ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೈರಂಪಳ್ಳಿ ಗ್ರಾಮದ ಕುಂಟಾಲಕಟ್ಟೆಯ ಸರಕಾರಿ ಜಾಗದಲ್ಲಿ ಸುಮಾರು 40 ವರ್ಷದಿಂದ ತೀರಾ ಬಡತನದೊಂದಿಗೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ದಾರಮ್ಮ ಹಾಂಡ ಅವರಿಗೆ ಪೆರ್ಡೂರಿನ ಕುಲಾಲ ಸಂಘಟನೆ ಹಾಗು ಬಂಟರ ಸಂಘಟನೆಗಳು ಮುಂದಾಗಿದೆ.
ವೃದ್ಧೆ ದಾರಮ್ಮ ಹಾಂಡ ಅವರ ಒಬ್ಬ ಮಗ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ಇನ್ನೊಬ್ಬ ಮಗನ ದಿನಗೂಲಿ ನೌಕರಿಯಿಂದ ಇವರ ಜೀವನ ಸಾಗಬೇಕು. 40 ವರ್ಷದಿಂದ ಸರಕಾರಿ ಜಾಗದಲ್ಲಿ ವಾಸವಿದ್ದರೂ ಅರಣ್ಯ ಇಲಾಖೆಯ ಆಕ್ಷೇಪ ಇರುವುದರಿಂದ ಜಾಗಕ್ಕೆ ಹಕ್ಕು ಪತ್ರ ಸಿಕ್ಕಿಲ್ಲ. ಅವರ ಗುಡಿಸಲು ತೀರ ಹಳತಾಗಿರುವುದರಿಂದ ಇಂದೋ ,ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಅಸಹಾಯಕತೆಯಿಂದ ದಿಕ್ಕೇ ತೋಚದಿರುವ ಈ ಕುಟುಂಬಕ್ಕೆ ಈಗ ಪೆರ್ಡೂರು ಬಂಟರ ಸಂಘ ಮತ್ತು ಪೆರ್ಡೂರು ಕುಲಾಲ ಸಂಘ ಆಸರೆಯಾಗಿ ನಿಂತಿದೆ.
ಪೆರ್ಡೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ.ಕೆ.ಶೆಟ್ಟಿ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಇವರ ಮುಂದಾಳುತ್ವದಲ್ಲಿ ಎರಡೂ ಸಮಾಜದ ಮುಖಂಡರ ಸಹಕಾರದೊಂದಿಗೆ ನೂತನ ಮನೆ ನಿರ್ಮಾಣದ ಕಾರ್ಯ ಬರದಿಂದ ಸಾಗುತ್ತಿದೆ. ಉದಾರ ದಾನಿಗಳು ಇವರ ಸಹಾಯಕ್ಕೆ ಬರಬಹುದೇ ಎಂಬ ನಿರೀಕ್ಷೆಯಲ್ಲಿದೆ ಈ ಬಡ ಕುಟುಂಬ.