ಮಂಗಳೂರಿನ ದಸರಾ ಸಂಭ್ರಮಕ್ಕೂ ಹುಲಿಗಳ ಘರ್ಜನೆಗೂ ಅವಿನಾಭಾವ ಸಂಬಂಧ. ತಾಸೆಯವರ ಕಿವಿಗಡಚಿಕ್ಕುವ ಆರ್ಭಟದ ನಾದಕ್ಕೆ ಸರಿಯಾಗಿ ಹುಲಿಗಳು ಹೆಜ್ಜೆ ಇಟ್ಟರೆ ಹದಿಹರೆಯದವರಿಂದ ಹಿಡಿದು ಮುದಿಹರೆಯದವರಿಗೂ ರೋಮಾಂಚನ, ಖುಷಿ.
ನವರಾತ್ರಿಯ ಹೊತ್ತಿನಲ್ಲಿ ಹುಲಿ ವೇಷ ಹಾಕಿ ರಸ್ತೆಗಿಳಿಯುವುದೆಂದರೆ `ಕುಡ್ಲದ ಹೈಕಳಿಗೆ, ಚಿಗುರು ಮೀಸೆಯ ಜವ್ವನರಿಗೆ ಅದೇನೊ ಹುರುಪು, ಅದೇನೊ ಕೆಚ್ಚು. ಹುಲಿವೇಷಗಳ ಬಗ್ಗೆ ಸಂಪ್ರದಾಯ, ಹಿನ್ನೆಲೆ ಇದೆ. ಜನಸಾಮಾನ್ಯರಿಗೆ ಭಯ – ಭಕ್ತಿ, ಅಭಿಮಾನ ಇದೆ. ವೇಷದ ಹುಲಿಗಳಲ್ಲಿ ದೈವಿಕಶಕ್ತಿಯಿದೆಯೆಂಬ ನಂಬಿಕೆಯಿರುತ್ತದೆ. ನಂಬಿಕೆ ಏನೆ ಇದ್ದರೂ ಚಿಕ್ಕಮಕ್ಕಳಿಂದ ಹಿಡಿದು ಹಳಬರ ತನಕ ಹುಲಿವೇಷ ನೋಡುವುದೆಂದರೆ ಅದೊಂದು ಮಜಾ. ಹಾಗಾಗಿಯೇ ನವರಾತ್ರಿಯ ಹೊತ್ತಿನಲ್ಲಿ ಹಲವು ಹುಲಿಗಳ ತಂಡ ಕುಡ್ಲದ ರಸ್ತೆಗಿಳಿಯುತ್ತವೆ. ಮೆರವಣಿಗೆಗೆ ರಂಗು ಮೂಡಿಸುತ್ತವೆ. ಮಂಗಳೂರಿನಲ್ಲಿ ವರ್ಷ ವರ್ಷವೂ ಹುಲಿ ವೇಷ ಹಾಕುವವರ ಸಂಖ್ಯೆ ಏರುತ್ತಿದೆ. ಹುಲಿ ತಂಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಗೋರಕ್ಷ ದಂಡು, ಎಂಜಿಟಿ, ರಾಜಲಕ್ಷ್ಮಿ, ಎಂಎಫ್ಸಿ, ಜೈನ್ ಫ್ರೆಂಡ್ಸ್, ಗೆಳೆಯರ ಬಳಗ ಹೀಗೆ ಆಯಾಯ ಪ್ರದೇಶದ ಹುಲಿ ವೇಷದ ತಂಡಗಳು ಮಂಗಳೂರಿನಲ್ಲಿ ಸಾಕಷ್ಟು ಇವೆ. ಒಂದು ಅಂದಾಜಿನ ಪ್ರಕಾರ ಕರಾವಳಿಯಲ್ಲಿ 50ಕ್ಕೂ ಮಿಕ್ಕಿ ಹುಲಿ ವೇಷದ ತಂಡಗಳಿವೆಯಂತೆ!
ಅಂಥ ಹುಲಿಗಳ ತಂಡಗಳಲ್ಲಿ ಸಾಕಷ್ಟು ಹೆಸರು ಮಾಡಿತ್ತಿರುವುದು ಬರ್ಕೆ ಫ್ರೆಂಡ್ಸ್ ತಂಡ. ಈ ಕ್ಯಾಂಪ್ನ ಗುರಿಕಾರನೇ ಈ ಯಜ್ಞೇಶ್ವರ ಕುಲಾಲ್. ಈ ಹೆಸರು ಕೇಳಿದರೆ ನಿಮಗೆ ಇದ್ಯಾರು ಎಂದು ಥಟ್ಟನೆ ಗೊತ್ತಾಗದು ಆದರೆ `ಬರ್ಕೆ ಯದ್ದು’ ಎಂದರೆ ಕೆಲವರ ಕಿವಿ ನೆಟ್ಟಗಾಗಬಹುದು. ಹೌದು.. ಒಂದು ಕಾಲದಲ್ಲಿ ಮಂಗಳೂರನ್ನು ಬೆಚ್ಚಿ ಬೀಳಿಸಿದ ರೌಡಿ.
