ಉಡುಪಿ(ಜೂ.೧೯, ಕುಲಾಲ್ ವರ್ಲ್ಡ್ ನ್ಯೂಸ್) : ಪಾಸಿಟಿವ್ ಜರ್ನಲಿಸಂಗೆ ಹೆಸರಾದ ಪ್ರತಿಷ್ಟಿತ ಸಂಪದ ಸಾಲು ಮಾಸ ಪತ್ರಿಕೆ ತನ್ನ ಹನ್ನೊಂದನೇ ವರ್ಷಾಚರಣೆಯ ಪ್ರಯುಕ್ತ ಸಂಪದ ಪೌಂಡೇಶನ್ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಸಿದ್ದ ಕಥೆಗಾರ ಮಂಜುನಾಥ್ ಹಿಲಿಯಾಣ ರಚನೆಯ “ಸೀತಾ ಪ್ರಲಾಪ” ಕಥೆ ಪ್ರಥಮ ಸ್ಥಾನ ಗಳಿಸಿ ಸಂಪದ ಸಾಲು ಬಹುಮಾನಕ್ಕೆ ಆಯ್ಕೆಗೊಂಡಿತು. ಕ್ರಮವಾಗಿ ಹೊಸ್ಮನೆ ವಿಷ್ಣು ಭಟ್ ಅವರ “ಪಯಣ” ಕಥೆ ದ್ವಿತಿಯ ಸ್ಥಾನ ಪಡೆಯಿತು. ಹೈದರಬಾದಿನ ಅರ್ಪಣಾ ಎಚ್. ಎಸ್ ಅವರ “ಪಂಕ್ತಿ ಭೇಧ” ಕಥೆ ತೃತೀಯ ಸ್ಥಾನ ಪಡೆಯಿತು.
ವಿಜೇತರಿಗೆ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು. ಸಂಪದ ಸಾಲು ಪತ್ರಿಕೆಯ ಈ ಪ್ರತಿಷ್ಠಿತ ಕಥಾ ಸ್ಪರ್ಧೆಗೆ ಸುಮಾರು 819ಕ್ಕೂ ಮಿಕ್ಕಿ ಕಥೆಗಳು ಬಂದಿದ್ದವು. ರಾಜ್ಯ, ಹೊರ ರಾಜ್ಯ, ವಿದೇಶಗಳಲ್ಲಿ ನೆಲೆನಿಂತ ಕನ್ನಡದ ಅನೇಕ ಪ್ರಸಿದ್ದ ಕಥೆಗಾರರು ಈ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.
ನಾಡಿನ ಪ್ರಸಿದ್ದ ಚಿಂತಕ, ಮಲೆನಾಡ ಕವಿ ಡಾ. ನಾ. ಡಿಸೋಜ ಅವರ ಮುಂದಾಳತ್ವದಲ್ಲಿ ನಾಡಿನ 8 ಜನ ಹಿರಿಯ ತೀರ್ಪುಗಾರರು ಕಥೆಗಳ ಆಯ್ಕೆ ಪ್ರಕ್ರೀಯೆ ನೆಡೆಸಿದ್ದರು. 819 ಕತೆಗಳಲ್ಲಿ ಅಂತಿಮ ಸುತ್ತಿಗೆ 10 ಕಥೆಗಳನ್ನು ಆಯ್ಕೆ ಮಾಡಲಾಗಿತ್ತು.. ಅದರಲ್ಲಿ ಮತ್ತೆ ಆಯ್ಕೆ ಪ್ರಕ್ರೀಯೆ ನೆಡೆಸಿದ ಡಾ. ನಾ ಡಿಸೋಜ ಅವರು ಅತ್ಯುತ್ತಮ ಎನಿಸಿದ ಮೂರು ಕಥೆಗಳನ್ನು ಆಯ್ಕೆ ಮಾಡಿದ್ದರು. ಅದರಲ್ಲಿ ಮಂಜುನಾಥ್ ಹಿಲಿಯಾಣ ಅವರ ರಚನೆಯ “ಸೀತಾ ಪ್ರಲಾಪ” ಕಥೆ ಪ್ರಥಮ ಸ್ಥಾನಿಯಾಗಿ ಹೂರಹೊಮ್ಮಿತು.
ಮಣಿಪಾಲ ಮಾಹೆಯಲ್ಲಿ ಉದ್ಯೋಗಿಯಾಗಿರುವ ಮಂಜುನಾಥ್ ಹಿಲಿಯಾಣ ಕನ್ನಡದ ಯುವ ಕಥೆಗಾರರಾಗಿ ಗಮನ ಸೆಳೆಯುತ್ತಿದ್ದಾರೆ. ಅವರ ರಚನೆಯ “ಸೀತಾ ಪ್ರಲಾಪ” ಕಥೆ ಕುಂದಾಪುರ ನೆಲ ಭಾಷೆ ನಂಬಿಕೆಗಳ ಸುತ್ತ ಹೆಣೆದ ಸಾಹಿತ್ಯಪೂರ್ಣ ಸೊಗಡಿನ ವಿಶಿಷ್ಠ ಕಥೆಯಾಗಿದೆ.