ಕಿನ್ನಿಗೋಳಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಂಕಲಕರಿಯ ಬಳಿ ಶಾಂಭವಿ ನದಿಗೆ ವಾಹನವೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆಯಲ್ಲಿ ಸಾಹಸ ಮೆರೆದು ಮೂವರ ಜೀವ ರಕ್ಷಣೆಯನ್ನು ಮಾಡಿದ ಗುಣಪಾಲ ಮೂಲ್ಯ ಮತ್ತು ಅಶೋಕ್ ಕುಲಾಲ್ ಇವರನ್ನು ಜಾರಂದಾಯ ಬಂಟ ಕ್ರಿಕೆಟರ್ ಪಟ್ಟೆ ವತಿಯಿಂದ ಸನ್ಮಾನಿಸಲಾಯಿತು. ಇಬ್ಬರನ್ನೂ ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನದಲ್ಲಿ ಊರಿನ ಹಿರಿಯರ ಸಮ್ಮುಖದಲ್ಲಿ ಶ್ಲಾಘಿಸಿ ,ಶಾಲು ಹೊದೆಸಿ ಸ್ಮರಣಿಕೆ ಗೌರವಿಸಲಾಯಿತು.
ಗುಣಪಾಲ ಮೂಲ್ಯ ಅವರು ಪಟ್ಟೆಕ್ರಾಸ್ ನಿವಾಸಿ ಶಿವ ಮೂಲ್ಯ ಎಂಬವರ ಪುತ್ರರಾಗಿದ್ದು, ಅಂಗಡಿಯೊಂದನ್ನು ಹೊಂದಿದ್ದಾರೆ. ಅಶೋಕ್ ಕುಲಾಲ್ ಅವರು ಉಳೆಪಾಡಿಯ ಲಕ್ಷ್ಮಣ್ ಕುಲಾಲ್ ಅವರ ಪುತ್ರನಾಗಿದ್ದು, ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಇವರಿಬ್ಬರೂ ಬೊಲೆರೋ ವಾಹನ ಸಮೇತ ನದಿಗೆ ಬಿದ್ದಿದ್ದ ಬೋಳ ಕೇಂದೊಟ್ಟು ಬರ್ಕೆ ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್, ಮಕ್ಕಳಾದ ಶಲ್ಟನ್ ಮತ್ತು ಶರ್ಮನ್ ಅವರನ್ನು ರಕ್ಷಿಸಿದ್ದರು.