ಬೆಹರೈನ್ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೆಹರೈನ್ ದ್ವೀಪ ರಾಷ್ಟ್ರದಲ್ಲಿನ ಸಮಸ್ತ ಅನಿವಾಸಿ ಕನ್ನಡಿಗರಿಗಾಗಿ ಅಕ್ಟೋಬರ್ 12ರಂದು ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಸಂಜೆ ಅತಿ ಅದ್ದೂರಿಯಿಂದ ಸಾದರಗೊಳ್ಳಲಿರುವ ಅನಿವಾಸಿ ಕನ್ನಡಿಗರ ಪ್ರಪ್ರಥಮ ನಾಡಹಬ್ಬ ‘ಕನ್ನಡ ಡಿಂಡಿಮ’ದಲ್ಲಿ ಬೆಹರೈನ್ ಕುಲಾಲ್ಸ್ ಪಾಲು ಪಡೆಯಲಿದ್ದು, ಕನ್ನಡ ನಾಡಗೀತೆಗೆ ಸಂಬಂಧಿಸಿದ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಕನ್ನಡದ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಭವ್ಯತೆಗೆ ಕುಂದಣವಿಕ್ಕುವ ಅತ್ಯಮೋಘ ಸಾಂಸ್ಕೃತಿಕ ಮಹಾ ಉತ್ಸವ `ಕನ್ನಡ ಡಿಂಡಿಮ’ದಲ್ಲಿ ಬೆಹರೈನ್ ನಲ್ಲಿ ಸಂಘಟಿತಗೊಂಡಿರುವ ಕುಲಾಲ ಸಮುದಾಯದ ಸಮಾನಮನಸ್ಕರ ವೇದಿಕೆ `ಬೆಹರೈನ್ ಕುಲಾಲ್ಸ್’ನ ೧೪ ಮಂದಿ ಸದಸ್ಯರು ಈ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದು , ಸೀಮಾ ಗುರುಪ್ರಸಾದ್ ಈ ನೃತ್ಯದ ಸಂಯೋಜನೆ ನಡೆಸಿದ್ದಾರೆ. ಕಲಾವಿದರ ವಸ್ತ್ರ ವಿನ್ಯಾಸವನ್ನು ಬಾಲಕೃಷ್ಣ ಕುಲಾಲ್ ಮಾಡಿದ್ದು, ತಾಂತ್ರಿಕ ನೆರವು ಶಶಿ ಕುಲಾಲ್ ಶಿರ್ವ ಅವರದ್ದು.
Ganesh kulal manila
ತಾಯ್ನಾಡಿನ ಆಹ್ವಾನಿತ ಕಲಾವಿದರು ಮತ್ತು ಬಹ್ರೈನ್’ನ ಸ್ಥಳೀಯ ಕಲಾವಿದರ ಸೇರುವಿಕೆಯಲ್ಲಿ ಸಂಪನ್ನಗೊಳ್ಳುವ ಹಾಡು, ಸಂಗೀತ, ಕಲೆ, ನೃತ್ಯ, ಹಾಸ್ಯ, ಮ್ಯಾಜಿಕ್, ಮಿಮಿಕ್ರಿ, ಕಾವ್ಯ – ಕುಂಚ ಸಹಿತವಾದ ಬಹು ವೈವಿಧ್ಯದ, ಅಪರೂಪದ ಅಚ್ಚ ಕನ್ನಡದ ಕಾರ್ಯಕ್ರಮದಲ್ಲಿ ಬೆಹರೈನ್ ನಲ್ಲಿ ನೆಲೆಸಿರುವ ಕುಲಾಲ ಸಮುದಾಯದ ಸಮಸ್ತರು ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು `ಬೆಹರೈನ್ ಅನಿವಾಸಿ ಭಾರತೀಯ ಸಮಿತಿ’ ಸದಸ್ಯರೂ, `ಬೆಹರೈನ್ ಕುಲಾಲ್ಸ್’ ಇದರ ಅಧ್ಯಕ್ಷರೂ ಆಗಿರುವ ಗಣೇಶ್ ಕುಲಾಲ್ ಮಾಣಿಲ ವಿನಂತಿಸಿದ್ದಾರೆ.