ಬಂಟ್ವಾಳ(ಮೇ.೧೯, ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಜೀವನದಲ್ಲಿ ಎಲ್ಲವೂ ಇದ್ದರೂ ಏನೂ ಇಲ್ಲ ಎಂದು ಕೊರಗುವವರ ಸಂಖ್ಯೆಯೇ ಹೆಚ್ಚಾಗಿರುವ, ಕಲಿಯುವ ಮನಸ್ಸಿಲ್ಲದೆ ವಿನಾಕಾರಣ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಉದಾಸೀನ ಮಾಡುವ ವಿದ್ಯಾರ್ಥಿಗಳು ಅಧಿಕವಾಗಿರುವ ಈ ಸಮಯದಲ್ಲಿ ಸಮಸ್ಯೆಗಳ ಸರಮಾಲೆಯೇ ಮನೆಯೊಳಗಿದ್ದರೂ, ವಿಧಿ ಎಷ್ಟೇ ಮುನಿಸಿಕೊಂಡಿದ್ದರೂ ಹತ್ತನೇ ತರಗತಿ ಪರೀಕ್ಷೆಯಲ್ಲಿ 471 ಅಂಕಗಳನ್ನು ಪಡೆದು ಉತ್ತೀರ್ಣಳಾದ ಭಾಗಶ್ರೀ ಎಲ್ಲರ ಪಾಲಿಗೆ ಆದರ್ಶಪ್ರಾಯಳಾಗಿದ್ದಾಳೆ ಎಂದರೆ ತಪ್ಪಲ್ಲ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೂರಿಯಾಳದ ಕೇಶವ ಕುಲಾಲ್ ಹಾಗೂ ರಾಜೀವಿ ದಂಪತಿಗಳ ಇಬ್ಬರು ಹೆಣ್ಣು ಮಕ್ಖಳಲ್ಲಿ ಕಿರಿಯವಳು ಭಾಗ್ಯಶ್ರೀ ಕುಲಾಲ್. ತಂದೆಗೆ ಸೊಂಟದಿಂದ ಕೆಳಗೆ ಬಲವೇ ಇಲ್ಲ. ಇದೇ ಸಮಸ್ಯೆ ಕಿರಿಯ ಮಗಳು ಭಾಗ್ಯಶ್ರೀಗೂ ಬಂದಾಗ ಹೆತ್ತವರ ಸಂಕಟ ಹೇಳತೀರದು. ಹಾಗೆಂದು ಕಣ್ಣೀರು ಹಾಕುತ್ತಾ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ಟೊಂಕ ಕಟ್ಟಿ ನಿಂತರು ಅವಳ ತಾಯಿ ರಾಜೀವಿ.
ಅಂಗನವಾಡಿಯಿಂದ ಹತ್ತನೇ ತರಗತಿಯವರೆಗೂ ಮಗಳನ್ನು ಎತ್ತಿಕೊಂಡೇ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಮಗಳ ಶಾಲೆಯಲ್ಲಿಯೇ ಕುಳಿತು ಅವಳ ಮೂಲಭೂತ ಅಗತ್ಯಗಳನ್ನು ಗಮನಿಸುತ್ತಿದ್ದರು. ಅಲ್ಲಿ ಸುಮ್ಮನೆ ಕುಳಿತಿರಲು ಸಾಧ್ಯವಾಗದೇ ಬೀಡಿ ಕಟ್ಟುವ ಕಾಯಕವನ್ನೇ ಮಾಡುತ್ತಾ ಒಂದಿಷ್ಟು ಸಂಪಾದನೆಯ ಮಾರ್ಗವನ್ನೂ ಮಾಡಿಕೊಂಡಿದ್ದಾರೆ. ಮೊದಮೊದಲು ಶಾಲೆಯಲ್ಲಿ ಬೀಡಿ ಕಟ್ಟುವ ಬಗ್ಗೆ ವಿರೋಧ ವ್ಯಕ್ತವಾದರೂ ಅಲ್ಲಿನ ಶಿಕ್ಷಕಿಯರ ಮತ್ತು ಆಡಳಿತ ಮಂಡಳಿಯ ಉದಾರ ಮನಸ್ಸಿನಿಂದಾಗಿ ಅವರು ಸಮಯ ಕಳೆಯುವುದು ಸಾಧ್ಯವಾಯಿತು.
