸಿ ಪ್ರಸಂಶೆಗಿಟ್ಟಿಸಿಕೊಂಡಿದ್ದರು.
ಪಂಚಶ್ರೀ ಕಲಾವಿದರು ಬಂಟ್ವಾಳ, ಮುರುಘೇಂದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ, ಪಾರೇಂಕೇಶ್ವರಿ ಕಲಾ ಸೇವಾ ಸಂಘ ಶ್ರೀ ಕ್ಷೇತ್ರ ಪಾರೇಂಕಿ ಮಡಂತ್ಯಾರು, ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಮುಂತಾದ ನಾಟಕ ತಂಡಗಳಲ್ಲಿ ವಿವಿಧ ಪಾತ್ರ ನಿರ್ವಹಿಸಿರುವ ಮೇಧಾವಿ ಅವರು ಶ್ರೀ ಮುರಗೇಂದ್ರ ಮಿತ್ರ ಮಂಡಲಿ ಪುಂಜಾಲಕಟ್ಟೆ ಇದರ ಸದಸ್ಯನಾಗಿ, ಶ್ರೀ ರತ್ನ ದೇವ್ ಪುಂಜಾಲಕಟ್ಟೆ ಮತ್ತು ಶ್ರೀ ಹರಿಶ್ಚಂದ್ರ ಶೆಟ್ಟಿಗಾರ್ ಅವರ ಮಾರ್ಗದರ್ಶನ ದಲ್ಲಿ ಅಜ್ಜಿಗ್ ಏರ್ಲಾ ಇಜ್ಜಿ , ಪುಲ್ಯಾನಗ, ಒರ ಪೋಪನ , ಕಂಬುಲ , ಮುಂಡಾಸ್ ಮುಂಡಪ್ಪೆ, ಅಪ್ಪೆ ದಾನೆ ಚಪ್ಪೆ, ಮುಕ್ಕಾಲ್ ಮೂಜಿ ಘಳಿಗೆ, ಗೊತ್ತಾನಗ ಪೂರ್ತಾ೦ಡ್ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಕಲಾ ರಸಿಕರ ಮನ ಗೆದ್ದಿದ್ದಾರೆ.
ಪಂಚಶ್ರೀ ಕಲಾ ತಂಡದಲ್ಲಿ ಶ್ರೀ ಬಾಲಕೃಷ್ಣ ಶೆಟ್ಟಿ ಮತ್ತು ಶ್ರೀ ರಾಜೇಶ್ ಬೆಳ್ತಂಗಡಿಯವರ ಮಾರ್ಗದರ್ಶನದಲ್ಲಿ ಹೆಲ್ಮೆಟ್ , ದೇವೆರ್ ತೂಪೆರ್ ನಾಟಕಗಳಲ್ಲಿ ಅಭಿನಯಿಸಿ ತನ್ನ ಪ್ರತಿಭೆಯನ್ನು ಬಿಂಬಿಸಿರುವ ಮೇಧಾವಿ ಅವರು, ರಮಾ ಬಿ.ಸಿ ರೋಡ್ ಅವರ ಮಾರ್ಗದರ್ಶನಲ್ಲಿ ಪ್ರಪ್ರಥಮ ಬಾರಿಗೆ ಬೇಡರ ಕಣ್ಣಪ್ಪ ಪೌರಾಣಿಕ ನಾಟಕಗಳಲ್ಲಿ ಕಣ್ಣಪ್ಪನ ಪಾತ್ರದಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ.
ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಆಯೋಜಿಸಿದ ಮಾದರಿ ತುಳು ಗ್ರಾಮದಲ್ಲಿ ಕಲಾವಿದನಾಗಿ ಅಭಿನಯಿಸಿರುವ ಇವರು, ಪ್ರಸ್ತುತ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಕುಡ್ಲ ತಂಡದಲ್ಲಿ” ರಂಗ ಚಾಣಕ್ಯ” ಶ್ರೀ ರಾಘವೇಂದ್ರ ಕಾರಂತ್ ಮೊಗರ್ನಾಡ್ ಇವರ ಮಾರ್ಗದರ್ಶನದಲ್ಲಿ ” ನನ್ನ ಹೊಸ ಬದುಕ್”, ” ಇಂಚಲಾ ಉಂಡಾ”,…? ಬೋಡುಂದತ್ತ್ ಆದ್ ಪೋಯಿನೆ, ಅರ್ಗಂಟ್ ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೆ ತಾಂಬೂಲ ತಂಡದ ರಂಗ ವಿನ್ಯಾಸದ ಜವಾಬ್ದಾರಿ ಮತ್ತು ತಂಡದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಕಲೆಗೆ ಸ್ಫೂರ್ತಿ ನೀಡಿದ ತಂದೆ, ತಾಯಿ ,ವಿದ್ಯೆ ಕಲಿಸಿದ ಗುರುಗಳು,ರಂಗ ಗುರುಗಳ ಮಾರ್ಗದರ್ಶನ, ಸೋದರ ಚಿತ್ತ ರಂಜನ್ ಮತ್ತು ಅನೇಕ ಗೆಳೆಯ ಗೆಳತಿಯರು, ಸಹ ಕಲಾವಿದರು ತಂತ್ರಜ್ಞರ ನೆರವಿನಿಂದ ಇಲ್ಲಿಯವರೆಗೆ ಕಲಾ ಮಾತೆಯ ಸೇವೆ ಮಾಡುತ್ತಾ ಬಂದಿದ್ದೇನೆ ಎನ್ನುವ ಮೇಧಾವಿ ಅವರು, ಮುಂದೆಯೂ ಕಲಾ ಸೇವೆಯನ್ನು ಮುಂದುವರಿಸುತ್ತಾ ಹೋಗಬೇಕೆನ್ನುವ ಅಭಿಲಾಷೆ ಹೊಂದಿದ್ದಾರೆ. ಇವರು ಇನ್ನಷ್ಟೂ ರಂಗಭೂಮಿ ಯಲ್ಲಿ ಎತ್ತರೆತ್ತರ ಬೆಳೆದು ಹೆತ್ತವರಿಗೆ, ಊರಿಗೆ, ಗುರುಗಳಿಗೆ ಕೀರ್ತಿ ತಂದು ಕೊಡಲಿ ಎಂದು ಹಾರೈಸೋಣ.