15 ಎಕರೆ ಹಡಿಲು ಭೂಮಿಯನ್ನು ಹಸಿರಾಗಿಸಿದ ಸುಧಾಕರ ಸಾಲ್ಯಾನ್
ಕಿನ್ನಿಗೋಳಿ(ಜೂ.೨೬, ಕುಲಾಲ್ ವರ್ಲ್ಡ್ ಡಾಟ್ ಕಾಮ್): ರೈತರು ನಾನಾ ಕಾರಣಗಳಿಂದ ಕೃಷಿ ಚಟುವಟಿಕೆಗಳಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ ಭತ್ತದ ಕೃಷಿಯಲ್ಲೂ ಲಾಭವಿದೆ ಎಂಬುದನ್ನು ಗ್ರಾಮೀಣ ಭಾಗದ ಯುವಕ, ನಾಟಕ ಕಲಾವಿದರೊಬ್ಬರು ತೋರಿಸಿಕೊಟ್ಟಿದ್ದಾರೆ. ಮುಂಡ್ಕೂರು ಸಮೀಪದ ಸಂಕಲಕರಿಯದ ರಂಗ ಕಲಾವಿದ ಸುಧಾಕರ ಸಾಲ್ಯಾನ್ ತಮ್ಮ ಮನೆಯ ಕೃಷಿ ಭೂಮಿ ಜೊತೆಗೆ ಅಕ್ಕಪಕ್ಕದ ಇತರರ ಹಡೀಲು ಬಿದ್ದ ಸುಮಾರು ಹದಿನೈದು ಎಕರೆ ಜಮೀನಿನಲ್ಲಿ ಭತ್ತದ ನಾಟಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಕಿನ್ನಿಗೋಳಿ ವಿಜಯಾ ಕಲಾವಿದರ ನಾಟಕ ತಂಡದ ಪ್ರಭುದ್ಧ ಹಾಸ್ಯ ಕಲಾವಿದರಾಗಿ, ತಂಡದ ನಿರ್ವಾಹಕರಾಗಿ ಗುರುತಿಸಿಕೊಂಡಿದ್ದ ಇವರು ಮೂಲತಃ ಕೃಷಿ ಕುಟುಂಬದಿಂದಲೇ ಬಂದವರಾಗಿದ್ದು ವೃತ್ತಿಯಲ್ಲಿ ಜೀವವಿಮಾ ನಿಗಮದ ಪ್ರತಿನಿಧಿ. ನಾಟಕದ ಹವ್ಯಾಸ ಬೆಳೆಸಿಕೊಂಡಿರುವ ಇವರು ನಿರಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕಳೆದ ವರ್ಷದಿಂದ ತಮ್ಮ ಕೃಷಿಭೂಮಿ ಜೊತೆಗೆ ಪರಿಸರದ ಇತರರ ಹಡೀಲು ಬಿದ್ದ ಜಮೀನಿನಲ್ಲೂ ಭತ್ತದ ಕೃಷಿಯಲ್ಲಿ ಆದಾಯವಿದೆ ಎಂದು ತೋರಿಸಿಕೊಟ್ಟಿದ್ದಾರೆ.
ಬೇಸಿಗೆಯಲ್ಲಿ ಪರಿಸರದ ಮನೆಗಳ ಹಡೀಲು ಬಿದ್ದ ಕೃಷಿ ಭೂಮಿ ಸಿದ್ಧಪಡಿಸಿ ಸುಡುಮಣ್ಣು ತಯಾರಿಸಿ ಗದ್ದೆಗಳನ್ನು ಹದಗೊಳಿಸಿ ಕೃಷಿಗೆ ಯೋಗ್ಯವನ್ನಾಗಿಸುತ್ತಾರೆ. ಆಯಾ ಸಂದರ್ಭಕ್ಕೆ ತಕ್ಕಂತೆ ನೇಜಿ ತಯಾರಿಸಿ ಮಳೆಬಿದ್ದ ಬಳಿಕ ಗದ್ದೆಗಳನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಇದೀಗ ಶಾಂತಿಪಲ್ಕೆಯ ಮಹಿಳಾ ಕಾರ್ಮಿಕರಿಂದ ನಾಟಿ ಮಾಡಿಸಿ ಮುಗಿಸುವ ಹಂತಕ್ಕೆ ಬಂದಿದ್ದು, ಇವರ ಮನೆಯ ಸುತ್ತಮುತ್ತಲಿನ ಸುಮಾರು 15ರಿಂದ 20ಎಕರೆ ಭೂಮಿ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಕಳೆದ ವರ್ಷವೂ ಇದೇ ರೀತಿ ಕೃಷಿ ಚಟುವಟಿಕೆ ನಡೆಸಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ಎಣೆಲು ಮತ್ತು ಎಡೆಕೊಳಕೆ ಎಂಬ ಸೀಸನ್ ನಲ್ಲೂ ಕೃಷಿ ನಡೆಸಿ ಅಪಾರ ಆದಾಯ ಗಳಿಸಿರುವ ಸುಧಾಕರ್, ಇತರ ಮೈಗಳ್ಳ ಯುವಕರಿಗೆ ಮಾದರಿ ಎನಿಸಿದ್ದಾರೆ. ಹೆತ್ತವರಾದ ವಾಸು ಸಾಲ್ಯಾನ್ ಹಾಗೂ ಜಾನಕಿ ಅವರ ಸಹಕಾರದ ಜೊತೆ ಅಣ್ಣ ರಘು ಸಾಲ್ಯಾನ್, ಸಹೋದರಿ ಹಾಗೂ ಅತ್ತಿಗೆಯೂ ಇವರ ಕೃಷಿ ಕಾಯಕಕ್ಕೆ ಕೈ ಜೋಡಿಸಿದ್ದಾರೆ.