ಮಂಗಳೂರು(ಜೂ.೧೬, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಿತ್ತು ತಿನ್ನುವ ಬಡತನದ ನಡುವೆ ಮನೆಯ ಆಧಾರಸ್ಥಂಭವೇ ಅಪಘಾತಕ್ಕೆ ಈಡಾಗಿ ಕೋಮಾ ಸ್ಥಿತಿಗೆ ಜಾರಿದೆ. ಸಂಸಾರದ ನೊಗ ಹೊತ್ತ ವ್ಯಕ್ತಿಗೆ ಅಪಘಾತವಾಗಿ ಹಾಸಿಗೆ ಹಿಡಿದರೆ ಸಂಸಾರ ಹೇಗೆ ತತ್ತರಿಸುತ್ತದೆ ಎಂಬುದಕ್ಕೆ ಪದ್ಮನೂರಿನ ಶಿವರಾಮ ಕುಲಾಲ್ ಅವರ ಜೀವನವೇ ಸಾಕ್ಷಿ.
ಶಿವರಾಮ ಅವರು ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಾ ಬರೋ ಅಲ್ಪ ಮೊತ್ತದ ಆದಾಯದಲ್ಲಿಯೇ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಸಲಹುತ್ತ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಶಿವರಾಮ ಕ್ರೂರ ವಿಧಿಯಾಟಕ್ಕೆ ಸಿಲುಕಿ ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ನೋವಿನಲ್ಲಿ ನರಳುತ್ತಿರುವ ಕುಟುಂಬಕ್ಕೆ ಸಹೃದಯಿಗಳ ಸಾಂತ್ವನ ಬೇಕಿದೆ.
ಮನೆಗೆ ಆಧಾರವಾಗಿ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದ ಕಿನ್ನಿಗೋಳಿ ಸಮೀಪದ ಪದ್ಮನೂರಿನವರಾದ ಶಿವರಾಮರ ಪತ್ನಿ ತುಳಸಿ ಕುಲಾಲ್. ಇವರಿಗೆ ಮುಕೇಶ್ ಮತ್ತು ಮೋಕ್ಷಿತಾ ಎಂಬ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಕಳೆದ ಜೂನ್ 9ರಂದು ಶಿವರಾಮ ಅವರು ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಬಸ್ಸಿನಲ್ಲಿ ಹಿಂತಿರುವಾಗ ಘೋರ ದುರಂತವೊಂದು ಸಂಭವಿಸಿದೆ. ತುಂಬು ಪ್ರಯಾಣಿಕರಿದ್ದ ಬಸ್ಸು ಮೂಲ್ಕಿ-ಮೂಡಬಿದ್ರೆ ರಸ್ತೆಯ ಹೊಸಕಾಡಿನ ರಸ್ತೆಯ ತಿರುವಿನಲ್ಲಿ ಸಾಗುತ್ತಿದ್ದಂತೆ ಬಾಗಿಲ ಬಳಿ ಇದ್ದ ಶಿವರಾಮ ಅವರು ಅಚಾನಕ್ ಆಗಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ಸಂದರ್ಭ ತಲೆಗೆ ಗಂಭೀರ ಏಟು ತಗುಲಿ ಪ್ರಜ್ಞೆ ಕಳಕೊಂಡ ಅವರನ್ನು ಕೂಡಲೇ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಯಿತು.
ಕೋಮಾ ಸ್ಥಿತಿಯಲ್ಲಿ..
ತಲೆಯ ಎಡಭಾಗಕ್ಕೆ ತೀವ್ರ ತರದ ಏಟಿನಿಂದ ಜರ್ಜರಿತರಾದ ಶಿವರಾಮ ಕೋಮಾ ಸ್ಥಿತಿಗೆ ಜಾರಿದ್ದು, ವೈದ್ಯರ ಸತತ ಪ್ರಯತ್ನದಿಂದ ಪ್ರಸ್ತುತ ಕೃತಕ ಉಸಿರಾಟದಿಂದ ಹೊರಬಂದು ಸ್ವಯಂ ಉಸಿರಾಟ ನಡೆಸುತ್ತಿದ್ದಾರಾದರೂ ವಾರಗಳೇ ಕಳೆದರೂ ಕೋಮಾ ಸ್ಥಿತಿಯಿಂದ ಹೊರಬಂದಿಲ್ಲ. ಇವರು ಸಹಜ ಸ್ಥಿತಿಗೆ ಮರಳಲು ತಿಂಗಳುಗಳೇ ಬೇಕಾಗಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಒಂದೂವರೆ ಲಕ್ಷ ರೂ ಮೀರಿದೆ. ತಮ್ಮ ಒಡವೆಗಳನ್ನೆಲ್ಲಾ ಮಾರಿ, ತಮ್ಮ ಸಂಗ್ರಹದ ಎಲ್ಲಾ ಹಣವನ್ನು ಜೊತೆಗೆ ಬಡ್ಡಿಗೆ ಸಾಲ ಪಡೆದು ಇದುವರೆಗೆ ಚಿಕಿತ್ಸೆಗಾಗಿ ಖರ್ಚು ಮಾಡಿರುವ ಶಿವರಾಮರ ಪತ್ನಿ ತುಳಸಿ, ಮುಂದಿನ ಚಿಕಿತ್ಸಾ ವೆಚ್ಚದ ಹಣ ಹೊಂದಿಸಲಾಗದೇ ಪರದಾಡುತ್ತಿದ್ದಾರೆ. ಚಿಕಿತ್ಸಾ ವೆಚ್ಚದ ಕಾರಣಕ್ಕಾಗಿ ಇದೀಗ ಶಿವರಾಮ ಅವರನ್ನು ಶ್ರೀನಿವಾಸ ಆಸ್ಪತ್ರೆಯಿಂದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆರವು ನೀಡುವಿರಾ..?
