ಮೂಡಬಿದ್ರೆ(ಅ,೧೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅದೊಂದು ಕೂಲಿ ನಾಲಿ ಮಾಡುತ್ತಾ ಬದುಕುತ್ತಿದ್ದ ಸುಖಿ ಸಂಸಾರ. ಒಂದು ದಿನ ದುಡಿಮೆ ಮಾಡದಿದ್ದರೆ ಮನೆಯಲ್ಲಿ ಊಟಕ್ಕೆ ಗತಿಯಿಲ್ಲದ ಪರಿಸ್ಥಿತಿ. ಇಂಥ ಕಡು ಬಡತನದ ಬೇಗೆಯಲ್ಲಿ ಬೇಯುತ್ತಿರುವಾಗಲೇ ಸಂಸಾರಕ್ಕೆ ಮತ್ತೊಂದು ಆಘಾತ. ಇದ್ದದ್ದರಲ್ಲೇ ಸುಖ ಪಡುತ್ತಾ, ದುಡಿದಿದ್ದನ್ನ ಹಂಚಿ ತಿನ್ನುತ್ತಾ ಉತ್ಸಾಹದ ಚಿಲುಮೆಯಂತಿದ್ದ ಮನೆಯೊಡತಿಗೆ ಕಿಡ್ನಿ ವೈಫಲ್ಯವೆಂಬ ಮಾರಣಾಂತಿಕ ಕಾಯಿಲೆ ಬಾಧಿಸಿದ್ದು, ಚಿಕಿತ್ಸೆಗೆ ದುಡ್ಡಿಲ್ಲದೇ ಇಡೀ ಸಂಸಾರ ದಿನ ಬೆಳಗಾದರೆ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ.
ಇದು ಮೂತ್ರಪಿಂಡ ನಿಷ್ಕ್ರೀಯತೆಯಿಂದ ಯಮಯಾತನೆ ಅನುಭವಿಸುತ್ತಿರುವ ಮೂಡಬಿದಿರೆ ಪುತ್ತಿಗೆ ಪದವು ನಿವಾಸಿ ಚಂದು ಯಾನೆ ಚಂದ್ರಶೇಖರ ಮೂಲ್ಯ ಅವರ ಪತ್ನಿ ರಕ್ಷಿತಾ (24 ವರ್ಷ) ಅವರ ಕಣ್ಣೀರಿನ ಕಥೆ.
ತನ್ನ ಪತಿಯೊಂದಿಗೆ ತಾನೂ ಕೂಲಿ ಕೆಲಸ ಮಾಡುತ್ತಾ, ಮನೆವಾರ್ತೆ ನೋಡಿಕೊಳ್ಳುತ್ತಾ ನ್ಯಾಯವಾಗಿ ದುಡಿದು ತನ್ನದೇ ಆದ ಸುಂದರ ಭವಿಷ್ಯ ಕಟ್ಟಿಕೊಳ್ಳಬೇಕು ಎಂಬ ಕನಸು ಕಾಣುತ್ತಿದ್ದ ರಕ್ಷಿತಾ ಅವರಿಗೆ ಐದು ತಿಂಗಳೀಚೆ ಆರೋಗ್ಯ ಸಮಸ್ಯೆ ತೀವ್ರವಾಗಿ ಬಾಧಿಸಿತು. ತನ್ನ ಎರಡೂ ಕಾಲಿನಲ್ಲಿ ಊತ ಕಾಣಿಸಿಕೊಂಡು ನಡೆಯಲಾರದ ಸ್ಥಿತಿ ಉಂಟಾಯಿತು. ವೈದ್ಯರಲ್ಲಿ ತೆರಳಿ ಪರೀಕ್ಷಿಸಿದಾಗ ಈಕೆಯ ಕಿಡ್ನಿಯಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದ್ದು, ಇದರಿಂದ ಎರಡೂ ಕಿಡ್ನಿ ವಿಫಲಗೊಂಡಿದೆ ಎಂದು ತಿಳಿದು ಬಂದಿತ್ತು. ಇದು ಗೊತ್ತಾದ ಬಳಿಕ ಈ ಕುಟುಂಬ ದಿಕ್ಕೆಟ್ಟು ಕುಳಿತಿದೆ.
