ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿಯು ಮಂಗಳವಾರ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ, ಕಲಾಶ್ರೀ ಶಿಬಿರದ ಸಮಾರೋಪ’ದಲ್ಲಿ ಬೆಳಗಾವಿಯ ರೋಹಿತ್ ಕುಂಬಾರ್ ಗೆ 2018 -19ನೇ ಸಾಲಿನ ರಾಜ್ಯಮಟ್ಟದ ‘ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

17 ವರ್ಷಗಳಿಂದ ಮಕ್ಕಳಿಗೆ ಕಲಾಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಪ್ರತಿ ತಾಲ್ಲೂಕಿನಿಂದ 9ರಿಂದ 16 ವಯಸ್ಸಿನ 8 ಮಕ್ಕಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಅಲ್ಲಿ ವಿಜೇತರಾದವರು ರಾಜ್ಯಮಟ್ಟದಲ್ಲಿ ಸ್ಪರ್ಧಿಸುವರು. ಅದರಂತೆ ರೋಹಿತ್ ಅವರನ್ನು “ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ” (ಹೋಮ್ ಮೇಡ್ ಮೊಬೈಲ್ ಮೈಕ್ರೋಸ್ಕೊಪ್)ವಿಷಯಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿಯು ₹ 5 ಸಾವಿರ ರೂ ನಗದು ಬಹುಮಾನವನ್ನು ಒಳಗೊಂಡಿದೆ. 29 ಜಿಲ್ಲೆಗಳ 180 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕಲಾಶ್ರೀ ಶಿಬಿರದ ಸಮಾರೋಪದಲ್ಲಿ ಒಟ್ಟು 21 ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಲಾಗಿದ್ದು, ಸಚಿವೆ ಜಯಮಾಲಾ, ಬಾಲಭವನದ ನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಮತೇನಹಟ್ಟಿಯ ನಿವಾಸಿ ಸದಾಶಿವ ಕುಂಬಾರ- ಪುಷ್ಪಾ ಕುಂಬಾರ ದಂಪತಿಗಳ ಸುಪುತ್ರನಾದ ರೋಹಿತ್, ಚಿಕ್ಕೋಡಿಯ ಕೆ .ಕೆ .ಇಂಗ್ಲಿಷ್ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.



