ಮುಂಬಯಿ : “ಹಿರಿಯರು ಸ್ಥಾಪಿಸಿದ ಕುಲಾಲ ಸಂಘ ಮುಂಬಯಿ ಇದೀಗ ಸಮಾಜದ ಪ್ರತಿಭಾವಂತ ಕಿರಿಯರಿಗೆ ಉತ್ತಮ ವೇದಿಕೆಯನ್ನು ನೀಡಿ ಅಭಿನಂದಿಸಿದೆ. ಇದು ಕೇವಲ ನೃತ್ಯಕ್ಕೆ ಸೀಮಿತವಾಗಿರದೆ ಸಮಾಜದ ಇತರ ಚಟುವಟಿಕೆಗಳಲ್ಲೂ ಮಕ್ಕಳು ಬಾಗವಹಿಸುವಂತಾಗಬೇಕು. ಮಕ್ಕಳಿಗಾಗಿ ಆಸ್ತಿ ಅನ್ನುದಕ್ಕಿಂತ ಮಕ್ಕಳೇ ನಮ್ಮೆಲ್ಲರ ಆಸ್ತಿ” ಎಂದು ಮನಿಪೋಲ್ಡ್ ಕೋ. ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ನುಡಿದರು.
ಕುಲಾಲ ಸಂಘ ಮುಂಬಯಿ ಇದರ ಸಮಾಜಿಕ ಹಾಗೂ ಆರ್ಥಿಕ ಸಮಿತಿಯ ವತಿಯಿಂದ ಸೆ. 13 ರಂದು ನಗರದ ಮಾಟುಂಗಾ ಪಶ್ಚಿಮದಲ್ಲಿನ ಡಾ|ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆದ ಅಂತರಾಷ್ಟೀಯ ಕುಲಾಲ ಡಾನ್ಸ್ ಫೆಸ್ಟಿವಲ್ ನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಮುಂದುವರಿಯುತ್ತಾ, “ನಾವು ತುಳುನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರ ಸೌಭಾಗ್ಯ. ಜಾತಿ, ಧರ್ಮಕ್ಕಿಂತ ಮಿಗಿಲಾದದು ಮನುಷ್ಯ ಧರ್ಮ, ಇದು ಮುಖ್ಯ. ಯಾವ ಕೆಲಸದಲ್ಲೂ ದೇವರಲ್ಲಿ ಪೂರ್ಣ ವಿಶ್ವಾಸವಿದ್ದರೆ ಸೋಲು ಅಸಾಧ್ಯ. ಮಕ್ಕಳಿಗೆ ಕುಟುಂಬದ ಸದಸ್ಯರ ಮಾಹಿತಿಯನ್ನು ಹಿರಿಯರು
ನೀಡುವುದರೊಂದಿಗೆ ಈ ಕುಲಾಲ ಸಂಘವು ದೇಶ, ವಿದೇಶದಲ್ಲಿ ಹೆಸರುವಾಸಿಯಾಗಲಿ” ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ವಹಿಸಿದ್ದು ನಮ್ಮ ಸಂಸ್ಕೃತಿಯೊಂದಿಗೆ ನಮ್ಮ ಮಕ್ಕಳೂ ಬೆಳೆಯಲಿ. ಯುವ ಜನಾಂಗವು ಶೈಕ್ಷಣಿಕ ವ್ಯತ್ಯಾಸವನ್ನು ಗಮನಿಸದೆ, ಜಾತಕದಂತಹ ಮೂಡನಂಬಿಕೆಯನ್ನು ಬದಿಗೊತ್ತಿ ಸಮಾಜದಲ್ಲಿನ ವೈವಾಹಿಕ ಸಂಬಂಧಕ್ಕೆ ಪ್ರೋತ್ಸಾಹಿಸಬೇಕೆಂದು ಕಿವಿ ಮಾತನ್ನು ಹೇಳುತ್ತಾ ಡಾನ್ಸ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ ಎಲ್ಲರನ್ನೂ ಅಬಿನಂದಿಸಿದರು.