ಶಿವರಾಮರ ಜೀವನ್ಮರಣ ಹೋರಾಟದಲ್ಲಿ ಗೆಲುವು ಸಿಗಬೇಕಾದರೆ ತಕ್ಷಣ ಬೇಕಾಗಿರುವುದು ಹಣಕಾಸಿನ ವ್ಯವಸ್ಥೆ. ಇವರ ಜೀವ ಉಳಿಸಲು ಹಣ ಹೊಂದಿಸುವುದು ಹೇಗೆ ಎನ್ನುವುದೇ ಈ ಕುಟುಂಬಕ್ಕಿರುವ ಚಿಂತೆ. ಹೆಚ್ಚೇನು ಕಲಿಯದ ಶಿವರಾಮರ ಮಗ ಮುಕೇಶ ಗ್ಯಾರೇಜ್ ನಲ್ಲಿ ವಾಹನಕ್ಕೆ ಪಾಲಿಶ್ ಹಾಕುವ ಕೆಲಸ ಮಾಡುತ್ತಾನೆ. ಜೆರಾಕ್ಸ್ ಅಂಗಡಿಯಲ್ಲಿದ್ದ ಮಗಳು ಮೋಕ್ಷಿತಾ ಇದೀಗ ಕೆಲಸ ಬಿಟ್ಟು ತಂದೆಯ ಆರೈಕೆ ಜೊತೆಗೆ ಮನೆಗೆಲಸ ಮಾಡುತ್ತಿದ್ದಾಳೆ. ಈ ಮಧ್ಯೆ ಪತಿಯ ಚಿಕಿತ್ಸೆ, ಮನೆ ನಿರ್ವಹಣೆಗಾಗಿ ಪತ್ನಿ ತುಳಸಿ ಅವರು ಹೋಟೆಲೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿದ್ದಾರೆ. ಇಂಥ ನೋವಿನಲ್ಲಿ ನರಳುತ್ತಿರುವ ಕುಟುಂಬಕ್ಕೆ ದಾನಿಗಳ ಸಾಂತ್ವನ ಬೇಕಿದೆ. ಸಹೃದಯಿಗಳು, ಸಂಘ-ಸಂಸ್ಥೆಗಳು ಧನ ಸಹಾಯ ನೀಡಿದರೆ ಶಿವರಾಮದ ಪ್ರಾಣ ಉಳಿಸಬಹುದು ಎನ್ನುವ ನಿರೀಕ್ಷೆಯಿಂದ ದೈನ್ಯದಿಂದಲೇ ಸಾರ್ವಜನಿಕರ ನೆರವನ್ನು ಯಾಚಿಸುತ್ತಿದ್ದಾರೆ. ನೀವು ನೀಡುವ ಹಣದಿಂದ ಇವರ ಬಾಳಲ್ಲಿ ಹೊಸ ಭರವಸೆ ಮೂಡಿಸಬಹುದು.
ಧನ ಸಹಾಯ ಮಾಡಲು ಇಚ್ಛಿಸುವವರು ಶಿವರಾಮ ಅವರ ಪುತ್ರಿ ಮೋಕ್ಷಿತಾ ಅವರ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.
Mokshitha,
Corporation Bank
Branch Kinnigoli,
SB A/c No. 025500101008086
IFSC code : CORP 0000255
Phone : 8884227498
ಚಿತ್ರ-ಮಾಹಿತಿ: ಹೇಮಂತ್ ಕುಮಾರ್, ಕಿನ್ನಿಗೋಳಿ