ಬೆಳಗಾವಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಈಕೆ ಇರುವುದು ಗುಡಿಸಲಿನಲ್ಲಿ. ಅದಕ್ಕೆ ಬಾಗಿಲು ಇಲ್ಲ, ವಿದ್ಯುತ್ ಸಂಪರ್ಕವಂತೂ ಇಲ್ಲವೇ ಇಲ್ಲ. ಅಂತಹ ಮನೆಯಲ್ಲಿಯೇ ದೀಪದ ಬೆಳಕಲ್ಲಿ ಓದಿ, ಬಡತನವನ್ನು ಮೆಟ್ಟಿ ನಿಂತು ಪಿಯೂಸಿ ವಿಜ್ಞಾನ ಪರೀಕ್ಷೆಯಲ್ಲಿ 89.32% ಅಂಕ ಗಳಿಸಿ ಉನ್ನತ ಸಾಧನೆ ಮಾಡಿದ ಬಾಲಕಿಯೊಬ್ಬಳ ಯಶೋಗಾಥೆ ಇದು.
ತಾಲ್ಲೂಕಿನ ಚಿಂಚಣಿ ಗ್ರಾಮದ ಶ್ರುತಿ ರಾಮು ಕುಂಬಾರ ಎಂಬುವವರೇ ಆ ಸಾಧಕಿ. ಪಟ್ಟಣದ ಸಿಎಲ್ಇ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಶ್ರುತಿ, 2017–18ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಭೌತಶಾಸ್ತ್ರದಲ್ಲಿ 88, ರಸಾಯನಶಾಸ್ತ್ರದಲ್ಲಿ 91, ಗಣಿತದಲ್ಲಿ 97, ಜೀವಶಾಸ್ತ್ರದಲ್ಲಿ 89, ಇಂಗ್ಲಿಷ್ನಲ್ಲಿ 83 ಮತ್ತು ಹಿಂದಿ ವಿಷಯದಲ್ಲಿ 88 ಅಂಕ ಪಡೆದಿದ್ದಾರೆ.
ಚಿಂಚಣಿ ಗ್ರಾಮದ ಬಡ ದಂಪತಿ ಅನಸೂಯಾ ಮತ್ತು ರಾಮು ಕುಂಬಾರ ದಂಪತಿ ಪುತ್ರಿ ಶ್ರುತಿ. ತಂದೆ ಐದನೇ ಹಾಗೂ ತಾಯಿ ಏಳನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದವರು. ಆದರೆ, ತಮ್ಮ ಮಕ್ಕಳಿಗಾದರೂ ಒಳ್ಳೆಯ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ ಅನುಸೂಯಾ ಮತ್ತು ರಾಮು ಕುಂಬಾರ ದಂಪತಿ, ಮನೆಯಲ್ಲಿ ಕಿತ್ತು ತಿನ್ನುವ ಬಡತನದಲ್ಲಿಯೂ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತಿದ್ದಾರೆ.
ಶ್ರುತಿ ಅಕ್ಕ ಸುಜಾತಾ ಬಿ.ಎಸ್ಸಿ ಪದವಿಧರೆ. ಅಣ್ಣ ದುಂಡಪ್ಪಾ ಬಿ.ಕಾಂ. ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ತಮ್ಮ ಸಂತೋಷ 10ನೇ ತರಗತಿ ವಿದ್ಯಾರ್ಥಿ. ಈ ಕುಟುಂಬ ವಾಸಿಸುವ ಚಿಕ್ಕ ಗುಡಿಸಲಿನಲ್ಲಿ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲ. ಚಿಮಣಿ ಬೆಳಕಿನಲ್ಲೇ ಮಕ್ಕಳ ಓದು. ಹೀಗಾಗಿ, ಮಕ್ಕಳಿಗೆ ಅನುಕೂಲವಾಗಲಿ ಎಂದು ತಂದೆ ರಾಮು ಕುಂಬಾರ ಇತ್ತೀಚೆಗಷ್ಟೇ ಗುಡಿಸಲಿನಲ್ಲಿ ಸೋಲಾರ್ ಮೂಲಕ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ.
‘ತಂದೆ–ತಾಯಿ ಆಶಯ ಈಡೇರಿಸುವ ಉದ್ದೇಶದಿಂದ ಇಷ್ಟಪಟ್ಟು ಓದುತ್ತಿರುವ ಪರಿಣಾಮ ಒಳ್ಳೆಯ ಯಶಸ್ಸು ದೊರಕುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಶೇ 95.84 ಅಂಕಗಳೊಂದಿಗೆ ಗ್ರಾಮದ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದೆ. ಈ ಸಾಧನೆ ಗುರುತಿಸಿ ಅನೇಕ ದಾನಿಗಳು ಆರ್ಥಿಕ ನೆರವು ನೀಡಿದರು. ಚಿಕ್ಕೋಡಿಯ ಸಿಎಲ್ಇ ಸಂಸ್ಥೆಯು ತನ್ನ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡಲು ಅವಕಾಶ ನೀಡಿತು. ತಂದೆ–ತಾಯಿ ಪ್ರೇರಣೆ, ಗುರುಗಳ ಮಾರ್ಗದರ್ಶನ, ಶಿಕ್ಷಣ ಪ್ರೇಮಿಗಳ ನೆರವಿನೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಶೇ 89.33ರಷ್ಟು ಅಂಕ ಗಳಿಸಿದ್ದೇನೆ. ಮುಂಬರುವ ದಿನಗಳಲ್ಲಿ ಎಂ.ಎಸ್ಸಿ ಪದವಿ ಪಡೆದು ಉಪನ್ಯಾಸಕಿಯಾಗುವ ಕನಸಿದೆ’ ಎಂದು ಶ್ರುತಿ ಹೇಳಿದರು.