ಮಂಗಳೂರು(ನ.೧೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆ ನಿವಾಸಿ, ಹಿರಿಯ ಜಾನಪದ ಕಲಾವಿದೆ ಶಾರದಾ ಜಿ.ಬಂಗೇರ ಅವರನ್ನು ಸನ್ಮಾನಿಸಲಾಗುವುದು ಎಂದು ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ ಬಿ ಮತ್ತು ಕಾರ್ಯಕ್ರಮದ ಸಂಚಾಲಕ ಎ.ಗೋಪಾಲ ಅಂಚನ್ ತಿಳಿಸಿದ್ದಾರೆ. ನವಂಬರ್ 17ನೇ ತಾರೀಕು ಮಂಗಳೂರಿನ ತುಳು ಸಾಹಿತ್ಯ ಅಕಾಡಮಿ ಕಚೇರಿಯಲ್ಲಿ ಎ.ಸಿ.ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ನ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ ಸನ್ಮಾನ ನೆರವೇರಿಸಲಿದ್ದಾರೆ. ಬಿ.ಮೂಡ ಪಡವಿಪೂರ್ವ ಕಾಲೇಜಿದ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಅಪೂರ್ವ ಜಾನಪದ ಗಾಯಕಿ ಶಾರದಾ ಜಿ.ಬಂಗೇರ
ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು ಅಂತರ ಎಂಬಲ್ಲಿಯ ಚೆನ್ನಪ್ಪ ಮೂಲ್ಯ ಮತ್ತು ಸಂಕಮ್ಮ ದಂಪತಿಯ ನಾಲ್ಕನೇ ಪುತ್ರಿಯಾಗಿ ೧೯೫೨ನೇ ಇಸವಿಯಲ್ಲಿ ಜನಿಸಿದ ಸುಂದರಿ ಯಾನೆ ಶಾರದಾ ಬಂಗೇರ ಅವರು ಸಣ್ಣ ಪ್ರಾಯದಲ್ಲಿಯೇ ಗದ್ದೆ ನಾಟಿ ವೇಳೆ ಹಿರಿಯರು ಹೇಳುತ್ತಿದ್ದ ಪಾಡ್ದನಗಳನ್ನು ಕೇಳುತ್ತಾ ಬೆಳೆದವರು. ಮನೆ ಸಮೀಪದ ಲಿಂಗು ಅಜ್ಜಿ ಅವರ ಕಥೆ, ಕವಿತೆ, ಪಾಡ್ದನಗಳನ್ನು ಕೇಳುತ್ತಾ, ಹಾಡುತ್ತಾ, ಕಲಿಯುತ್ತಾ ಬೆಳೆದ ಇವರು ಹತ್ತು ವರ್ಷ ಪ್ರಾಯದಲ್ಲೇ ಗದ್ದೆ ಕೆಲಸಕ್ಕೆ ಹೋಗಲು ಆರಂಭಿಸಿದ್ದರು. ಈ ಸಂದರ್ಭ ಅಲ್ಲಿ ಓ ಬೇಲೆ, ದಿಮಿಸಾಲೆ, ಆಮೈಲೆ, ಈಜೋ ಮಂಜೊಟ್ಟಿ ಗೋಣ ಎಂಬಿತ್ಯಾದಿ ಜಾನಪದ ಹಾಡುಗಳನ್ನು, ಪಾಡ್ದನಗಳನ್ನು ಹೇಳಲು ಆರಂಭಿಸಿದ್ದರು. ನೆರೆಕೆರೆಯ ಜಾನಕಿ ಅಜ್ಜಿ ಅವರ ಜೊತೆ ಬೇರೆಯವರ ಗದ್ದೆಗಳಲ್ಲಿ ದುಡಿಯಲು ಹೋಗುತ್ತಾ ಕಥೆ, ಕವಿತೆ ಅಲ್ಲದೆ ಬೇರೆ ಬೇರೆ ಪಾಡ್ದನಗಳನ್ನು ಹಾಡುತ್ತಾ ನಾಟಿ ಗದ್ದೆಗಳಲ್ಲಿ ಉಳಿದ ಕೆಲಸಗಾರರಿಗೆ ಹುರುಪು ತುಂಬಿ, ಗದ್ದೆ ಕೆಲಸಕ್ಕೆ ಹೊಸ ರಂಗು ತಂದವರು.