ಬಂಟ್ವಾಳ(ಜೂ.೨೬, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಹುಟ್ಟಿನಿಂದಲೇ ವಿಕಲಾಂಗ ಚೇತನ ಬಾಲಕಿಯಾದರೂ ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಅತ್ಯಧಿಕ ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಯಾಳ ಗ್ರಾಮದ ಭಾಗ್ಯಶ್ರೀ ಕುಲಾಲ್ ಅವರ ತಾಯಿ ರಾಜೀವಿ ಅವರಿಗೆ ಮಂಗಳೂರಿನ ಅಮೂಲ್ಯ ಸೇವಾ ಪ್ರತಿಷ್ಠಾನ ರಿಕ್ಷಾವೊಂದನ್ನು ಕೊಡುಗೆಯಾಗಿ ನೀಡಿ ಮಾದರಿಯಾಗಿದೆ.
ತನ್ನಿಬ್ಬರು ಮಕ್ಕಳು ಹಾಗೂ ಪತಿ ಅಂಗವೈಕಲ್ಯತೆ ಹೊಂದಿದ್ದರೂ ಎದೆಗುಂದದೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವಿರತ ಶ್ರಮ ಪಡುತ್ತಿರುವ ರಾಜೀವಿಯವರು ಭಾಗ್ಯಶ್ರೀಯನ್ನು ಎತ್ತಿಕೊಂಡೆ ಹತ್ತನೇ ತರಗತಿವರೆಗೆ ಶಾಲೆಗೆ ಕಳಿಸಿದ್ದರು.
ಇದೀಗ ಕಾಲೇಜಿಗೆ ಹೋಗುತ್ತಿದ್ದರೂ ಅಲ್ಲಿಗೂ ಎತ್ತಿಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಪ್ರತಿ ತಿಂಗಳು ರಿಕ್ಷಾ ಬಾಡಿಗೆ ಆರು ಸಾವಿರ ರೂಪಾಯಿಯನ್ನು ಪಾವತಿಸಬೇಕಾಗುತ್ತದೆ. ರಾಜೀವಿ ಅವರ ಕಷ್ಟವನ್ನು ಮನಗಂಡ ಅಮೂಲ್ಯ ಸೇವಾ ಪ್ರತಿಷ್ಠಾನ ಈ ಬಾರಿ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುವ ಸಂದರ್ಭ ಈ ಕುಟುಂಬಕ್ಕೆ ಹೊಸ ರಿಕ್ಷಾವನ್ನು ಕೊಡುಗೆಯಾಗಿ ನೀಡಿ ಮಾನವೀಯತೆ ಮೆರೆದಿದೆ.
ಇದೀಗ ರಾಜೀವಿಯವರು ಮಕ್ಕಳಿಗಾಗಿ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯುತ್ತಿದ್ದಾರೆ. ಭಾಗ್ಯಶ್ರೀ ಸಾಧನೆಯ ಬಗ್ಗೆ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಸಹಿತ ಹಲವು ಮಾಧ್ಯಮಗಳು ವರದಿ ಪ್ರಕಟಿಸಿತ್ತು. ಈ ವರದಿಯ ತುಣುಕು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಸಾಕಷ್ಟು ನೆರವು ಹರಿದು ಬಂದಿದೆ. ಅದರಂತೆ ಅಮೂಲ್ಯ ಪ್ರತಿಷ್ಠಾನ ರಿಕ್ಷಾದ ಕೊಡುಗೆಯನ್ನು ನೀಡಿದೆ.
______________________________________________________________________________________
ಅಮೂಲ್ಯ ಸೇವಾ ಪ್ರತಿಷ್ಠಾನವು ಮಂಗಳೂರಿನ ಎಂ ಆರ್ ಪಿ ಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಲಾಲ ಸಮುದಾಯದ ಸಮಾನ ಮನಸ್ಕ ಉದ್ಯೋಗಿಗಳ ಸಮಾಜ ಸೇವಾ ಸಂಘಟನೆ. ನಮ್ಮನ್ನು ಸಾಕಿ ಸಲಹಿ ಬೆಳೆಸಿದ ಕುಲಾಲ ಸಮಾಜಕ್ಕೆ ತನ್ನದೇ ಆದ ರೀತಿಯಲ್ಲಿ ಅಳಿಲು ಸೇವೆ ಸಲ್ಲಿಸುವ “ಕೆರೆಯ ನೀರನ್ನು ಕೆರೆಗೆ ಚೆಲ್ಲುವ” ಪುಟ್ಟ ಪ್ರಯತ್ನ ಈ ಸಂಘಟನೆಯದ್ದು. ಇದರ ಜತೆಗೆ ಸಂಸ್ಥೆಯಲ್ಲಿ ಹತ್ತು ಹಲವು ವಿಭಾಗಗಳಲ್ಲಿ ಹಂಚಿ ಹೋಗಿರುವ ಎಲ್ಲಾ ಕುಲಾಲ ಉದ್ಯೋಗಿಗಳನ್ನು ಒಂದೇ ಕುಟುಂಬದ ರೀತಿಯಲ್ಲಿ ಒಗ್ಗೂಡಿಸಿ ಸಮಾಜಸೇವೆಯಲ್ಲಿ ತೊಡಗಿಸುವ ಮತ್ತು ನಮ್ಮೊಳಗೆ ಅಡಗಿರುವ ಸುಪ್ತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ದೂರದರ್ಶಿ ಚಿಂತನೆ ಇದಕ್ಕಿದೆ. ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಉದ್ಯೋಗಿಗಳ ಮಾರ್ಗದರ್ಶನ ಹಾಗೂ ನವತರುಣರ ಅದಮ್ಯ ಉತ್ಸಾಹ ನಮ್ಮ ಈ ಸಂಘಟನೆಯ ಬೆನ್ನೆಲುಬು.ಫಲಾನುಭವಿಗಳಿಂದ ಯಾವುದೇ ಪ್ರತಿಫಲ ಬಯಸದೇ ಸಮಾಜವನ್ನು ಸ್ವಾವಲಂಬಿಯನ್ನಾಗಿಸಿ ಮುಖ್ಯವಾಹಿನಿಯ ಕಡೆಗೆ ಕೊಂಡೊಯ್ಯುವ ಧ್ಯೇಯವು `ಅಮೂಲ್ಯ’ದ್ದು.
____________________________________________________________________________________
ಸಂದೀಪ್ ಸಾಲ್ಯಾನ್
(ಕುಲಾಲ್ ವರ್ಲ್ಡ್ ಡಾಟ್ ಕಾಮ್ ಪ್ರಕಟಿಸಿದ `ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧಿಸಿದ ಭಾಗ್ಯಶ್ರೀ ಕುಲಾಲ್ ‘ ಎಂಬ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ.. http://kulalworld.com/?p=9034)