ಮಂಗಳೂರು(ಏ.೨೭): ರಾಜ್ಯದಲ್ಲಿ ಸುಮಾರು 20 ಲಕ್ಷ ಕುಂಬಾರರಿದ್ದು, 13 ಲಕ್ಷ ಜನ ಮತದಾರರಿದ್ದಾರೆ. ಆದರೆ, ಕಾಂಗ್ರೆಸ್ ಆಗಲಿ ಬಿಜೆಪಿಯಾಗಲೀ ಕುಂಬಾರ ಸಮುದಾಯಕ್ಕೆ ಶಾಸಕ ಸ್ಥಾನಕ್ಕೆ ಅವಕಾಶ ನೀಡಿಲ್ಲ ಎಂದು ಕುಂಬಾರ, ಕುಲಾಲ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರಾವಳಿಯಲ್ಲಿ ಬಂಟರು ಹಾಗೂ ಬಿಲ್ಲವ ಸಮುದಾಯದ ಬಳಿಕ ಅತೀ ಹೆಚ್ಚು ಸಂಖ್ಯೆಯಲ್ಲಿರುವುದು ಕುಂಬಾರ ಅಥವಾ ಕುಲಾಲ ಸಮುದಾಯ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 13 ಕ್ಷೇತ್ರಗಳಲ್ಲೂ ಯಾವುದೇ ಕುಲಾಲ ಅಭ್ಯರ್ಥಿಗೆ ಅವಕಾಶ ನೀಡಿಲ್ಲ. ಅಲ್ಲದೇ, ಇತರ ಯಾವುದೇ ರೀತಿಯ ಸಹಕಾರ ನೀಡುತ್ತೇವೆಂಬುದು ಕೂಡಾ ರಾಜಕಾರಣಿಗಳಿಂದ ಬಂದಿಲ್ಲ. ಕಾಂಗ್ರೆಸ್ ನವರು ಸೌಂದರ್ಯ ಮಂಜಪ್ಪನವರಿಗೆ ಮೂರನೇ ಬಾರಿಗೆ ಕೈ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಂಬಾರ ನಿಗಮ ತಂದಾಗ ಶಿವಕುಮಾರ ಚೌಡಶೆಟ್ಟರನ್ನು ಅಧ್ಯಕ್ಷರನ್ನಾಗಿಸುವ ಬಗ್ಗೆ ಸಿದ್ಧರಾಮಯ್ಯರು ಹೇಳಿದ್ದರು. ಅದರಂತೆ ಅಧ್ಯಕ್ಷರನ್ನಾಗಿಸಿದರೂ ಅವರಿಗೆ ಕುಳಿತುಕೊಳ್ಳಲು ಕಚೇರಿಯೇ ನಿರ್ಮಿಸಿಕೊಟ್ಟಿಲ್ಲ. 50 ಕೋಟಿ ರೂ. ಫಂಡ್ ಇದೆಯೆಂದು ಹೇಳಿದ್ದರು. ಆದರೆ, ಕುಳಿತುಕೊಳ್ಳಲು ಖುರ್ಚಿಯೂ ಇಲ್ಲ, ಕಚೇರಿಯೂ ಇಲ್ಲ. ಈ ರೀತಿ ಕುಂಬಾರ ಸಮುದಾಯವನ್ನು ಅವಮಾನ ಮಾಡಿ, ಕೆಳಮಟ್ಟದಲ್ಲಿ ನೋಡಲಾಗಿದೆ. ಬಿಜೆಪಿಯೂ ಕೂಡಾ ಕುಲಾಲ ಸಮುದಾಯ ಹಾಗೂ ಸಮುದಾಯದ ವಿಚಾರವಂತರನ್ನು ಬಳಸುತ್ತಿದೆ. ಆದರೆ, ಯಾವುದೇ ಸ್ಥಾನಮಾನ ನೀಡುವಲ್ಲಿ ವಿಫಲವಾಗಿದೆ. ವಿಧಾನಪರಿಷತ್ಗೆ ಕುಂಬಾರ ಸಮುದಾಯದವರನ್ನು ಯಾವ ಪಕ್ಷ ಉಮೇದುವಾರಿಕೆ ಮಾಡುತ್ತದೋ ಆ ಪಕ್ಷದ ಜತೆ ಕುಂಬಾರ ಸಮುದಾಯ ಹೋಗಲಿದೆ ಎಂದು ಕುಂಬಾರ, ಕುಲಾಲ ಸಮುದಾಯದ ಮುಖಂಡರು ಹೇಳಿದ್ದಾರೆ.
ಕುಲಾಲ ಸಮುದಾಯದೊಂದಿಗೆ ದಕ್ಷಿಣ ಕನ್ನಡ ಹಾಗೂ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯದ ಮುಖಂಡರೂ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎರಡು ಜಿಲ್ಲೆಗಳಲ್ಲಿ ರಾಷ್ಟ್ರೀಯ ಪಕ್ಷಗಳು ತಲಾ 2 ಟಿಕೆಟ್ ನೀಡಬೇಕಿತ್ತು. ಆದರೆ, ಸರಿಯಾದ ಪ್ರಾತಿನಿಧ್ಯ ನೀಡದೆ ಈ ದೊಡ್ಡ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಮುಂದಕ್ಕೆ ಯಾವುದೇ ಸರಕಾರ ಬಂದರೂ ಈ ಸಮುದಾಯದ ಮುಖಂಡರಿಗೆ ಸಚಿವ ಸ್ಥಾನ ನೀಡಬೇಕು. ಮುಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಈ ಸಮಾಜದ ಮುಖಂಡರು ಕುಳಿತು ಚರ್ಚಿಸುವ ವಿಷಯ ಬಹಳಷ್ಟಿದೆ ಎಂದು ಬಿಲ್ಲವ ಸಮಾಜದ ಮುಖಂಡರು ಕೂಡಾ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯಗಳಿಗೆ ರಾಷ್ಟ್ರೀಯ ಪಕ್ಷಗಳು ಸೂಕ್ತ ಸ್ಥಾನಮಾನ ನೀಡದಿರುವ ಬಗ್ಗೆ ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಅಸಮಾಧಾನ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಾಲಿಗೆ ವರವೂ ಆಗಿದ್ದು, ಯಾವುದೇ ಪಕ್ಷಗಳು ಸಮುದಾಯದ ಬಗ್ಗೆ ಒಲವು ತೋರಿಸಿದಲ್ಲಿ ಸಮುದಾಯಗಳ ಬೆಂಬಲವನ್ನೂ ಪಡೆದುಕೊಳ್ಳುವ ಅವಕಾಶವಿದೆ.
(ಕೃಪೆ : ಭರತ್ ರಾಜ್ ಕಲ್ಲಡ್ಕ, ನ್ಯೂಸ್ 18 ಕನ್ನಡ)