ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 601 ಅಂಕ
ಮಂಗಳೂರು(ಮೇ.೧೦, ಕುಲಾಲ್ ವರ್ಲ್ಡ್ ನ್ಯೂಸ್) : ಒಳ್ಳೆಯ ಮಾರ್ಕ್ನಲ್ಲಿ ಪಾಸ್ ಆಗ್ತೀನಿ ಅಂತ ಗೊತ್ತಿತ್ತು. ಆದರೆ ಇಷ್ಟು ಅಂಕ ಪಡೆದು ಶಾಲೆಗೆ ಫಸ್ಟ್ ಬರ್ತೀನಿ ಅಂತ ನಿರೀಕ್ಷೆ ಇರಲಿಲ್ಲ’ ಎಂದು ಹೇಳಿಕೊಂಡವಳು ಹಳೆಯಂಗಡಿ ಪಡುಪಣಂಬೂರಿನ ಶ್ರೀ ನಾರಾಯಣ ಸನಿಲ್ ಸರಕಾರಿ ಪ. ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ರಕ್ಷಿತಾ. ಈಕೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 601 ಅಂಕ ಪಡೆದು ಶಾಲೆಯ ಇತಿಹಾಸದಲ್ಲಿಯೇ ಗರಿಷ್ಠ ಅಂಕಗಳ ಸಾಧನೆ ಮಾಡಿದ್ದಾಳೆ.
ಹೊಟೇಲ್ ಕಾರ್ಮಿಕರಾಗಿರುವ ಹಳೆಯಂಗಡಿ ಪಡುಪಣಂಬೂರು ನಿವಾಸಿ ಭಾಸ್ಕರ ಬಂಗೇರ ಮತ್ತು ಶಕುಂತಳಾ ದಂಪತಿಯ ಮೂವರು ಮಕ್ಕಳಲ್ಲಿ ರಕ್ಷಿತಾ ಕಿರಿಯಾಕೆ. ಸಣ್ಣ ಪ್ರಾಯದಿಂದಲೂ ಕಲಿಕೆಯಲ್ಲಿ ಹೊಂದಿದ್ದ ಅಪಾರ ಆಸಕ್ತಿ ಅವಳನ್ನು ಈ ಮಟ್ಟಕ್ಕೆ ತಂದಿದೆ. ಭವಿಷ್ಯದಲ್ಲಿ ತಾನು ಉಪನ್ಯಾಸಕಿ ಆಗಬೇಕು ಎಂದು ಕನಸು ಕಾಣುತ್ತಿರುವ ಈಕೆಗೆ ಹಿರಿಯ ಸಹೋದರರಾದ ರಾಕೇಶ್ ಹಾಗೂ ಅನಿಲ್ ಓದಿನಲ್ಲಿ ಸಹಕಾರ ನೀಡುತ್ತಿದ್ದಾರೆ. ‘ಸಹೋದರಿಯ ಸಾಧನೆ ನಮಗೆ ಖುಷಿಕೊಟ್ಟಿದೆ’ ಎಂದು ರಾಕೇಶ್ ಖುಷಿ ಹಂಚಿಕೊಂಡರು. ನಾವು ಮೂವರೂ ಇದೇ ಸರಕಾರಿ ಶಾಲೆಯಲ್ಲಿ ಕಲಿತವರು ಎಂದು ಹೇಳಲು ಮರೆಯಲಿಲ್ಲ. ರಕ್ಷಿತಾ ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
——————————————————————————————————————————————–