ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್ ವರದಿ) : ನಗರದ ಖ್ಯಾತ ಕುಟುಂಬ ವೈದ್ಯ, ಶ್ರೀನಿವಾಸ್ ಸಮೂಹ ಸಂಸ್ಥೆಗಳ ಮುಖ್ಯ ವೈದ್ಯಾಧಿಕಾರಿ ಹಾಗೂ ಪ್ರಾಧ್ಯಾಪಕರಾಗಿರುವ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರು ಇತ್ತೀಚೆಗೆ ಜರುಗಿದ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕದ ಚುನಾವಣೆಯಲ್ಲಿ 2018-19 ರ ಸಾಲಿಗೆ ರಾಜ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ/ವಕ್ತಾರ (PRO) ಆಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ತನ್ನ ಸಮಾಜಮುಖಿ ಚಿಂತನೆ, ಬರಹ, ಭಾಷಣ ಹಾಗೂ ಸಂಘಟನಾ ಶಕ್ತಿಯಿಂದ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿರುವ ಡಾ| ಅಣ್ಣಯ್ಯ ಕುಲಾಲ್ರವರು, ಭಾರತೀಯ ವೈದ್ಯಕೀಯ ಸಂಘ ದಕ್ಷಿಣ ಕನ್ನಡಜಿಲ್ಲೆ, ಕರಾವಳಿವಿಭಾಗ ,ಕರ್ನಾಟಕ ರಾಜ್ಯ ಹಾಗೂ ರಾಷ್ಟ್ರಘಟಕಗಳಲ್ಲಿ ವಿವಿಧ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದವರು. IMA ಯ ಮುಖವಾಣಿಯಾದ ಫೋಕಸ್ ಪತ್ರಿಕೆಯ ಕಾರ್ಯದರ್ಶಿಯಾಗಿ, IMA ಕುಟುಂಬ ವೈದ್ಯರ ಘಟಕದ ರಾಜ್ಯ ಅಧ್ಯಕ್ಷರಾಗಿ, ದ.ಕ ಜಿಲ್ಲೆ, ಕರಾವಳಿ ವಿಭಾಗ ಮಟ್ಟದ ಸಂಚಾಲಕನಾಗಿ, ವೈದ್ಯ ಸಂಘಟನೆಗಾಗಿ ದುಡಿದ ಇವರು 2010 ರ ಮಂಗಳೂರಿನಲ್ಲಿ ಜರುಗಿದ IMA ರಾಜ್ಯ ವೈದ್ಯರ ಸಮ್ಮೇಳನ, ಹಾಗೂ 2011 ರಲ್ಲಿ ಸುರತ್ಕಲ್ನಲ್ಲಿ ಜರುಗಿದ IMA ಕುಟುಂಬ ವೈದ್ಯ ಸಮ್ಮೇಳನದಲ್ಲಿ ಮುಂಚೂಣಿಯ ಪಾತ್ರವಹಿಸಿದ್ದಲ್ಲದೆ ಬೆಳಗಾಂ ಚಲೋ, ಫ್ರೀಡಂ ಪಾರ್ಕ್ ಚಲೋ ಮುಂತಾದ ವೈದ್ಯ ಸಮುದಾಯದ ಚಳುವಳಿಯಲ್ಲಿ, ಹೆಣ್ಣು ಶಿಶು ಉಳಿಸಿ ಆಂದೋಲನದಲ್ಲಿ, ವೈದ್ಯ ಬರಹಗಾರರ ವೇದಿಕೆಯ ರಾಜ್ಯ ಸಂಚಾಲಕರಾಗಿ, ರಾಷ್ರ್ಟೀಯ IMA ನೀತಿ ಸಂಹಿತೆಯ ಸ್ಥಾಯಿ ಸಮಿತಿಯ ಸದಸ್ಯರಾಗಿ ದುಡಿದು, ಸಮಾಜಮುಖಿ ವೈದ್ಯ ಎಂಬ ಪ್ರಶಂಸಾ ಪತ್ರವನ್ನು 2012 ರಲ್ಲಿ ರಾಷ್ಟ್ರೀಯ IMA ಅಧ್ಯಕ್ಷರಿಂದ ಪಡೆದ ಅತೀ ಕಿರಿಯ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. IMA ಯ ರಾಜ್ಯ ಮತ್ತು ರಾಷ್ರ್ಟೀಯ ಕಾರ್ಯಕಾರಿಣಿ ಸದಸ್ಯರಾಗಿ ಹಲವು ವರ್ಷಗಳಿಂದ ದುಡಿಯುತ್ತಿರುವ ಅಣ್ಣಯ್ಯ ಕುಲಾಲರು ಖ್ಯಾತ IMA ಮಂಗಳೂರು ಘಟಕದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ (3 ಬಾರಿ) ದುಡಿದುದ್ದಲ್ಲದೆ ಪಡೀಲ್ ಮತ್ತು ಮಂಗಳೂರಿನಲ್ಲಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮತ್ತು ಕುಲಾಲ್ ಹೆಲ್ತ್ ಸೆಂಟರ್ ಮೂಲಕ ಕಳೆದ 2 ದಶಕಗಳಿಂದ ಕುಟುಂಬ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ನಾಡು, ನುಡಿ, ನೆಲ, ಜಲ, ರೈಲ್ವೆ, ಪರಿಸರ, ಪ್ರಕೃತಿ ಹೋರಾಟಗಳಲ್ಲಿ ಮುಂಚೂಣಿಯ ನಾಯಕರಾಗಿದ್ದು ಭಾರತೀಯ ಜನತಾ ಪಕ್ಷದ ಶಿಕ್ಷಕ ಮತ್ತು ವೈದ್ಯಕೀಯ ಪ್ರಕೋಷ್ಠದ ಜಿಲ್ಲೆ ಮತ್ತು ರಾಜ್ಯ ಘಟಕದ ಸಂಚಾಲಕ, ಸಹಸಂಚಾಲಕನಾಗಿ ದುಡಿದ ಜನಮನ್ನಣೆಯನ್ನು ಗಳಿಸಿರುವ ಕುಲಾಲ್ ಕರಾವಳಿ ಭಾಗದಿಂದ ಪ್ರಪ್ರಥಮವಾಗಿ ರಾಜ್ಯ ವಕ್ತಾರ ಹುದ್ದೆಯನ್ನು ಬೆಂಗಳೂರಿನಲ್ಲಿ ಜರಗಲಿರುವ ರಾಷ್ಟ್ರ IMA ಸಮ್ಮೇಳದಲ್ಲಿ ವಹಿಸಿಕೊಳ್ಳಲಿರುವರು.