ಕಾರ್ಕಳ(ಏ.೨೫, ಕುಲಾಲ್ ವರ್ಲ್ಡ್ ನ್ಯೂಸ್): ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಗಾಂದೊಟ್ಟು ಈಶ್ವರ ಬಂಜನ್ ಮತ್ತು ರತ್ನಾ ದಂಪತಿಯ ಪುತ್ರ ಶಶಿಕಾಂತ್ ಬಂಗೇರ ಅವರ ಕುರಿತ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದುವರೆಗೆ ಮೂರು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತ ನೆರವಿನ ರೂಪದಲ್ಲಿ ಸಂಗ್ರಹವಾಗಿದೆ.
ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿರುವ ಶಶಿಕಾಂತ್ ಚಿಂತಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಈ ಹಿಂದೆ ವರದಿ ಮಾಡಿ, ಧನ ಸಹಾಯ ನೀಡುವಂತೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಆನಂದ ಕುಂಬಾರ ನೇತೃತ್ವದ ದೋಹಾ ಕತಾರ್ ಕುಲಾಲ ಮಿತ್ರರು ಹಾಗೂ ಇತರರು ಸೇರಿ ಒಟ್ಟು 70 ಸಾವಿರ ರೂ. ಕಳಿಸಿಕೊಟ್ಟಿದ್ದರು. ಬಳಿಕ ಬೆಳ್ಮಣ್ಣಿನ `ಹ್ಯುಮಾನಿಟಿ’ ತಂಡದ ದಾನಿಗಳಾದ ಆಸ್ಟ್ರೇಲಿಯಾದ ಸ್ಟ್ಯಾನಿ ಮತ್ತು ಲವೀನಾ ಮಾರ್ಟಿಸ್ ದಂಪತಿ 50 ಸಾವಿರ ರೂ. ನೀಡಿದ್ದರು.
ಹೆಸರು ತಿಳಿಸದ ದುಬೈಯ ದಾನಿಯೊಬ್ಬರು 7 ಸಾವಿರ, ಬೆಹರೈನ್ ಕುಲಾಲ ಮಿತ್ರರು ಸೇರಿ 12 ಸಾವಿರ, ಬೆಹರೈನ್ ನ ಉದ್ಯೋಗಿ ಸೀತಾರಾಮ್ ಬಂಗೇರ 8,341 ರೂ., ದೋಹಾ ಕತಾರ್ ಉದ್ಯೋಗಿ ರಾಜೇಶ್ ಕುಲಾಲ್ 42, 000 ರೂ, ಮಂಗಳೂರಿಯನ್ ಅಸೋಸಿಯೇಶನ್ ಆಫ್ ಸೌದಿ ಅರೇಬಿಯಾದ (MASA) ಸಂಘಟನೆಯು 25,000 ರೂ. ನೆರವು ನೀಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಇದಲ್ಲದೆ `ಕುಲಾಲ್ ವರ್ಲ್ಡ್’ ವರದಿ ಆಧರಿಸಿ `ಕುಲಾಲ ಚಾವಡಿ’ ವಾಟ್ಸಪ್ ತಂಡದ ಸದಸ್ಯರು ಶಶಿಕಾಂತ್ ಅವರ ಚಿಕಿತ್ಸೆಗೆ ಹಣ ಸಂಗ್ರಹ ನಡೆಸಿದ್ದು, ಒಟ್ಟು 88,500 ರೂಪಾಯಿಯನ್ನು ಕಳೆದ ಮಾರ್ಚ್ 25ರಂದು ಹಣ ಹಸ್ತಾ೦ತರ ಮಾಡಿದ್ದರು. ಈ ಮೂಲಕ ಒಟ್ಟು 3,14, 841 ರೂ. ಇದುವರೆಗೆ ಸಂಗ್ರಹಗೊಂಡಿದೆ. ಮಾನವೀಯ ನೆರವು ನೀಡಿದ ಎಲ್ಲ ಮಹನೀಯರಿಗೂ ಶಶಿಕಾಂತ್ ಕೃತಜ್ಞತೆ ಸಲ್ಲಿಸಿದ್ದಾರೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಬಾರಿ ‘ಡಯಲಿಸಿಸ್’ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಶಶಿಕಾಂತ್ ಇದುವರೆಗೆ ಚಿಕಿತ್ಸೆಗಾಗಿಯೇ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಈ ಕುಟುಂಬ ಡಯಲಿಸಿಸ್ ಗೆ ಹಣ ಹೊಂದಿಸುವುದಕ್ಕಾಗಿಯೇ ಸಾಲ ಸೋಲ ಮಾಡಿ ಕಂಗಾಲಾಗಿದೆ. ಇನ್ನು ಕಿಡ್ನಿ ಕಸಿ ಮಾಡಲು 8 ರಿಂದ 9 ಲಕ್ಷ ರೂ. ವೆಚ್ಚವಾಗಲಿದ್ದು, ಕೊಯಮತ್ತೂರಿನ Kovai Medical Center ನಲ್ಲಿ ಅಗತ್ಯ ಪರೀಕ್ಷೆಗಳನ್ನು ಪೂರೈಸಿದ್ದಾರೆ. ಆದರೆ ಹಣಕಾಸಿನ ಅಡಚಣೆಯಿಂದ
ಕಿಡ್ನಿ ಕಸಿ ಕಾರ್ಯ ವಿಳಂಬವಾಗುತ್ತಿದೆ. ಈ ಯುವಕನಿಗೆ ನೆರವು ನೀಡಬಯಸುವವರು ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ಹಣಸಹಾಯ ಮಾಡಬಹುದು.
Shashikanth,
Syndicate Bank ,Kanjarakatte Branch,
Karkala
A/c No. 01382200056384,
IFSC code : SYNB 0000218
Contact No: 7619146744