ಸಂಗೀತ-ನೃತ್ಯದಲ್ಲೂ ಮೋಡಿ ಮಾಡುವ ಪ್ರತಿಭಾವಂತೆ
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಿನಿಮಾ ಪರದೆ ಮೇಲೆ ‘ತಾಯಿ’ಯ ಪಾತ್ರ ಮಾಡುವುದು ಭಾವನಾತ್ಮಕವಾಗಿ ಪ್ರೇಕ್ಷಕನನ್ನು ಕಲಕುವ ಮತ್ತು ತಲುಪುವ ದೊಡ್ಡ ಜವಾಬ್ದಾರಿ ಇರುತ್ತದೆ. ಹಿಂದೆಲ್ಲಾ ಸಿನಿಮಾಗಳಲ್ಲಿ ತಾಯಿ ಪಾತ್ರಕ್ಕೆ ವಯಸ್ಸಿನಲ್ಲಿ ಮಾಗಿದ ನಟಿಯರೇ ಆಗಬೇಕು ಎಂಬ ನಿಯಮವಿತ್ತು. ಆದರೆ ಈಗ ಹಾಗಿಲ್ಲ. ಹೆಚ್ಚು ವಯಸ್ಸಾಗದ ನಟಿಯರೇ ತಾಯಿಯ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಅಂಥ ನಟಿಯರಲ್ಲಿ ತುಳು-ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಕವಿತಾ ದಿನಕರ್ ಕೂಡಾ ಒಬ್ಬರು. ಸಿನಿಮಾಗಳಲ್ಲಿ ತಾಯಿಯ ಪಾತ್ರಕ್ಕೆ ಒಗ್ಗುವ ಕವಿತಾ ಮೂಲತಃ ಬೆಳ್ತಂಗಡಿಯ ಪೂಂಜಾಲಕಟ್ಟೆಯವರು. ಪ್ರಸ್ತುತ ಪುತ್ತೂರಿನ ಪಡೀಲ್ ನಲ್ಲಿ ನೆಲೆಸಿದ್ದಾರೆ. ಕವಿತಾ ಅವರು ಇದುವರೆಗೂ ಒಂಭತ್ತಕ್ಕೂ ಹೆಚ್ಚು ತುಳು-ಕನ್ನಡ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಸದ್ಯ`ಎನ್ನ’ ಎಂಬ ಚಿತ್ರದಲ್ಲಿ ಹೀರೋಯಿನ್ ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ`ಪವಿತ್ರ (ಬೀಡಿದ ಪೊಣ್ಣು)’ ಎಂಬ ತುಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆಗೈದ ಕವಿತಾರಿಗೆ ಆ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಸುಳ್ಳಲ್ಲ. ಆ ಚಿತ್ರ ಶತದಿನಗಳನ್ನು ಪೂರೈಸಿದ್ದು ಹೋದಲ್ಲೆಲ್ಲಾ ಜನ ಗುರುತಿಸಲು ಆರಂಭಿಸುವ ಮೂಲಕ ಕವಿತಾ ಖುಷಿ ಖುಷಿಯಾಗಿ ಓಡಾಡುತ್ತಿದ್ದಾರೆ. `ದಬಕ್ ದಬಾ ಐಸಾ’ `ಪಿಲಿ ಬೈಲ್ ಯಮುನಕ್ಕ’ ಅವರಿಗೆ ಉತ್ತಮ ಐಡೆಂಟಿಟಿ ತಂದುಕೊಟ್ಟವು. ಅಲ್ಲದೆ ಒಂದರ ಹಿಂದೆ ಒಂದು ಎನ್ನುವಂತೆ ಹೊಸ ಹೊಸ ಅವಕಾಶಗಳನ್ನು ಕೊಡಿಸಿದವು.
