ಕುಷ್ಟಗಿ : ಮೂಳೆ ಮುರಿತಕ್ಕೊಳಗಾದ ಅನಾಥ ವೃದ್ಧೆಗೆ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ನೀಡದೇ ನಾಲ್ಕು ದಿನ ವಿಳಂಬ ಮಾಡಿರುವ ಘಟನೆ ನಡೆದಿದೆ.
ಜೋಗತಿಯಾಗಿರುವ ಲಿಂಗನಬಂಡಿ ಗ್ರಾಮದ ಗೌರಮ್ಮ ಕುಂಬಾರ ((70ವರ್ಷ)ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಮೇ 4ರ ಸಂಜೆ ತಾಲೂಕಿನ ನಿಡಶೇಸಿ ಗ್ರಾಮಕ್ಕೆ ಬಂದಿದ್ದಾಗ ಚರಂಡಿಗೆ ಆಯತಪ್ಪಿ ಬಿದ್ದು ಬಲಗಾಲಿನ ಎಲುಬು ಮುರಿದಿತ್ತು. ಗ್ರಾಮಸ್ಥರು ತಕ್ಷ ಣ ವೃದ್ಧೆಯನ್ನು ಕುಷ್ಟಗಿಯ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಕರ್ತವ್ಯದ ಮೇಲಿದ್ದ ವೈದ್ಯಾಧಿಕಾರಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಂಎಲ್ಸಿ ಮಾಡಿಸಿದ್ದಾರೆ. ಕಾಲಿನ ಎಲುಬು ಮುರಿದಿರುವುದು ವೈದ್ಯಾಧಿಕಾರಿಗೆ ಗೊತ್ತಿತ್ತು, ವೃದ್ಧೆಯ ದಾಖಲಾತಿ ಪತ್ರದಲ್ಲಿ ಎಲಬು ಮುರಿತದ ಬಗ್ಗೆ ನಮೂದಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ತಜ್ಞರು ಇಲ್ಲದ್ದಕ್ಕೆ ಕೊಪ್ಪಳದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದು ಎಂದು ನಿಡಶೇಸಿ ಗ್ರಾಮಸ್ಥರಿಗೆ ತಿಳಿಸಿದ್ದರು. ವೃದ್ಧೆ ಅನಾಥೆಯಾಗಿರುವುದರಿಂದ ಆಕೆಯ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಜಿಲ್ಲಾಸ್ಪತ್ರೆಗೆ ಕಳುಹಿಸುವುದಾಗಿ ವೈದ್ಯಾಧಿಕಾರಿ ಹೇಳಿದ್ದರಾದರೂ ಆಕೆಗೆ ಜತೆಗೆ ಸಹಾಯಕರಾರಯರೂ ಇಲ್ಲದ್ದಕ್ಕೆ ಕಳುಹಿಸಲಾಗದೇ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನಡೆಸಿದರು. ಎಲುಬು ಮುರಿದ ಭಾಗಕ್ಕೆ ಬಟ್ಟೆ ಸುತ್ತಲಾಗಿದೆ. ನಿತ್ಯ ಆ್ಯಂಟಿ ಬಯೋಟಿಕ್ ಮತ್ತು ಪೇನ್ ಕಿಲ್ಲರ್ ಇಂಜೆಕ್ಷ ನ್ ನೀಡಲಾಗಿದೆ. ನಾಲ್ಕು ದಿನಗಳಾದರೂ ಮುರಿದ ಎಲುಬು ಜೋಡಿಸುವ ಕೆಲಸವಾಗಲಿಲ್ಲ. ಎಲುಬು ಮುರಿದ ಭಾಗದಲ್ಲಿ ಬಾವು ಬಂದು ಕಪ್ಪು ಬಣ್ಣಕ್ಕೆ ತಿರುಗಲಾರಂಭಿಸಿತು. ಕಾಲಿನ ನೋವಿನ ಕಾರಣಕ್ಕೆ ಕಳೆದ 4 ದಿನಗಳಿಂದ ವೃದ್ಧೆ ಊಟ ಮಾಡಲಿಲ್ಲ. ಮಲ ಮೂತ್ರ ವಿಸರ್ಜನೆಗೆ ನೆಲದ ಮೇಲೆ ಒಬ್ಬರೇ ತೆವಳುತ್ತಾ ಹೋಗುವ ದಯನೀಯ ಸ್ಥಿತಿ ಇತ್ತು. ವೃದ್ಧೆಗೆ ಚಿಕಿತ್ಸೆ ನೀಡಿದ್ದ ವೈದ್ಯಾಧಿಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಇಲ್ಲವೇ ತಾಲೂಕು ವೈದ್ಯಾಧಿಕಾರಿ ಗಮನಕ್ಕೆ ತಂದಿರಲಿಲ್ಲ. ಇನ್ನೂ ಎರಡು ದಿನ ಬಿಟ್ಟಿದ್ದರೆ ವೃದ್ಧೆಯ ಕಾಲಿಗೆ ಹುಳು ಬೀಳುವ ಸಾಧ್ಯತೆಗಳಿದ್ದವು.
ಈ ಬಗ್ಗೆ ಮಾಹಿತಿ ತಿಳಿದ ಇನ್ನರ್ ವೀಲ್ ಕ್ಲಬ್ನ ಕಾರ್ಯದರ್ಶಿ ಡಾ.ಪಿ.ಎಂ.ಪಾರ್ವತಿ, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ವೀರೇಶ ಬಂಗಾರಶೆಟ್ರು ವೃದ್ಧೆ ಬಳಿ ಬಂದು ವಿಚಾರಿಸಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಿ, ಕೊಪ್ಪಳದ ಜಿಲ್ಲಾಸ್ಪತ್ರೆಗೆ ವೃದ್ಧೆಯನ್ನು ಕಳುಹಿಸಲು ಏರ್ಪಾಡು ಮಾಡುವಂತೆ ಕೇಳಿದರು. ಆಂಬ್ಯುಲೆನ್ಸ್ ಮೂಲಕ ವೃದ್ಧೆಯನ್ನು ಸೋಮವಾರ ಕೊಪ್ಪಳಕ್ಕೆ ಕಳುಹಿಸಲಾಯಿತು. ಅನಾಥರು, ದಿಕ್ಕಿಲ್ಲದವರು ಆನಾರೋಗ್ಯ ಪೀಡಿತರಾದಾಗ ವೈದ್ಯಾಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಮಾನವೀಯತೆ ಮೆರೆಯಬೇಕಾಗುತ್ತದೆ. ಅನಾಥೆ ಗೌರಮ್ಮ ಕುಂಬಾರಗೆ ಯಾರೂ ದಿಕ್ಕಿಲ್ಲ ಎಂದು ಹೆಚ್ಚಿನ ಚಿಕಿತ್ಸೆಗೆ ಕಳುಹಿಸದೇ ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲೇ ಉಳಿಸಿಕೊಂಡದ್ದು ಎಷ್ಟು ಸರಿ? ಎಂದು ಸಾರ್ವಜನಿಕರು ಪ್ರಶ್ನಿಸಿದರು.
News courtesy : Vijaya Karnataka