ಲೊರೆಟ್ಟೊ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿದ್ದ ಈ ಹುಡುಗಿಯನ್ನು ಅಮ್ಮ ಆಟೋದಲ್ಲಿಯೇ ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ಆಟೋಗೆ ತಿಂಗಳಿಗೆ 1500 ರೂಪಾಯಿ ಬಾಡಿಗೆ. ತಂದೆ ಮನೆಯಲ್ಲಿಯೇ ಅಂಗಡಿಯನ್ನು ನಡೆಸಿಕೊಂಡಿದ್ದಾರೆ. ಸಣ್ಣ ಅಂಗಡಿ ಬರುವ ಆದಾಯ ಅಷ್ಟಕಷ್ಟೆ. ಹಿರಿಯ ಮಗಳು ವಿದ್ಯಾಶ್ರೀಗೂ ಸ್ವಲ್ಪ ಕಾಲಿನ ಸಮಸ್ಯೆ ಇದೆ. ಅವಳು ಎಸ್.ವಿ.ಎಸ್. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಗ ಹತ್ತನೆ ತರಗತಿಯಲ್ಲಿ ಮಗಳು ಒಳ್ಳೆಯ ಅಂಕಗಳನ್ನೇ ತೆಗೆದುಕೊಂಡಿದ್ದಾಳೆ ಎನ್ನುವುದು ಅವರೆಲ್ಲರಿಗೂ ಖುಷಿಯ ವಿಷಯ. ಆದರೆ ಅವರ ಖುಷಿಯನ್ನು ನೋಡದ ವಿಧಿ ಅವರಿಗೆ ಮತ್ತೊಮ್ಮೆ ಏಟು ಕೊಟ್ಟಿದೆ. ಭಾಗ್ಯಶ್ರೀಯ ತಂದೆಯ ತಾಯಿ ಸೌಖ್ಯವಿಲ್ಲದೆ ಮಲಗಿದ ಪರಿಸ್ಥಿತಿಯಲ್ಲಿ ಇದ್ದಾರೆ. ಅವರನ್ನು ಕೂಡ ನೋಡಿಕೊಳ್ಳಬೇಕಾದ ಅನಿವಾರ್ಯತೆ ರಾಜೀವಿಯವರಿಗೆ ಇದೆ. ಹೀಗಾಗಿ ಮಗಳ ಮುಂದಿನ ವಿದ್ಯಾಭ್ಯಾಸ ಹೇಗೆ ಎತ್ತ ಎಂಬ ಆತಂಕದ ಪರಿಸ್ಥಿತಿಯಲ್ಲಿ ತಂದೆ ತಾಯಿಯಿದ್ದಾರೆ. ಒಂದು ವೇಳೆ ಈ ಸಮಸ್ಯೆಗೆ ಏನಾದರೂ ಪರಿಹಾರ ಹುಡುಕಿ ಕಾಲೇಜಿಗೆ ದಾಖಲು ಮಾಡೋಣವೆಂದರೆ ಬೆಂಜನಪದವು ಕಾಲೇಜಿಗೆ ಹೋಗಬೇಕು. ಅಲ್ಲಿಗೆ ಹೋಗಬೇಕಾದರೆ ಆಟೋ ಬಾಡಿಗೆ ತಿಂಗಳಿಗೆ 7000 ರೂಪಾಯಿ. ಅದನ್ನು ಹೊಂದಿಸಿಕೊಳ್ಳುವುದು ಅವರ ಪಾಲಿಗೆ ಕಷ್ಟಕರ ವಿಷಯ. ಆದರೂ ಅಕ್ಕನಂತೇ ಕಾಮರ್ಸ್ ಕಲಿಯಬೇಕು ಎನ್ನುವುದು ಭಾಗ್ಯಶ್ರೀಯ ಆಸೆ. ಅಂಗವೈಕಲ್ಯವಿದ್ದರೂ ವಿಶಾಲವಾದ ಆ ಮುಗ್ಧ ಮುಖದಲ್ಲಿ ಮೂಡುವ ಸುಂದರ ನಗು ಎಂತಹವರಲ್ಲಾದರೂ ಜೀವನೋತ್ಸಾಹವನ್ನು ಮೂಡಿಸಬಹುದು ಎಂಬುವುದರಲ್ಲಿ ಸಂಶಯವಿಲ್ಲ.
