ಸರ್ವಜ್ಞನ ಚಿಂತನೆಗಳು ಸಾರ್ವಕಾಲಿಕ: ಶಾಸಕ ವಿ. ಸುನೀಲ್ ಕುಮಾರ್
ಕಾರ್ಕಳ(ಸೆ.೨೩, ಕುಲಾಲ್ ವರ್ಲ್ಡ್ ಡಾಟ್ ಕಾಮ್ ವರದಿ) : ತಾಲೂಕು ಪಂಚಾಯತ್ ಕಾರ್ಕಳ, ಗ್ರಾಮ ಪಂಚಾಯತ್ ಕುಕ್ಕುಂದೂರು ಹಾಗೂ ಕುಲಾಲ ಸಂಘ ಕಾರ್ಕಳ ಮತ್ತು ಕುಲಾಲ ಯುವ ವೇದಿಕೆ ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಕಕ್ಕುಂದೂರು ಗ್ರಾಮ ಪಂಚಾಯತ್ ಎದುರುಗಡೆ ಕುಲಾಲ ಯುವ ವೇದಿಕೆ ಕಾರ್ಕಳ ನಿರ್ಮಿಸಿದ ಐತಿಹಾಸಿಕ ಸರ್ವಜ್ಞ ವೃತ್ತದ ಲೋಕಾರ್ಪಣೆ ಸೆ.೨೩ರಂದು ಜರುಗಿತು.
ಕಾರ್ಕಳದ ಶಾಸಕರು ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರು ಆಗಿರುವ ವಿ. ಸುನೀಲ್ ಕುಮಾರ್ ಸರ್ವಜ್ಞ ವೃತ್ತದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ‘ಸರ್ವಜ್ಞ ಜಾತಿ-ಮತ-ಧರ್ಮಗಳನ್ನು ಮೀರಿನಿಂತ ಮೇರು ಕವಿ. ಆತನ ರಚನೆಯ ತ್ರಿಪದಿಗಳು ಸಾರ್ವಕಾಲಿಕ ಸತ್ಯ. ಮನುಕುಲದ ಒಳಿತಿಗೆ ಮಾರ್ಗದರ್ಶಕ. ನಮಗೆಲ್ಲ ಸರ್ವಜ್ಞನ ಚಿಂತನೆಗಳು ದಾರಿ ದೀವಿಗೆಯಾಗಲಿ’ ಎಂದು ಅಭಿಮತ ವ್ಯಕ್ತಪಡಿಸಿ, ‘ಕಾರ್ಕಳ ಕುಲಾಲ ಯುವ ವೇದಿಕೆಯ ನಿರ್ಮಾಣದ ಈ ಐತಿಹಾಸಿಕ ವೃತ್ತ ಕಾರ್ಕಳದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದ್ದು ಕರಾವಳಿಯಾದ್ಯಂತ ಸರ್ವಜ್ಞ ಚಳುವಳಿ ಪಸರಿಸಲಿ’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಸರ್ವಜ್ಞ ಚಿಂತನೆಯನ್ನು ನಡೆಸಿ ‘ ಸರ್ವಜ್ಞನ ತ್ರಿಪದಿಗಳು ಮನುಕುಲದ ಒಳಿತಿಗಾಗಿ ರೂಪಿತಗೊಂಡ ಸಾಹಿತ್ಯದ ಅಪೂರ್ವ ಪದಗಳು. ಒಂದು ವೇಳೆ ಸರ್ವಜ್ಞ ಇಂಗ್ಲೀಷ್ ಭಾಷೆಯಲ್ಲಿ ಈ ರಚನೆಯನ್ನು ಮಾಡಿದರೆ ನೊಬೆಲ್ ಪುರಸ್ಕಾರ ಪಡೆಯುವಷ್ಟು ಯೋಗ್ಯತೆಯನ್ನು ತ್ರಿಪದಿಗಳು ಹೊಂದಿವೆ. ಆದಾಗ್ಯೂ ಸರ್ವಜ್ಞನ ಚಿಂತನೆ-ನಡೆ ನಮಗೆಲ್ಲ ಮಾರ್ಗದರ್ಶಕ. ಸರ್ವಜ್ಞನನ್ನು ಕುಂಬಾರ ಸಮುದಾಯ ಜಾತಿಯ ಸರಪಳಿಯಲ್ಲಿ ಎಂದೂ ಬಂಧಿಸುವುದಿಲ್ಲ. ಬದಲಾಗಿ ಈ ಸಮಾಜದ ಡಂಭಚಾರ, ಮೌಢ್ಯತೆಯನ್ನು ಹೋಗಲಾಡಿಸಲು ಸರ್ವಜ್ಞನ ಚಿಂತನೆಗಳು ಮಾರ್ಗದರ್ಶಕ. ಕರಾವಳಿಯ ಸುತ್ತೆಲ್ಲ ಸರ್ವಜ್ಞ ಚಿಂತನೆ ಪಸರಿಸುವ ಕೆಲಸ ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ, ಬೈಲೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಗೋಪಾಲ ಮೂಲ್ಯ, ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮನ ಆಎಂ ರಾವ್, ಕಾರ್ಕಳ ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ ಶೆಟ್ಟಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್ ರಾವ್, ಕುಲಾಲ ಕುಂಬಾರರ ಯುವ ವೇದಿಕೆಯ ರಾಜ್ಯಧ್ಯಕ್ಷ ತೇಜಸ್ವಿ ರಾಜ್, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಭೋಜ ಕುಲಾಲ್, ಕಾರ್ಕಳ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ದಿವಾಕರ ಎಂ ಬಂಗೇರ, ಕಾರ್ಕಳ ಜಿಲ್ಲಾ ಪಂಚಾಯತ್ ನ ಹಲವು ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಕಳ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ದಿವಾಕರ ಎಂ ಬಂಗೇರ ಪ್ರಸ್ತಾವನೆ ಮಾತುಗಳನ್ನಾಡಿದರು. ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ರಾವ್ ಸ್ವಾಗತಿಸದರು. ಕುಲಾಲ ಯುವ ವೇದಿಕೆಯ ಕಾರ್ಕಳದ ಸದಸ್ಯ ಹೃದಯ ಕುಲಾಲ್ ಧನ್ಯವಾದ ಸಮರ್ಪಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ಸರ್ವಜ್ಞ ವೃತ್ತ ಲೋಕಾರ್ಪಣೆಗೆ ಮುನ್ನ ಆಕರ್ಷಕ ಬೈಕ್ ರಾಲಿ ನಡೆಯಿತು.