ಐದು ತಿಂಗಳ ಹಿಂದೆ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ,ಇದಕ್ಕಾಗಿ ಕಷ್ಟಪಟ್ಟು ಕೂಡಿಟ್ಟ ಹಣವಲ್ಲದೆ ಸಾಲಸೋಲ ಮಾಡಿ ಎರಡೂವರೆ ಲಕ್ಷಕ್ಕೂ ಹೆಚ್ಚು ಖರ್ಚು ಆಗಿದೆ. ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಪುನಃ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈಗಾಗಲೇ ಸಾಲದ ಶೂಲಕ್ಕೆ ಸಿಲುಕಿರುವ ಕುಟುಂಬಕ್ಕೆ ದಿಕ್ಕೇ ತೋಚದಂತಹ ಶೋಚನೀಯ ಪರಿಸ್ಥಿತಿ ಎದುರಾಗಿದೆ.
ರಕ್ಷಿತಾ ಅವರ ಆರೋಗ್ಯ ಸುಧಾರಣೆಗೆ ಕಿಡ್ನಿ ಡಯಾಲಿಸಿಸ್ ಮಾಡಬೇಕಾಗಿದ್ದು, ಇದು ತುಂಬಾ ದುಬಾರಿ ಚಿಕಿತ್ಸೆಯಾಗಿದ್ದು, ತಿಂಗಳಿಗೆ 15ರಿಂದ 20 ಸಾವಿರ ರೂಪಾಯಿಯ ಅಗತ್ಯವಿದೆ. ತೀವ್ರ ಹಣಕಾಸಿನ ಅಡಚಣೆಯಿಂದ ಅಸಹಾಯಕರಾಗಿರುವ ಈ ಪುಟ್ಟ ಸಂಸಾರ ಇದೀಗ ಸಾರ್ವಜನಿಕರ ಆರ್ಥಿಕ ಸಹಕಾರವನ್ನು ಬಯಸುತ್ತಿದೆ. ಸಂಘ-ಸಂಸ್ಥೆಗಳು, ಸಮುದಾಯದ ದಾನಿಗಳು ಈ ಬಡ ಕುಟುಂಬಕ್ಕೆ ನೆರವಿಗೆ ಧಾವಿಸಬೇಕಿದೆ. ತಮ್ಮ ದುಡಿಮೆಯ ಕಿಂಚಿತ್ ಹಣ ನೀಡಿ ಕಣ್ಣೀರಿನ ಕೈ ತೊಳೆಯುತ್ತಿರುವ ಈ ಬಡ ಕುಟುಂಬಕ್ಕೆ ಆಸರೆಯಾಗಬೇಕಿದೆ.
ನೆರವು ನೀಡುವವರಿಗೆ ರಕ್ಷಿತಾ ಕುಲಾಲ್ ಅವರ ಸಹೋದರ ಮೋಹಿತ್ ಅವರ ಬ್ಯಾಂಕ್ ಅಕೌಂಟ್ ಮಾಹಿತಿ ಹೀಗಿದೆ:
Mohith
S/O Sesappa Kulal
VIJAYA BANK , VIJAYARAJ COMPLEX,
MOODBIDRI, DAKSHINA KANNADA, KARNATAKA, India (IN), Pin Code:- 574227
A/c no- 114901011002504
IFSC Code: VIJB0001149
MICR code- 575029033
Mobile number – 8197066101 / 8746923604
ಚಿತ್ರ-ಮಾಹಿತಿ : ಹೇಮಂತ್ ಕುಮಾರ್, ಕಿನ್ನಿಗೋಳಿ