ಒಗ್ಗಟ್ಟು ಮತ್ತು ಕಠಿಣ ದುಡಿಮೆಯಿಂದ ಸಂಘಟನೆಯ ಯಶಸ್ಸು ಸಾಧ್ಯ : ಡಾ ಅಣ್ಣಯ್ಯ ಕುಲಾಲ್ ಉಳ್ತೂರು
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ರಾಜ್ಯ ಕುಂಭ ವೈದ್ಯರ ಎರಡನೇ ವರ್ಷದ ಸ್ನೇಹ ಕೂಟವು ತುಮಕೂರಿನ ವಿವಾ ರೆಸಾರ್ಟಿನಲ್ಲಿ ನವೆಂಬರ್ 18ರ ಆದಿತ್ಯವಾರದಂದು ಅದ್ಧೂರಿಯಾಗಿ ನಡೆಯಿತು.
ಕುಂಭ ವೈದ್ಯಕೂಟದ ಪ್ರಧಾನ ಸಂಚಾಲಕರಾದ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಉದ್ಘಾಟನಾ ಭಾಷಣ ಮಾಡಿ, ಯಾವುದೇ ಸಂಘಟನೆಗಳ ಯಶಸ್ಸು ಹಣ, ಅಸ್ತಿ, ಕಟ್ಟಡದ ಮೇಲೆ ನಿಂತಿಲ್ಲ ಅದರ ಯಶಸ್ಸು ನಾಯಕರುಗಳ ಒಗ್ಗಟ್ಟು ಮತ್ತು ಕಠಿಣ ದುಡಿಮೆಯ ಮೇಲೆ ನಿಂತಿದೆ. ಯುವ ವೈದ್ಯರುಗಳಿಗೆ ಮಾಹಿತಿ ಮಾರ್ಗದರ್ಶನ ಮನ್ನಣೆ ದೊರಕಿಸಿಕೊಡಲು ಕುಂಭ ವೈದ್ಯರ ಕೂಟ ಹೆಣಗುತ್ತದೆ ಮತ್ತು ಇಡೀ ಕರ್ನಾಟಕದ ಕುಂಬಾರ ಜನಾಂಗದ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ವೈದ್ಯರುಗಳಾದ ರಾಮಚಂದ್ರ, ತಿಮ್ಮರಾಜು, ಜಯಣ್ಣ , ಬಸವರಾಜ್ ಸಗರ್ ಶುಭ ಕೋರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭ ದಿವಂಗತ ವೈದ್ಯ ಡಾ ಅಂಪಣ್ಣ ರವರ ಸ್ಮಾರಕ ಜೀವ ಮಾನದ ಸಾಧನ ಪ್ರಶಸ್ತಿಯನ್ನು ಹಿರಿಯ ಎಲುಬು ಮತ್ತು ಕೀಲು ತಜ್ಞ ಹಾಗು ವೈದ್ಯಕೀಯ ಶಿಕ್ಷಕ ಡಾ ಬಸವರಾಜ್ ಸಗರ್ ಅವರಿಗೆ ನೀಡಿ ಗೌರವಿಸಲಾಯಿತು.
ವೈದ್ಯರಾಗಿದ್ದುಕೊಂಡು ವೈದ್ಯ ಸಂಘಟನೆ, ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ರಾಜ್ಯ ಮಟ್ಟದಲ್ಲಿ ಜವಾಬ್ದಾರಿಯುತ ಸ್ಥಾನಮಾನ ಪುರಸ್ಕಾರ ಪಡೆದಿರುವ ಪಡೆದಿರುವ Kgmo ವೈದ್ಯಶ್ರೀ ಪ್ರಶಸ್ತಿ ಪಡೆದಿರುವ ಡಾ ಮಹೇಶ್ ಚಾಮರಾಜ್ ನಗರ್, Kgmo ವೈದ್ಯಶ್ರೀ ಪ್ರಶಸ್ತಿ ಜೊತೆ ಸರ್ವಜ್ಞ ಸಮಾಜ ಮುಖೀ ವೈದ್ಯ ಪ್ರಶಸ್ತಿ ವಿಜೇತ ಡಾ ತಿಮ್ಮರಾಜ್ ಶಿರಾ ಹಾಗು ವೈದ್ಯಕೀಯ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ನಾಯಕತ್ವದ ಮೂಲಕ ಕುಂಬಾರ ಸಮುದಾಯಕ್ಕೆ ಹೆಸರು ತಂದ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಸೇರಿದಂತೆ ಕುಂಭ ವೈದ್ಯಕೂಟದ ಸ್ಥಾಪಕ ಸಂಚಾಲಕರುಗಳನ್ನ ಸನ್ಮಾನಿಸಲಾಯಿತು.
150ಕ್ಕೂ ಅಧಿಕ ವೈದ್ಯರು ಭಾಗವಹಿಸಿದ ಸಮಾರಂಭದಲ್ಲಿ ನೃತ್ಯ ಸಂಗೀತ ಗಳ ಮನರಂಜನಾ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಮುಂದಿನ ವರ್ಷದ ಕೂಟವನ್ನು ಚಾಮರಾಜ ನಗರದಲ್ಲಿ ನಡೆಸಲು ತೀರ್ಮಾನಿಸಲಾಯಿತು.