ಮಂಗಳೂರು(ಮೇ.೧೦, ಕುಲಾಲ್ ವರ್ಲ್ಡ್ ನ್ಯೂಸ್): ರಾಜ್ಯದಲ್ಲಿ ಸುಮಾರು 20 ಲಕ್ಷ ಹಾಗೂ ದ.ಕ. ಜಿಲ್ಲೆಯಲ್ಲಿ 4 ಲಕ್ಷದಷ್ಟು ಕುಲಾಲರಿದ್ದು, ಕಾಂಗ್ರೆಸ್-ಜೆಡಿಎಸ್ ಈ ಸಮುದಾಯಕ್ಕೆ ನ್ಯಾಯ ಒದಗಿಸಿಲ್ಲ. ಆದರೆ, ಬಿಜೆಪಿ ರಾಜಕೀಯವಾಗಿ ಎಲ್ಲಾ ರೀತಿಯ ಸಹಕಾರ ನೀಡಿದೆ. ಆದ್ದರಿಂದ ಬಾರಿಯ ಚುನಾವಣೆಯಲ್ಲಿ ಕುಲಾಲರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಮನವಿ ಮಾಡಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮೇ. ೧೦ರಂದು ಸುದ್ದಿಗೋಷ್ಠಿ ನಡೆಸಿದ ಅವರು 10 ವರ್ಷಗಳ ಹಿಂದೆ ಕುಲಾಲ ಸಮುದಾಯ ಸಂಘಟಿತವಾಗಿದೆ. ಅದರಂತೆ ಕುಂಬಾರ ಮಹಾಸಂಘದ ಬೇಡಿಕೆಯಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಕುಂಭಕಲಾ ನಿಗಮ ಸ್ಥಾಪಿಸಿದ್ದರು. ಕುಂಬಾರ ಸಮುದಾಯದ ಹರಿಕಾರ ತ್ರಿಪದಿಬ್ರಹ್ಮ ಸರ್ವಜ್ಞ ಜಯಂತಿಯನ್ನು ಆಚರಿಸಲು ಪ್ರೇರಣೆ ನೀಡಿದ್ದರು. ಬೆಂಗಳೂರಿನಲ್ಲಿ ಕುಂಬಾರ ಭವನಕ್ಕೆ ನಿವೇಶನ ಹಾಗೂ ಭವನ ನಿರ್ಮಿಸಲು 1 ಕೋ.ರೂ. ನೀಡಿತ್ತು. ದ.ಕ.ಜಿಲ್ಲೆಯಲ್ಲಿ ಕಸ್ತೂರಿ ಪಂಜ ಅವರಿಗೆ ದ.ಕ. ಜಿಪಂ ಉಪಾಧ್ಯಕ್ಷ ಸ್ಥಾನ, ಮನಪಾದಲ್ಲಿ ರೂಪಾ .ಡಿ. ಬಂಗೇರರಿಗೆ ಪ್ರತಿಪಕ್ಷದ ನಾಯಕಿ, ರಾಜೇಂದ್ರ ಕುಮಾರ್ಗೆ ಮನಪಾ ಉಪಮೇಯರ್, ಅಶ್ವಿನ್ ಕುಲಾಲ್ಗೆ ಮನಪಾ ಸದಸ್ಯತ್ವ, ರಾಜೀವಿ ಕೆಂಪುಮಣ್ಣು ಅವರಿಗೆ ಮಂಗಳೂರು ತಾಪಂ ಉಪಾಧ್ಯಕ್ಷ ಸ್ಥಾನ.., ಹೀಗೆ ಅನೇಕ ರೀತಿಯಲ್ಲಿ ಅವಕಾಶ ನೀಡಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಕರವೇ ದ.ಕ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಮಂಗಳೂರು ತಾ.ಪಂ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು, ವಿಹಿಂಪ ಮುಖಂಡ ಗೋಪಾಲ್ ಕುತ್ತಾರ್, ಲಲೇಶ್ ಕುಮಾರ್ ಅತ್ತಾವರ ಉಪಸ್ಥಿತರಿದ್ದರು.