ಗೌರವ ಅತಿಥಿ, ನಾಸಿಕ್ ನ ಉದ್ಯಮಿ ಸಂಜೀವ ಬಂಗೇರ, ಮೊಗವೀರ ಮಹಾಜನ ಸಂಘ ಬಗ್ವಾಡಿ ಬಗ್ವಾಡಿ, ಠಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಾಜು ಮೆಂಡನ್ ವಂಡ್ಸೆ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಾಮಾಜಿಕ ಹಾಗೂ ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಎಂ. ಬಂಗೇರ ಸ್ವಾಗತಿಸಿದರು. ಪತ್ರಕರ್ತ ದಿನೇಶ್ ಕುಲಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಕುಲಾಲ ಸಂಘ ಪುಣೆ ಅಧ್ಯಕ್ಷ ವಿಶ್ವನಾಥ ಉಡುಪಿ, ಕಲ್ಪನಾ ಬಂಗೇರ, ನಾಸಿಕ್ ನ ಉದ್ಯಮಿ ರಮಾನಂದ ಬಂಗೇರ, ವಿಜಯಾ ರಮಾನಂದ ಬಂಗೇರ, ಮಮತಾ ಗಿರೀಶ್ ಸಾಲ್ಯಾನ್, ಕುಲಾಲ ಸಂಘ ಮುಂಬಯಿ ಉಪಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್, ಗೌ. ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಬಂಜನ್, ಶಂಕರ್ ವೈ. ಮೂಲ್ಯ, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರುಗಳು ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯರು ಮೊದಲಾದವರು ಉಪಸ್ಥಿತರಿದ್ದರು.
ಪೊವಾಯಿ ಎಸ್. ಎಂ. ಶೆಟ್ಟಿ ಕಾಲೇಜಿನ ಪ್ರಾಂಸುಪಾಲ ಡಾ. ಶ್ರೀಧರ ಶೆಟ್ಟಿಯವರಿಂದ ’ಪ್ರಸ್ತುತ ಶಿಕ್ಷಣ ರೀತಿ’ ಬಗ್ಗೆ ಉಪನ್ಯಾಸ ನಡೆಯಿತು. ನಂತರ ಮಕ್ಕಳಿಗಾಗಿ ಹಾಗೂ ಹಿರಿಯರಿಗಾಗಿ ಜಾನಪದ ಸಮೂಹ ನೃತ್ಯ ಮತ್ತು ಸಮೂಹ ನೃತ್ಯ, ಪಾಶ್ಚಿಮಾತ್ಯ / ಬಾಲಿವುಡ್ ಸಮೂಹ ನೃತ್ಯ ಹಾಗೂ ಜಾನಪದ ಸಮೂಹ ನೃತ್ಯ ಸ್ಪರ್ಧೆ ನಡೆಯಿತು. ಈ ಮಧ್ಯೆ ಸಮಾಜ ಸೇವಕ ಲ. ಜಯರಾಮ್ ಕೆ. ಮೂಲ್ಯ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ ಮೀರಾರೋಡ್ ಅಮಿತಾ ಕಲಾ ಮಂದಿರದ ಅಮಿತಾ ಜತಿನ್, ಪೊವಾಯಿಯ ನಟನಾ ನೃತ್ಯ ಅಕಾಡೆಮಿಯ ಗೀತಾ ಸಾಲ್ಯಾನ್ ಮತ್ತು ನಾಸಿಕ್ ನ ಕ್ಷಮಾ ಆರ್. ಬಂಗೇರ ಅವರು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಿದರು. ಸ್ಪರ್ಧೆಯಲ್ಲಿ ದೇಶದ ವಿವಿಧ ಬಾಗಗಳಿಂದ ಆಗಮಿಸಿದ 25ಕ್ಕೂ ಅಧಿಕ ತಂಡಗಳಲ್ಲಿ ಸಮಾಜದ 250 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ತಮ್ಮ ಪ್ರದರ್ಶನಗಳಿಂದ ಕಲಾಭಿಮಾನಿಗಳನ್ನು ರಂಜಿಸಿದರು.