ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಆ ತಾಯಿಗೆ ವಿಕಲ ಚೇತನೆ ಮಗಳೇ ದಿಕ್ಕು… ಮಗಳಿಗೆ ದೃಷ್ಟಿ ಕಳಕೊಂಡ ವಯೋವೃದ್ದ ತಾಯಿಯೇ ಆಸರೆ. ಜೀವನದುದಕ್ಕೂ ಬಡತನದದ ಬೇಗೆಯಲ್ಲಿ ದಿನ ಸೆವೆಸಿರುವ ಆ ಬಡಕುಟುಂಬಕ್ಕೆ ಇನ್ನೂ ಕಷ್ಟದ ದಿನಗಳು ದೂರವಾಗಿಲ್ಲ. ಗಂಡು ದಿಕ್ಕಿಲ್ಲದ ಮನೆಗೆ ಇನ್ನೂ ದೇವರು ಕರುಣೆ ತೋರಿಲ್ಲ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ದಿನ ಕಳೆಯುತ್ತಿರುವ ಕುಲಾಲ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ವ್ಯಥೆಯ ಕಥೆಯಿದು.
ಆ ಮನೆಯ ಯಜಮಾನಿಯ ಹೆಸರು ಜಯಲಕ್ಷ್ಮಿ. ಎಪತ್ತರ ವಯೋವೃದ್ದೆ. ಮೂಲತಃ ಉಡುಪಿ ಜಿಲ್ಲೆಯವರಾದ ಇವರಿಗೆ ಪತಿಯು ಕಿರುಕುಳ ನೀಡಿ ಮನೆಯಿಂದ ಹೊರದಬ್ಬಿದಾಗ 5 ವರ್ಷ ಪ್ರಾಯದ ವಿಕಲಚೇತನೆ ಮಗಳು ಕಮಲಾಕ್ಷಿಯೊಂದಿಗೆ ಮನೆಬಿಟ್ಟು ಬಂದವರು ಬಂಟ್ವಾಳದ ಪಾಣೆಮಂಗಳೂರಿನಲ್ಲಿ ನೆಲೆಕಂಡುಕೊಂಡರು. ಅಲ್ಲಿ ಇಲ್ಲಿ ಮನೆಯ ಮುಸರೆ ತಿಕ್ಕಿ ಬಾಡಿಗೆ ಮನೆಯೊಂದರಲ್ಲಿ ಜೀವಿಸುತ್ತಿದ್ದರು. ಮಗಳು ಎಳವೆಯಿಂಲೇ ತಾಯಿಗೆ ಕೆಲಸದಲ್ಲಿ ನೆರವಾಗಿ ಕಷ್ಟಪಟ್ಟು ದುಡಿಯುತಿದ್ದಳು. ಮನೆ ಕೆಲಸದಿಂದ ಸಿಗುವ ಅಲ್ಪ ಆದಾಯದಲ್ಲಿ ಜೀವನ ಸಾಗಿಸುವುದೇ ಕಷ್ಟವಾದ್ದರಿಂದ ಮಗಳಿಗೆ ವಿದ್ಯಾಭ್ಯಾಸ ನೀಡಲು ಸಾಧ್ಯವಾಗಲಿಲ್ಲ. ಹೀಗೆ ತಾಯಿಗೆ ಮಗಳು, ಮಗಳಿಗೆ ತಾಯಿ ಸರ್ವಸ್ವ ಎಂಬತ್ತೆ ಒಬ್ಬರಿಗೊಬ್ಬರು ನೆರಳಾಗಿ ಮೂರುವರೆ ದಶಕವನ್ನು ಕಳೆದಿದ್ದಾರೆ.