ಸಿನಿಮಾದಿಂದಲೇ ನಟನೆ ವೃತ್ತಿ ಆರಂಭಿಸಿರುವ ಕವಿತಾ ಅವರು `ಪವಿತ್ರ’, `ದಬಕ್ ದಬಾ ಐಸಾ’, `ಡೊಂಬರಾಟ’, `ಚಾಪ್ಟರ್’, `ಪಿಲಿ ಬೈಲ್ ಯಮುನಕ್ಕ’,` ಆಯೆ ಯೇರ್?’, `ಕೋರಿ ರೊಟ್ಟಿ’ ಮುಂತಾದ ತುಳು ಚಿತ್ರಗಳಲ್ಲಿ , `ಆಧಾರ’, `ಅರುನಾಶ್ವ’ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಕವಿತಾ ದಿನಕರ್ ಗೆ ಸಿಕ್ಕಿದ್ದು ಬಹುಪಾಲು ತಾಯಿಯ ರೋಲುಗಳೇ.
ಯಾವ ತರಹದ ಪಾತ್ರ ಇಷ್ಟ ಎಂದು ಇವರಲ್ಲಿ ನೀವು ಕೇಳಿದರೆ ಎಲ್ಲಾ ನಟಿಯರಂತೆ, ಜನ ಗುರುತಿಸುವಂತಹ ಚಾಲೆಂಜಿಂಗ್ ಆದ ಪಾತ್ರ ನನಗೆ ತುಂಬಾ ಇಷ್ಟ ಎಂಬ ಉತ್ತರ ಬರುತ್ತದೆ. ಇಂಥದ್ದೇ ಪಾತ್ರ ಮಾಡಬೇಕು ಎಂದು ಎಂದಿಗೂ ಅಂದುಕೊಂಡಿಲ್ಲ. ಆದರೆ, ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುವುದರತ್ತ ಗಮನ ಕೊಟ್ಟಿದ್ದೇನೆ. ಪಾಲಿಗೆ ಬಂದ ಪಾತ್ರಗಳಿಗೆ ಜೀವ ತುಂಬುವುದಷ್ಟೇ ನನ್ನ ಕೆಲಸ’ ಎಂಬ ವಿನಮ್ರ ನುಡಿ ಅವರದು. ಒಳ್ಳೆಯ ಸಿನಿಮಾದ ಜೊತೆಗೆ ವಿಭಿನ್ನವಾದ ಪಾತ್ರ ಸಿಗಬೇಕೆಂಬ ಆಸೆ ಕವಿತಾರಿಗೂ ಇದೆ. ಹಾಗಂತ ಅದೇ ಬೇಕು ಇದೇ ಬೇಕು ಎನ್ನುತ್ತಾ ಕೂರುವುದಿಲ್ಲ. ತನಗೆ ಇಷ್ಟವಾದ ಪಾತ್ರವಾದರೆ ಸಾಕು ಎನ್ನುತ್ತಾರೆ. “ನನಗೆ ಒಳ್ಳೆಯ ಪಾತ್ರ ಮುಖ್ಯ. ತೆರೆಮೇಲೆ ಹತ್ತು ನಿಮಿಷ ಬಂದು ಹೋದರೂ ಜನ ಅದನ್ನು ಗುರುತಿಸುವಂತಿರಬೇಕು” ಎನ್ನುವುದು ಅವರ ನಿಲುವು.
ನಟನೆ, ಡ್ಯಾನ್ಸ್, ಹಾಡು ಎಲ್ಲಕ್ಕೂ ಸೈ:
ಕವಿತಾ ದಿನಕರ್ ಕೇವಲ ಅಭಿನಯಕ್ಕೆ ಮಾತ್ರ ಸೀಮಿತವಾಗಿಲ್ಲ ಮ್ಯೂಸಿಕ್ ಹಾಕಿದ್ರೆ ಸಖತ್ ಸ್ಟೆಪ್ಸ್ ಹಾಕಿ ಡ್ಯಾನ್ಸ್ಗೂ ಸೈ ಎನ್ನುತ್ತಾರೆ. ಅಷ್ಟೇ ಅಲ್ಲ ತನ್ನ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ, ಜನರ ಕಿವಿಗಳಿಗೆ ಇಂಪನ್ನು ನೀಡಬಲ್ಲ ಒಬ್ಬ ಬಹುಮುಖ ಪ್ರತಿಭೆ. ಶಾಲಾ ದಿನಗಳಲ್ಲೇ ಹಾಡುಗಾರಿಕೆ ಮತ್ತು ಡ್ಯಾನ್ಸ್ ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಕವಿತಾ ಸುಗಮ ಸಂಗೀತ ಗಾಯಕಿ ಮತ್ತು ಸಂಗೀತ ಶಿಕ್ಷಕಿಯಾಗಿದ್ದಾರೆ. ತಮ್ಮ ಕುಟುಂಬದಿಂದಲೇ ಸ್ಫೂರ್ತಿ ಪಡೆದುಕೊಂಡು ಕಲಾಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಕವಿತಾ ಅವರು ತನ್ನ ಬಿಡುವಿನ ಸಮಯದಲ್ಲಿ ಸಂಗೀತ ತರಗತಿಯನ್ನು ಪ್ರಾರಂಭಿಸಿ ತನ್ನ ಕಲೆಯನ್ನು ಇತರರಿಗೂ ಧಾರೆ ಎರೆದು ಕೊಡುತ್ತಿದ್ದಾರೆ. ಮಹಿಳಾ ತಂಡ ಸೇರಿ ಇವರು ಭಜನಾ ಕಾರ್ಯಕ್ರಮ ಮಾಡುತ್ತಾರೆ.
