ಬಡ ಕುಟುಂಬದಲ್ಲಿ ಜನಿಸಿ,ಹುಟ್ಟು ಅಂಗವಿಕಲನಾದರೂ ಸಾಧಿಸಬೇಕೆಂಬ ಹಂಬಲದಿ೦ದ ಪದವಿ ಶಿಕ್ಷಣ ಮುಗಿಸಿದ ಶಂಕರಪುರ ಪಂಜಿಮಾರ್ ಗಣೇಶ್ ಕುಲಾಲ್ ಅವರಿಗೆ ಶಂಕರಪುರ ಜೆಸಿಐ ವತಿಯಿಂದ ಸಾಧಕ ರತ್ನ’ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಲಾಯಿತು.
ಬಂಟಕಲ್ಲು ಸಮೀಪದ ಪಂಜಿಮಾರು ಆರಕಿನಹಿತ್ಲು ಮನೆಯ ರಾಮ ಮೂಲ್ಯ ಮತ್ತು ನಾಗವೇಣಿ ದಂಪತಿಯ ಆರು ಮಕ್ಕಳ ಪೈಕಿ ನಾಲ್ಕು ಮಕ್ಕಳು ಅಂಗವೈಕಲ್ಯಕ್ಕೆ ತುತ್ತಾಗಿದ್ದು, ಮೂವರಂತು ಸಂಪೂರ್ಣ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ. ಇವರ ಪೈಕಿ ಗಣೇಶ್ ಕುಲಾಲ್ ಮತ್ತು ಈತನ ತಂಗಿ ಸುಮಂಗಲಾ (೧೩) ಶೇ ೧೦೦ರಷ್ಟು ಅಂಗವೈಕಲ್ಯ ಹೊಂದಿದವರು. ಸಾಧಿಸುವ ಛಲಗಾರನಾಗಿರುವ ಗಣೇಶ್ ಅವರ ಬೆನ್ನು ಮತ್ತು ಹೊಟ್ಟೆ ಊನಗೊಂಡು ಒಂದೇ ರೀತಿಯಲ್ಲಿದ್ದು , ಕಾಲಿನ ಸ್ವಾಧೀನ ಸಂಪೂರ್ಣವಲ್ಲದಿದ್ದರೂ ಸ್ವಲ್ಪ ಸಮರ್ಪಕವಾಗಿದೆ . ಬಾಲಕಿ ಸುಮಂಗಲ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿದ್ದು ದೈನಂದಿನ ಎಲ್ಲ ಕಾರ್ಯ ಚಟುವಟಿಕೆಗಳು ಮಲಗಿದ್ದಲ್ಲಿಯೇ ಆಗಿ ಬಿಡುತ್ತದೆ. ತಂದೆ ರಾಮ ಮೂಲ್ಯ ಕೂಲಿ ಕೆಲಸ ಮತ್ತು ತಾಯಿ ಹೂವಿನ ಕೆಲಸ ಮಾಡುತ್ತಾ ಅವರ ಜತೆಗೊಂದಿಷ್ಟು ಬೀಡಿ ಕಟ್ಟಿಕೊಂಡು ಅಂಗವೈಕಲ್ಯಕ್ಕೆ ಗುರಿಯಾಗಿರುವ ಇಬ್ಬರು ಮಕ್ಕಳ ಆರೈಕೆಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ಈ ಮಧ್ಯೆಯೂ ಸಾಧಿಸಬೇಕೆಂಬ ಛಲದಿ೦ದ ಪದವಿ ಶಿಕ್ಷಣ ಮುಗಿಸಿದ ಗಣೇಶ್ ಅವರ ಸಾಧನೆಯನ್ನು ಗುರುತಿಸಿ ಜೆಸಿಐ ವತಿಯಿಂದ ಸಾಧಕ ರತ್ನ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.