ಆದರೆ ಕಳೆದ ನಾಲ್ಕು ವರ್ಷದ ಹಿಂದೆ ಜಯಲಕ್ಷ್ಮಿಯವರಿಗೆ ಕಣ್ಣಿಗೆ ಪೊರೆ ಬಾದಿಸಿದೆ. ಹಣದ ತೊಂದರೆಯಿಂದ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ದೃಷ್ಟಿಯನ್ನೇ ಕಳಕೊಂಡಿದ್ದಾರೆ. ಇದರೊಂದಿಗೆ ವಯೋಸಹಜ ರೋಗಗಳು, ಉಬ್ಬಸ, ಎದೆನೋವು ಸೇರಿಕೊಂಡಿದೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕೆನ್ನುವ ವೈದ್ಯರ ಸಲಹೆಯಂತೆ ಹಾಸಿಗೆಯ ಮೇಲೆ ಬದುಕು ಸಾಗುತ್ತಿದೆ. ಮನೆ ನಿಭಾಯಿಸುವ ಸಂಪೂರ್ಣ ಜವಬ್ದಾರಿ ಈಗ ವಿಕಲ ಚೇತನೆ ಮಗಳು ಕಮಲಾಕ್ಷಿಯವರ ಹೆಗಲಿಗೆ ಬಿದ್ದಿದೆ. ಹೊಟೇಲೊಂದರಲ್ಲಿ ಕೂಲಿ ಕೆಲಸ ಮಾಡಿ ಬರುವ ಆದಾಯ ಹಾಗೂ ಅಂಗವಿಲಕರ ಮಾಸಾಶನದಿಂದ ಬರುವ ಆದಾಯದಿಂದ ಮನೆಬಾಡಿಗೆ, ಮನೆ ಖರ್ಚು ಸೇರಿದಂತೆ ತಾಯಿ ಹಾಗೂ ತನ್ನ ಆರೋಗ್ಯಕ್ಕೆ ಔಷಧಿಯ ಖರ್ಚನ್ನು ನಿಭಾಯಿಸುತ್ತಿದ್ದಾರೆ. ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಎನ್ನುವಂತ ಪರಿಸ್ಥಿತಿಯಲ್ಲಿ ಈ ಬಡಕುಟುಂಬ ಬದುಕುತ್ತಿದೆ. ಮನೆಯ ಜವಬ್ದಾರಿ ಹೊತ್ತು ತಾಯಿಯನ್ನು ನೋಡಿಕೊಳ್ಳುತ್ತಿದ್ದ ಕಮಲಾಕ್ಷಿಯವಗೇ ಈಗ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದೆ. ಹೊಟ್ಟೆಯಲ್ಲಿ ಹುಣ್ಣು ಕಾಣಿಸಿಕೊಂಡು ತುರ್ತು ಶಸ್ತ್ರಚಿಕಿತ್ಸೆ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಅವರು ಕೈಯಲ್ಲಿ ಹಣವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತಲೇ ಬಂದಿದಾರೆ. ಈ ಮೊದಲು ಚಿಕಿತ್ಸೆಗೆ ಶಾಸಕ ರಾಜೇಶ್ ನಾೈಕ್ ಅವರು ಹಣಕಾಸಿನ ಸಹಕಾರ ನೀಡಿದ್ದರು ಎಂದು ಸ್ಮರಿಸಿಕೊಳ್ಳುವ ಕಮಲಾಕ್ಷಿ ಮುಂದಿನ ಶಸ್ತ್ರ ಚಿಕಿತ್ಸೆಗೆ ದಾನಿಗಳು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಬಡತನದ ಬೇಗೆಯಲ್ಲೇ ಕರಗಿ ಹೋಗುತ್ತಿರುವ ಈ ಕುಟುಂಬಕ್ಕೆ ಮಾನವೀಯ ನೆರವಿನ ಸ್ಪಂದನೆ ಬೇಕಾಗಿದೆ. ಅವರಿಗೆ ಆರ್ಥಿಕ ನೆರವು ನೀಡುವವರು ಕಮಲಾಕ್ಷಿಯವರ ಸಿಂಡಿಕೇಟ್ ಬ್ಯಾಂಕ್ ಪಾಣೆಮಂಗಳೂರು ಶಾಖೆಯ ಖಾತೆ ಸಂಖ್ಯೆ 01352200125402 ((IFSC : SYNB0000135)) ಜಮಾ ಮಾಡುವಂತೆ ಅಥವಾ ದೂರವಾಣಿ ಸಂಖ್ಯೆ 9900927312ನ್ನು ಸಂಪರ್ಕಿಸುವಂತೆ ವಿನಂತಿಸಿಕೊಂಡಿದ್ದಾರೆ.
ಸಂದೀಪ್ ಸಾಲ್ಯಾನ್ ಬಂಟ್ವಾಳ