`ನಾನು ಒಂದು ಕಾಲದಲ್ಲಿ ರೌಡಿಯಾಗಿದ್ದೆ ನಿಜ. ಆದರೆ ನನ್ನನ್ನು ರೌಡಿ ಯನ್ನಾಗಿ ಮಾಡಿದ್ದು ಇದೇ ಸಮಾಜ ಹಾಗೂ ಭ್ರಷ್ಟ ಪೊಲೀಸ್ ಇಲಾಖೆ. ನಾನು ಕಳೆದ ೧೫ ವರ್ಷಗಳ ಹಿಂದೆ ಎಲ್ಲವನ್ನೂ ತ್ಯಜಿಸಿ ಹೊಸ ಜೀವನ ಆರಂಭ ಮಾಡಿದ್ದೇನೆ’ ಎನ್ನುವ ಯದ್ದು (ಯಜ್ಞೇಶ್) ಇಂದು ಒಬ್ಬ ಯಶಸ್ವೀ ಉದ್ಯಮಿ, ಸಮಾಜ ಸೇವಕರಾಗಿದ್ದಾರೆ.
ಕರಾವಳಿಯಲ್ಲಿ ತನ್ನದೇ ಗತ್ತು ಗೈರತ್ತು ಇಟ್ಟುಕೊಂಡಿರುವ ಹುಲಿವೇಷಧಾರಿಗಳಲ್ಲಿ ಬರ್ಕೆ ಫ್ರೆಂಡ್ಸ್ ತಂಡವೂ ಒಂದು. ಕಳೆದ ಇಪ್ಪತ್ತು ವರ್ಷ ಗಳಿಂದ ನಿರಂತರವಾಗಿ ತನ್ನದೇ ವಿಶಿಷ್ಟ ಹಾವಭಾವ, ವೇಷಭೂಷಣ ಗಳಲ್ಲಿ ಮಿಂಚುವ ತಂಡ ಬರ್ಕೆ ಯದ್ದು ಉಸ್ತುವಾರಿಯಲ್ಲಿ ತಂಡ ಪ್ರದರ್ಶನ ನೀಡುತ್ತವೆ. ನವರಾತ್ರಿ ದಿನಗಳಲ್ಲಿ ಕಾಣಿಸಿಕೊಳ್ಳುವ ಈ ತಂಡ, ಮುಖ್ಯವಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮೂರನೇ ಮರ್ಯಾದೆ ಹೊಂದಿದೆ. ಈ ತಂಡದಲ್ಲಿ ಚಿಕ್ಕ ಹುಲಿ, ಸಣ್ಣ ಹುಲಿ, ದೊಡ್ಡ ಹುಲಿಯಿಂದ ಹಿಡಿದು ಮಲ್ಲ ಪಿಲಿ( ಅಟ್ಟೆ ಪಿಲಿ, ಚಿಟ್ಟೆ ಪಿಲಿ, ಮಂಡೆ ಪಿಲಿ) ತನಕ ಎಲ್ಲವೂ ಇವೆ. ಆರಂಭದ ವರ್ಷದಲ್ಲಿ ಹತ್ತಾರು ಮಂದಿ ತಂಡದಲ್ಲಿದ್ದರೆ, ಈಗ ಸುಮಾರು ನೂರು ಮಂದಿ ವಯಸ್ಸಿನ ಅಂತರವಿಲ್ಲದೆ ಕುಣಿಯುತ್ತಾರೆ. ಕೆಲವೇ ಕೆಲವು ಮನೆಗಳ ಮುಂದೆ ಕುಣಿಯುವ ಈ ತಂಡಕ್ಕೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿಯೇ ಉಡುಪಿಯ ಕಿಶೋರ್ ಎಂಬವರ ಸಾರಥ್ಯದಲ್ಲಿ ಹುಲಿ ಕುಣಿತದ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವೇಷ ಹಾಕಿದ ಪ್ರತಿಯೊಂದು ವ್ಯಕ್ತಿಯ ವೇಷ ಭೂಷನಕ್ಕೆ ಐದಾರು ಸಾವಿರ ಹಣ ಖರ್ಚು ಮಾಡಲಾಗುತ್ತದೆ.
ಹುಲಿ ವೇಷ ಕುಣಿತ ನೋಡುವುದು, ಕುಣಿಸುವುದು, ತಂಡಗಳನ್ನು ಪ್ರೋತ್ಸಾಹಿಸುವುದು ಒಂದು ಕ್ರೇಜ್ ಎನ್ನುತ್ತಾರೆ ಬರ್ಕೆ ಯದ್ದು. ಮಂಗಳೂರಿನಲ್ಲಿ ಹುಲಿ ವೇಷ ತಂಡಗಳನ್ನು ಕುಣಿಸುವುದು ಒಂದು ತರದ ಹುಚ್ಚುತನಕ್ಕಿಂತಲೂ ಪ್ರತಿಷ್ಠೆಯ ವಿಷಯವಾಗಿದೆ. ತಮ್ಮ ಮನೆ ಎದುರು, ವ್ಯಾಪಾರ ಮಳಿಗೆ, ಹೋಟೇಲು ಎದುರು ಯಾವ ತಂಡ ಎಷ್ಟು ಬಂದು ಕುಣಿದವು ಎಂಬುದು ಪ್ರತಿಷ್ಠೆ. ಕೆಲವು ಮಂದಿ ಉದ್ಯಮಿಗಳು ಲಕ್ಷ ಮೊತ್ತದಲ್ಲಿ ನಗದು ಬಹುಮಾನ ನೀಡುತ್ತಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ತೆರಳುವ ತಂಡಗಳಿಗೆ ಕೂಡ ಇದೇ ರೀತಿ ದೊಡ್ಡ ಮೊತ್ತ ಇನಾಮು ಕಾದಿರುತ್ತದೆ.