ಸಾಗರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪ್ರಸಿದ್ದ ಯುವ ಕಥೆಗಾರ ಮಂಜುನಾಥ ಹಿಲಿಯಾಣ ಅವರಿಗೆ ಸಾಗರದ ಸೇವಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ಜರುಗಿದ ಸಮಾರಂಭದಲ್ಲಿ ರಾಜ್ಯಮಟ್ಟದ ಸಂಪದ ಸಾಲು ಕಥಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶಿವಮೊಗ್ಗದ `ಸಂಪದ ಸಾಲು’ ಪತ್ರಿಕೆ ನಡೆಸಿದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಮಂಜುನಾಥ ಅವರು ಬರೆದ ‘ಸೀತಾ ಪ್ರಲಾಪ’ ಎಂಬ ಕಥೆ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿತ್ತು
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡಿನ ಖ್ಯಾತ ಸಾಹಿತಿ ಡಾ. ನಾ. ಡಿಸೋಜ, ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆಗಳ ನಿರ್ದೇಶಕ ಸತೀಶ್ ಎಸ್ ಹೊಸಮನಿ, ಸಂಪಾದಕ ವೆಂಕಟೇಶ್ ಎಸ್. ಸಂಪ. ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಶತಮಾನದ ಹಿಂದಿನ ಕಾಲಘಟ್ಟದ ಜನಜೀವನ, ಸಾಂಸ್ಕ್ರತಿಕ, ಜಾನಪದೀಯ ಸೊಗಡನ್ನು ಕಥೆಯಲ್ಲಿ ಅನಾವರಣಗೊಳಿಸಿ, ಸಾಮಾಜಿಕ ಸಂದೇಶ ಸಾರುವ ಕಥೆಗಳನ್ನು ಕಟ್ಟುವಲ್ಲಿ ಮಂಜುನಾಥ ಅವರು ಪ್ರಸಿದ್ಧರು. ಹಿಲಿಯಾಣರು ಉತ್ತಮ ವಾಗ್ಮಿಯಾದರಿಂದ, ದಿಕ್ಸೂಚಿ ಭಾಷಣಗಾರ, ಸಂಪನ್ಮೂಲ ವ್ಯಕ್ತಿಯಾಗಿಯೂ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಸಾಕ್ಷ್ಯಚಿತ್ರ, ಧಾರ್ಮಿಕ ಕ್ಷೇತ್ರಗಳ ಪರಿಚಯದ ಅಡಕ ಮುದ್ರಿಕೆಗಳಲ್ಲಿ ಕಂಠದಾನ ಮಾಡಿದ್ದಾರೆ. ಇವರು ಸಭಾ ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸುವ ನಿರೂಪಕರು ಆಗಿದ್ದಾರೆ. ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಲು ಇವರಿಗೆ ಬಲು ಬೇಡಿಕೆ ಇದೆ. ಅದರಲ್ಲೂ ಮಂಜುನಾಥ ಅವರು ಹೊಸ ತಲೆಮಾರಿನ ಕಥೆಗಾರರಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರ ಐವತ್ತಕ್ಕೂ ಅಧಿಕ ಕಥೆಗಳು ಕನ್ನಡದ ಪ್ರಸಿದ್ದ ವಾರಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಾಹಿತ್ಯಪೂರ್ಣ ಸೊಗಡಿನ ಭಾಷೆ, ಹಳ್ಳಿ ಬದುಕಿನ ಅಪರೂಪದ ಪಾತ್ರಗಳನ್ನು ಕಥೆಯಲ್ಲಿ ಕಟ್ಟುವಲ್ಲಿ ಹಿಲಿಯಾಣರು ಸಿದ್ಧಹಸ್ತರು. ಇವರ ಲೇಖನಿಯಿಂದ ಮೂಡಿಬಂದ ಅಣ್ಣು, ಪಾತ್ರಿ, ಸೀತಾ ಪ್ರಲಾಪ, ಪಾರೋತಿ, ಮಣ್ಣಿನ ಅಳಿಗೆ, ಪಾಠ, ವಿಪರ್ಯಾಸ ಇನ್ನಿತರ ಕತೆಗಳ ಕಥಾಸಾರ ಓದುಗರ ಮನದಲ್ಲಿ ನೆನಪಿನ ಚಿತ್ತಾರದಲ್ಲಿ ಅಳಿಯದಂತೆ ಉಳಿದುಕೊಂಡಿದೆ. ಇವರ ವಿರಚಿತ ಹಲವಾರು ಕಥೆಗಳಿಗೆ ರಾಜ್ಯಮಟ್ಟದ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳು ಲಭಿಸಿವೆ. ಅದರಲ್ಲಿ ‘ಅಣ್ಣು’ ಕಥೆ ಅವಿಭಜಿತ ದ.ಕ. ಜಿಲ್ಲಾಮಟ್ಟದ ಪುಟ್ಟಣ್ಣ ಕುಲಾಲ್ ಯುವ-ಕತೆಗಾರ” ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮುಂಬೈಯ ಮೊಗವೀರ ಮಾಸಪತ್ರಿಕೆ ನೆಡೆಸಿದ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ “ಪಾತ್ರಿ” ಕತೆಗೆ ಅತ್ಯುತ್ತಮ ಬಹುಮಾನ ಲಭಿಸಿದೆ. ಸಾಹಿತ್ಯ ಅಭಿರುಚಿಯ ಸಂಘ ಸಂಸ್ಥೆಗಳು ನಡೆಸುವ ಕಥಾಗೋಷ್ಠಿಗಳಲ್ಲಿ ಅವಕಾಶ ಪಡೆದು, ಹಿಲಿಯಾಣರು ತಮ್ಮ ಸ್ವರಚಿತ ಕಥೆಗಳನ್ನು ವಾಚನ ಮಾಡಿದ್ದಾರೆ. ಅಲ್ಲದೆ ಸಮುದಾಯ ಬಾನುಲಿ, ಆಕಾಶವಾಣಿಗಳಲ್ಲೂ ಕಥಾ ವಾಚನ ಪ್ರಸ್ತುತಿ ಪಡಿಸಿದ್ದಾರೆ.
ಹುಟ್ಟೂರು ಹಿಲಿಯಾಣ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿಪೂರ್ವ ಕಾಲೇಜು ಗೋಳಿಯಂಗಡಿಯಲ್ಲಿ ಹೈಸ್ಕೂಲು ಮತ್ತು ಪಿಯುಸಿ ಶಿಕ್ಷಣ. ಕುಂದಾಪುರದ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ. ಮೈಸೂರು ಮುಕ್ತ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವ ಮುಗಿಸಿರುವ ಮಂಜುನಾಥ್ ಪ್ರಸ್ತುತ ಮಣಿಪಾಲದ ಮಾಹೆಯಲ್ಲಿ ಕಾರ್ಯನಿರ್ವಹಿಸುವ ಸಮುದಾಯ ಬಾನುಲಿಯಲ್ಲಿ ಉದ್ಯೋಗಿಯಾಗಿ ವೃತ್ತಿ ಬದುಕು ಸಾಗಿಸುತ್ತಿದ್ದಾರೆ.