ಕಾಪು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬಡವರ ನೋವಿಗೆ ಸ್ಪಂದಿಸಲು ಸಮಾಜದ ಸಮಾನ ಮನಸ್ಕ ಯುವಕರು ಸೇರಿ ರಚಿಸಿದ `ಕಾರುಣ್ಯ ನಿಧಿ’ ಎಂಬ ವಾಟ್ಸಾಪ್ ಗ್ರೂಪಿನ ವತಿಯಿಂದ ಕಟಪಾಡಿ ಮಣಿಪುರದ ಸುಂದರ ಮೂಲ್ಯರಿಗೆ ಆರ್ಥಿಕ ಸಹಾಯ ನೀಡಿ ಸಹಕರಿಸಿದರು.
ಕಟಪಾಡಿ ಗ್ರಾಮದ ಮಣಿಪುರ ಎಂಬಲ್ಲಿ ವಾಸವಾಗಿರುವ 60 ವರ್ಷ ಪ್ರಾಯದ ಸುಂದರ ಮೂಲ್ಯ ಇವರು ಅಸಹನೀಯ ಕಾಲು ನೋವು, ಸೆಳೆತದಿಂದ ಬಳಲುತ್ತಿದ್ದರು. ಜೊತೆಗೆ ರಕ್ತದೊತ್ತಡ ಹಾಗೂ ಮಧುಮೇಹ ಕೂಡಾ ಇವರನ್ನು ಕಾಡುತ್ತಿದ್ದು ನಡೆಯಲು ಆಗದೇ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಪತ್ನಿ ಜಾನಕಿಯೊಂದಿಗೆ ಸಣ್ಣ ಮನೆಯನ್ನು ಕಟ್ಟಿದ್ದು ಖರ್ಚಿಗಾಗಿ ದುಡಿಯಲಾಗದ ಪರಿಸ್ಥಿತಿ ಅವರದು. ಸಂಪಾದನೆಯಿಲ್ಲದೆ ವಾಸವಾಗಿದ್ದ ಮನೆಯನ್ನೇ ಮಾರಿ ಸದ್ಯಕ್ಕೆ ತನ್ನ ಪತ್ನಿಯ ತವರು ಮನೆಯಲ್ಲಿ ವಾಸವಾಗಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿ ತಮಗೆ ಆಧಾರವಾಗಬಲ್ಲ ಮಕ್ಕಳನ್ನೂ ಕರುಣಿಸದ ವಿಧಿಯ ಆಟದ ಕೈಗೊಂಬೆಯಾಗಿ ಔ಼ಷಧೋಪಚಾರಕ್ಕೂ ಕಾಸಿಲ್ಲದೆ ಸಂಬಂಧಿಕರನ್ನೆಲ್ಲಾ ಕಾಡಿ ಬೇಡಿ ಜೀವನದ ಮುಂದಿನ ಗೊತ್ತು ಗುರಿಯನ್ನು ಕಾಣದೆ ಬಾನಿನತ್ತ ಮುಖ ಮಾಡಿದಂತೆ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ಔಷಧೊಪಚಾರದ ಖರ್ಚಿಗೆ ಒಂದಷ್ಟು ಹಣ ಒದಗಿಸಿ ಕೊಡುವ ನಿಟ್ಟಿನಲ್ಲಿ ಕಾರುಣ್ಯ ನಿಧಿ ಗುಂಪಿನ ಮುಖಾಂತರ ಸಂಗ್ರಹಿಸಿದ ಮೊತ್ತ 16,700 ರೂಪಾಯನ್ನು ಸೆ.7ರಂದು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಕುಲಾಲ ಚಾವಡಿ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪದವು,ಸದಸ್ಯರಾದ ಅರುಣ್ ಕುಲಾಲ್ ,ಕುಲಾಲ ವರ್ಲ್ಡ್ ಇದರ ಅಡ್ಮಿನ್ ಹೇಮಂತ್ ಕುಲಾಲ್ ಕಿನ್ನಿಗೋಳಿ ಉಪಸ್ಥಿತರಿದ್ದರು.