ಭಾಗ್ಯಶ್ರೀಯದ್ದು ತುಂಬಾ ಬಡ ಕುಟುಂಬ. ಅವರ ಪರಿಸ್ಥಿತಿ ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ಆದರೆ ಸಾಧಿಸುವ ಛಲ ಅವರಲ್ಲಿದೆ. ಭಾಗ್ಯಶ್ರೀ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳನ್ನೇ ಪಡೆದಿದ್ದಾಳೆ. ಅವಳು ಉತ್ತಮ ವಿದ್ಯಾಭ್ಯಾಸವನ್ನು ಪಡೆಯಲಿ. ಅದಕ್ಕಾಗಿ ಎಲ್ಲರ ಸಹಕಾರ ಸಿಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.
`500 ರ ಮೇಲೆ ಅಂಕಗಳನ್ನು ತೆಗೆಯುವ ಭರವಸೆ ಇತ್ತು. ಆದರೆ ನಿರೀಕ್ಷೆಯಷ್ಟು ಅಂಕಗಳು ಬರಲಿಲ್ಲ. ಆದರೂ ತೊಂದರೆಯಲ್ಲಿ ಇಷ್ಟು ಅಂಕಗಳು ಬಂದಿರುವುದು ಖುಷಿ ತಂದಿದೆ’ ಎನ್ನುತ್ತಾಳೆ ಭಾಗ್ಯಶ್ರೀ.
`ತುಂಬಾ ಕಷ್ಟ ಪಡುವ ಹುಡುಗಿ. ಅಂಗವೈಕಲ್ಯವಿದ್ದರೂ ಯಾವತ್ತೂ ದುಃಖಿಸಿದವಳಲ್ಲ. ಸದಾಕಾಲ ಸಂತೋಷದಿಂದ ಇರುವವಳು. ೭ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ೮ ನೇ ತರಗತಿಗೆ ಆಂಗ್ಲಮಾಧ್ಯಮಕ್ಕೆ ಬಂದಾಗ ಮೊದಮೊದಲು ಕಷ್ಟವಾದರೂ ಅದನ್ನೆಲ್ಲ ಮೀರಿ ಇಂದು ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ನಮ್ಮೆಲ್ಲರ ಪಾಲಿಗೆ ಅವಳು ಅಚ್ಚುಮೆಚ್ಚಿನ ಹುಡುಗಿಯಾಗಿದ್ದಾಳೆ’ ಎಂದು ಶಿಕ್ಷಕಿ ವಾಯ್ಲೆಟ್ ರೋಡ್ರಿಗಸ್ ತಿಳಿಸಿದ್ದಾರೆ.
ಭಾಗ್ಯಶ್ರೀ ಸಂಕಷ್ಟಕ್ಕೆ ನೆರವಾಗಬಯಸುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.
Bhagyashri
Syndicate Bank Bantwal
SB A/c No. 013722100128960
IFSC Code: SYNB0000137
Mobile: 7259513180
________________________________________________________________________