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆಯ ಗಂಗಯ್ಯ ಮೂಲ್ಯ ಅವರನ್ನು ೧೯೯೦ರಲ್ಲಿ ವಿವಾಹವಾದ ಶಾರದಾ ಜಿ.ಬಂಗೇರ, ತನ್ನ ಜಾನಪದ ಕಲೆಯನ್ನು ಮುಂದುವರಿಸುವುದರ ಜೊತೆಗೆ ತಮ್ಮ ಊರಿನ ಆರೋಗ್ಯ ಕಾರ್ಯಕರ್ತೆಯರಾದ ಸೀತಮ್ಮ ಮತ್ತು ಚಂದ್ರಮ್ಮ ಇವರೊಂದಿಗೆ ಸೇರಿ ಸಾಮಾಜಿಕ, ಸಹಕಾರಿ, ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಸಾಕ್ಷರತಾ ಅಂದೋಲನದ ಸ್ವಯಂಸೇವಕಿಯಾಗಿ, ೨೨ ವರ್ಷ ಅಂಗನವಾಡಿ ಸಹಾಯಕಿಯಾಗಿ , ಪ್ರತಿಭಾ ಮಹಿಳಾ ಮಂಡಲ, ಕೃಷಿಕರ ವೇದಿಕೆ, ಪರಿಸರಾಸಕ್ತರ ಒಕ್ಕೂಟ, ಯುವಜನ ಒಕ್ಕೂಟ, ಮಹಿಳಾ ಮಂಡಳಿಯ ಒಕ್ಕೂಟ, ಮಣಿನಾಲ್ಕೂರು ಶಾಲಾಭಿವೃದ್ಧಿ ಸಮಿತಿ, ಗುರುವಾಯನಕರೆ ನಾಗರಿಕ ಸೇವಾ ಟ್ರಸ್ಟ್, ಸ್ತ್ರೀಶಕ್ತಿ ಸಂಘಟನೆ, ಮಹಿಳಾ ಸಹಕಾರಿ ಸಂಘ, ತುಳುಕೂಟ ಬಂಟ್ವಾಳ ಎಂಬಿತ್ಯಾದಿ ಸಂಘಟನೆಗಳಲ್ಲಿ ಬೇರೆ ಬೇರೆ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರು.
ಶಾಲಾ ಕಾಲೇಜಿಗಳಲ್ಲಿ ಅಲ್ಲದೆ ವಿವಿಧ ಸಂಘಟನೆಗಳಲ್ಲಿ ಆಸಕ್ತರಿಗೆ ಸಂದಿ, ಪಾರ್ದನ, ಓಬೇಲೆ, ಉರಲ್ ಎಂಬಿತ್ಯಾದಿ ಜಾನಪದ ಹಾಡುಗಳನ್ನು ಕಲಿಸುತ್ತಾ ಈ ಕಲೆಯ ಅಭಿರುಚಿಯನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಶಾರದಾ .ಜಿ.ಬಂಗೇರ ತುಳು ಜಾನಪದ ಮೌಖಿಕ ಸಾಹಿತ್ಯದ ಉಳಿಕೆಗಾಗಿ ಮತ್ತು ಬೆಳವಣಿಗೆಗಾಗಿ ಹಗಲಿರುಳು ದುಡಿದವರು.
ಪರಿಸರ ಸಮ್ಮೇಳನ, ತುಳು ಒಕ್ಕೂಟದ ಕಾರ್ಯಕ್ರಮ, ಮಂಗಳೂರು ಆಕಾಶವಾಣಿ, ಸಾರಂಗ ರೇಡಿಯೋ, ನಮ್ಮ ಟಿ.ವಿ, ಬೆಳ್ತಂಗಡಿ ವಕೀಲರ ಸಾಹಿತ್ಯ ಕಮ್ಮಟ, ಉಜಿರೆ ವಿಶ್ವ ತುಳು ಸಮ್ಮೇಳನ, ಬಂಟ್ವಾಳ ತುಳು ಸಾಹಿತ್ಯ ಸಮ್ಮೇಳನ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ, ಅಂಗನವಾಡಿ ಕಾರ್ಯಕರ್ತರ ಸಮಾವೇಷ ಹೀಗೆ ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಅವೆಷ್ಟೋ ಕೂಟಗಳಲ್ಲಿ ತನ್ನ ಜಾನಪದ ಹಾಡುಗಳನ್ನು ಹಾಡಿ ಜನಮೆಚ್ಚುಗೆ ಗಳಿಸಿದ್ದಾರೆ.