ಹಳೆಯಂಗಡಿ(ಜೂ.೧೦, ಕುಲಾಲ್ ವರ್ಲ್ಡ್ ಡಾಟ್): ನಮ್ಮ ಸಮಾಜವು ವಿಶಿಷ್ಟವಾಗಿ ಬೆಳೆಯಬೇಕು. ಸಾಧನೆ ಮಾಡುವವರನ್ನು ನಾವು ಗುರುತಿಸಬೇಕು. ಹಾಗೆ ಗುರುತಿಸಿದಾಗ ಅವರ ಸಾಧನೆಯು ಇನ್ನಷ್ಟು ಮಂದಿಗೆ ಸ್ಪೂರ್ತಿಯಾಗುತ್ತದೆ. ಊರಿನ ಯುವಕರನ್ನು ಸಂಘಟಿಸಿ ಸ್ಥಳೀಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುವ ಮೂಲಕ `ಕುಲಾಲ ಜವನೆರ್’ ಇತರರಿಗೆ ಮಾದರಿಯಾಗಿದೆ ಎಂದು ಖ್ಯಾತ ವಕೀಲ ರಾಮ್ ಪ್ರಸಾದ್ ಹೇಳಿದರು.
ತೋಕೂರು ಎಸ್ ಕೋಡಿಯಲ್ಲಿರುವ ಕುಲಾಲ ಭವನದಲ್ಲಿ ಜೂ.10ರಂದು ತೋಕೂರಿನ ಕುಲಾಲ ಸಂಘದ ಆಶ್ರಯದಲ್ಲಿ ಸ್ಥಳೀಯ ಕುಲಾಲ ಜವನೆರ್ ಸಂಯೋಜನೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ ಇನ್ನಷ್ಟು ಸಾಧನೆ ಮಾಡಲಿ. ಜೊತೆಗೆ ಇವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮವನ್ನು ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಉದ್ಘಾಟಿಸಿದರು. ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಜಿಪಂ ಸದಸ್ಯ ವಿನೋದ್ ಬೊಳ್ಳೂರು, ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷೆ ಲೀಲಾ ಬಂಜನ್, ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಹಳೆಯಂಗಡಿ, ಎಂ. ಜಿ ರಾಮಣ್ಣ ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.
ಕುಲಾಲ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಲಾಲ್ ಸಿದ್ಧಕಟ್ಟೆ `ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ’ ಎಂಬ ವಿಷಯದ ಕುರಿತಂತೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಸಂಘದ ವ್ಯಾಪ್ತಿಯ ೧೩ ಮಂದಿ ಬಡ ಮಕ್ಕಳಿಗೆ ವಿದ್ಯಾರ್ಥಿ ಸಹಾಯಧನ, ೧೩ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಹಿತ ಸುಮಾರು ೬೦ ಸಾವಿರಕ್ಕೂ ಮಿಕ್ಕಿ ಸಹಾಯಧನ ವಿತರಿಸಲಾಯಿತು. ಯಕ್ಷ ಪ್ರತಿಭೆ ಸೃಜನ್, ಗಣೇಶ್ ಚಂದ್ರಮಂಡಲ, ನೃತ್ಯಪಟು ಕಾರ್ತಿಕ್ ಕುಲಾಲ್, ಯೋಧ ರೋಹಿತ್ ಕುಲಾಲ್, ಕಥೆಗಾರ ಮಂಜುನಾಥ ಹಿಲಿಯಾಣ ಮೊದಲಾದವರಿಗೆ ಸನ್ಮಾನ ಮಾಡಲಾಯಿತು.
ಉಮೇಶ್ ಬಂಗೇರ ಐಕಳ ಸ್ವಾಗತಿಸಿದರು. ಉದಯ ಕುಮಾರ್ ತೋಕೂರು ಪ್ರಾಸ್ತಾವಿಕ ಭಾಷಣಗೈದರು. ಶ್ರುತಿ ಕುಲಾಲ್, ನಮಿತಾ ಯೆಯ್ಯಾಡಿ ಪ್ರಾರ್ಥಿಸಿದರೆ, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮಣ ಬಿ.ಬಿ ಸಾಲ್ಯಾನ್ ವಂದನಾರ್ಪಣೆಗೈದರು.