ಕೋಲಾರ(ಕುಲಾಲ್ ವರ್ಲ್ಡ್ ಡಾಟ್ ಕಾಮ್ ವರದಿ): ಕೋಲಾರ ಜಿಲ್ಲೆ ಮಾಲೂರು ವಿದ್ಯಾರ್ಥಿನಿ ರಕ್ಷಿತಾ ಕುಂಬಾರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೇಕಲ್ ಗ್ರಾಮದ ಟಿ.ಎನ್.ಸುರೇಶ್ ಬಾಬು ಅಲಿಯಾಸ್ ರಂಜಿತ್ ಬಾಬು (25) ಎಂಬಾತನಿಗೆ ಕೋಲಾರ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಕೊಲೆಯಾದ ಹತ್ತನೇ ತರಗತಿ ವಿದ್ಯಾರ್ಥಿನಿ ರಕ್ಷಿತಾಳ ಮನೆಯ ಬಳಿ ಗಾರೆ ಕೆಲಸ ಮಾಡಲು ಬರುತ್ತಿದ್ದ ಆರೋಪಿ ರಂಜಿತ್ ಬಾಬು, ಆಗಾಗ ಯುವತಿ ಮನೆ ಬಳಿ ಹೋಗಿ ಫಾಲೋ ಮಾಡಿ ನೀರು ಕೇಳಿದ್ದ, ಪ್ರೀತಿಸು ಎಂದು ಗೋಗರೆಯುತ್ತಿದ್ದ. ಈತನ ಪ್ರೀತಿಗೆ ವಿದ್ಯಾರ್ಥಿನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 1 ರಂದು ಶಾಲೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದ.
ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಇಡೀ ಕೋಲಾರ ಜಿಲ್ಲೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಘಟನೆಯಿಂದ ಆತಂಕಗೊಂಡಿದ್ದ ಜಿಲ್ಲೆಯ ಜನರು, ಸಾವಿರಾರು ವಿದ್ಯಾರ್ಥಿಗಳು ಅಮಾಯಕ ವಿದ್ಯಾರ್ಥಿನಿಯನ್ನು ಕೊಂದ ಆರೋಪಿಯ ಬಂಧನಕ್ಕಾಗಿ ಆಗ್ರಹಿಸಿ ಬೃಹತ್ ಹೋರಾಟವನ್ನ ಮಾಡಿದ್ದರು.
ಘಟನೆ ನಡೆದು ೪೫ ದಿನಗಳಲ್ಲಿ ಆರೋಪಿಗೆ ಶಿಕ್ಷೆ, ಜಿಲ್ಲೆಯಲ್ಲಿ ಅತಿ ಕಡಿಮೆ ಅವದಿಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದ್ದು, ೧೮ ದಿನದಲ್ಲಿ ಮಾಲೂರು ಪೊಲೀಸರಿಂದ ೨೦೧ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು, ನ್ಯಾಯಾಲಯದಲ್ಲಿ ೪೬ ಜನ ಸಾಕ್ಷಿದಾರರ ವಿಚಾರಣೆ ನಡೆಸಿತ್ತು. ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶೆ ಬಿ.ಎಸ್.ರೇಖಾ, ರಂಜಿತ್ ಬಾಬು ಮೇಲಿನ ಆರೋಪ ಸಾಬೀತಾದ್ದರಿಂದ ಗಲ್ಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.