“ನಾನು ಮೊದಲಿಗೆ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ಭಜನಾ ತಂಡದ ಸದಸ್ಯೆಯಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದೆ. ಆ ಭಜನಾ ತಂಡ ಸೇರಿದ ಬಳಿಕವೇ ನನ್ನ ವೃತ್ತಿ ಬದುಕಿಗೊಂದು ಹೊಸ ತಿರುವು ಸಿಕ್ಕಿತು” ಎಂದು ಈಶನ ಕೃಪೆಯನ್ನು ಮರೆಯದೇ ನೆನಪಿಸಿಕೊಳ್ಳುವ ಕವಿತಾ, ಸ್ವಂತವಾಗಿ `ವಿನಾಯಕ ಆರ್ಕೆಸ್ಟ್ರಾ’ ಎಂಬ ತಂಡವನ್ನು ಕಟ್ಟಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಗಳಿಸಿದ್ದಾರೆ. ಅಲ್ಲದೇ ಇತರ ತಂಡಗಳಲ್ಲೂ ತಮ್ಮ ಸ್ವರ ಮಾಧುರ್ಯದ ಕಂಪು ನೀಡುತ್ತಿದ್ದಾರೆ. ನಟನೆ, ಸಂಗೀತ, ನೃತ್ಯ ಹೀಗೆ ಹತ್ತು ಹಲವು ಪ್ರತಿಭೆಗಳಿಗೆ ಸಾಕ್ಷಿಯಾಗಿ ತನ್ನ ನೈಪುಣ್ಯತೆಯನ್ನು ತೋರಿಸಿ ಮಿಂಚುತ್ತಿರುವ ಕವಿತಾರಿಗೆ ಶುಭ ಹಾರೈಸುತ್ತಾ ಅವರಿಂದ ಇನ್ನಷ್ಟು ಕಲಾಸೇವೆಯನ್ನು ನಿರೀಕ್ಷಿಸೋಣ.
ಸುಖೀ ಸಂಸಾರ :
ಕುಲಾಲ ಸಮುದಾಯದ ಕವಿತಾ ಅವರ ಹುಟ್ಟೂರು ಮಂಗಳೂರು ತಾಲೂಕಿನ ಗುರುಪುರ. ತಂದೆ ತುಕಾರಾಮ್, ತಾಯಿ ಜಯಂತಿ. ವಿವಾಹ ಮಾಡಿಕೊಟ್ಟಿದ್ದು ಪುಂಜಾಲಕಟ್ಟೆಯ ಅನಿಲಡೆ ಮನೆಗೆ. ಪತಿ ದಿನಕರ್ ಉದ್ಯಮಿ. ಕಾಲೇಜು ಓದುತ್ತಿರುವ ಶಶಾಂಕ್ ಹಾಗೂ ನೇಹಾ ಎಂಬ ಇಬ್ಬರು ಮಕ್ಕಳಿರುವ ಚಿಕ್ಕ ಚೊಕ್ಕ ಸುಖೀ ಸಂಸಾರ ಕವಿತಾ ಅವರದ್ದು.
ಬರಹ : ಡಿ. ಬಿ. ಇರ್ವತ್ತೂರು