ಕಾರ್ಕಳ(ಜೂ.೦೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಿಡ್ನಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಸಾಣೂರಿನ ಸಂತೋಷ್ ಮೂಲ್ಯ ಕುಟುಂಬಕ್ಕೆ `ಕುಲಾಲ ಚಾವಡಿ’ ವಾಟ್ಸಾಪ್ ಬಳಗದ ಮಿತ್ರರು ಧನಸಹಾಯ ನೀಡಿ ಸಾಂತ್ವನ ಹೇಳಿದರು.
ಸಾಣೂರಿನ ನಿವಾಸಿ ಸುಂದರ ಮೂಲ್ಯ ಮತ್ತು ಸುಂದರಿ ಅವರ ಪುತ್ರ 26ರ ಹರೆಯದ ತರುಣ ಸಂತೋಷ ಮೂಲ್ಯ ಕಳೆದ ಕೆಲವು ಸಮಯಗಳಿಂದ ಕಿಡ್ನಿ ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀರಾ ಬಡತನದಿಂದ ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾಗಿದ್ದ ಈ ಕುಟುಂಬದ ಕರುಣಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿತ್ತು. ಇದಕ್ಕೆಸಕಾರಾತ್ಮಕವಾಗಿ ಸ್ಪಂದಿಸಿದ `ಕುಲಾಲ ಚಾವಡಿ’ ಮಿತ್ರರು ಸಂದೇಶ್ ಕುಲಾಲ್ ಕಾರ್ಕಳ ಅವರ ನೇತೃತ್ವದಲ್ಲಿ ಹಣ ಸಂಗ್ರಹ ನಡೆಸಲು ತೀರ್ಮಾನಿಸಿದ್ದರು. ಹಣ ಸಂಗ್ರಹ ಅಭಿಯಾನ ಜಾರಿಯಲ್ಲಿರುವಾಗಲೇ ಚಿಕಿತ್ಸೆ ಫಲಕಾರಿಯಾಗದೇ ಸಂತೋಷ್ ಮೃತಪಟ್ಟಿದ್ದರು. ವಿಧಿಯ ಕ್ರೂರ ಲೀಲೆಗೆ ಕರುಳಕುಡಿಯನ್ನು ಕಳೆದುಕೊಂಡ ದುಃಖತಪ್ತ ಸುಂದರ ಮೂಲ್ಯರ ಕುಟುಂಬಕ್ಕೆ ಸಾಂತ್ವನ ರೂಪವಾಗಿ ಈ ಹಣವನ್ನು ನೀಡಲು ತೀರ್ಮಾನಿಸಿದ ಮಿತ್ರರು ತಾವು ಸಂಗ್ರಹಿಸಿದ 18,400 ರೂಪಾಯಿಯನ್ನು ಜೂ.೬ರಂದು ಸಂತೋಷ್ ಮನೆಗೆ ತೆರಳಿ ನೀಡಿ ದುಃಖದಲ್ಲಿ ಭಾಗಿಯಾದರು.
ಈ ಸಂದರ್ಭ `ಕುಲಾಲ ಚಾವಡಿ’ ಸ್ಥಾಪಕ ಸಂತೋಷ್ ಕುಲಾಲ್ ಪದವು, ಸುಧೀರ್ ಬಂಗೇರ ಕೆರ್ವಾಶೆ, ವಿಜೇಶ್ ಕುಲಾಲ್ ಸಾಣೂರು, ಕುಲಾಲ್ ವರ್ಲ್ಡ್ ನ ಹೇಮಂತ್ ಕುಲಾಲ್ ಕಿನ್ನಿಗೋಳಿ, ನಿತೇಶ್ ಕುಕ್ಯಾನ್ ಏಳಿಂಜೆ, ಹೃದಯ್ ಕುಲಾಲ್,ರವಿ ಕುಲಾಲ್ ಕಡ್ತಲ, ಉದಯ್ ಕುಲಾಲ್ ಕಳತ್ತೂರು, ರಶ್ಮಿಕುಲಾಲ್ ಪದವು, ರವಿರಾಜ್ ಆಚಾರ್ಯ ಜೊತೆಗಿದ್ದರು.