ಬೆಂಗಳೂರು(ಏ.೧೬, ಕುಲಾಲ್ ವರ್ಲ್ಡ್ ನ್ಯೂಸ್) : ‘ಗೋವಿಗಷ್ಟೇ ಸಿಗುತ್ತಿರುವ ಪ್ರಾಮುಖ್ಯ ಉಳಿದ ಪ್ರಾಣಿಗಳಿಗೂ ದೊರೆಯಬೇಕು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಪ್ನ ಬುಕ್ ಹೌಸ್ ನಗರದಲ್ಲಿ ಹಮ್ಮಿಕೊಂಡಿದ್ದ ಲೇಖಕ ಕುಂ.ವೀರಭದ್ರಪ್ಪ ಅವರ ‘ಕತ್ತೆಗೊಂದು ಕಾಲ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಕಳನ್ನು ಹೊರತುಪಡಿಸಿ ಬೇರೆ ಪ್ರಾಣಿಗಳಿಗೆ ಈ ಸಮಾಜದಲ್ಲಿ ಬೆಲೆ ಇಲ್ಲವೇನೋ. ಪ್ರಾಣಿಗಳಲ್ಲಿ ಇಲ್ಲದಿರುವ ಭಿನ್ನಾಭಿಪ್ರಾಯವನ್ನು ಮನುಷ್ಯ ಹುಟ್ಟಿ ಹಾಕುತ್ತಿದ್ದಾನೆ ಎಂದರು.
ಶರಣರು ವಚನಗಳಲ್ಲಿ ಹೇಳಿರುವ ‘ಗೋತ್ರದ ಗುಣವ ಕಾಗೆ ಬಲ್ಲದು’ ಎಂಬುದು ಮಠಾಧೀಶರಿಗೆ ಅರ್ಥವಾಗಬೇಕಾದ ಅಗತ್ಯವಿದೆ ಎಂದರು.
ಧರ್ಮ ಎನ್ನುವುದು ಅಧಿಕಾರದ ಆಜ್ಞೆಯಲ್ಲ. ಬೆಳಕಿನಡೆಗೆ ಕರೆತರುವ ಸ್ವಚ್ಛ ವ್ಯವಸ್ಥೆ. ನಿಸರ್ಗ ನಿರ್ಮಿತ ಧರ್ಮವನ್ನು ಅಲಕ್ಷಿಸಿ, ಮನುಷ್ಯ ನಿರ್ಮಿಸಿದ ಮೂಢ ನಂಬಿಕೆಯ ಧರ್ಮದಲ್ಲಿ ಇಂದಿನ ಜನ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂದು ತಿಳಿಸಿದರು.
ಲೇಖಕ ಕುಂ.ವೀರಭದ್ರಪ್ಪ, ‘ಗೋವಿನ ಜೊತೆ ನಿಜದ ನಂಟು ಇಲ್ಲದವರು, ಅದನ್ನು ವೈಭವೀಕರಿಸುತ್ತಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಗೋವಿನ ವ್ಯವಸ್ಥಿತ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಸರ್ಕಾರ, ರಾಜಕಾರಣಿಗಳ ಬೆಂಬಲವೂ ಇದೆ’ ಎಂದರು.
‘ಗೋಮೂತ್ರದಿಂದ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬ ಹುಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಶೇ 1.5ರಷ್ಟು ಜನಸಂಖ್ಯೆಯವರು, ಶೇ 98.5ರಷ್ಟಿರುವವರ ಮೇಲೆ ಮೌಢ್ಯಗಳನ್ನು ಹೇರುತ್ತಿದ್ದಾರೆ. ಅವುಗಳನ್ನು ನಾವು ಧಿಕ್ಕರಿಸಬೇಕು’ ಎಂದು ಸಲಹೆ ನೀಡಿದರು.
‘ಮಠಾಧೀಶರು ಪ್ರಾಮಾಣಿಕರಾಗಿದ್ದರೆ, ‘ರಾಜಕಾರಣಿಗಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡನ್ನು ಮೊದಲು ಮಠಗಳ ಎದುರು ಹಾಕಿ’ ಎಂದು ಕೋರಿದರು. ‘ಕತ್ತೆಗೊಂದು ಕಾಲ’ ಕುಂವೀ ಅವರ 18ನೇ ಕಾದಂಬರಿ. ಒಟ್ಟು 340 ಪುಟಗಳನ್ನು ಹೊಂದಿರುವ ಇದರ ಬೆಲೆ ₹300. ಸಪ್ನ ಬುಕ್ ಹೌಸ್ನಲ್ಲಿ ಪುಸ್ತಕ ಲಭ್ಯವಿದೆ.
——————-
ಕೂರ್ಮಾವತಾರ, ಶ್ವಾನಾವಲಂಬನಕರಿ ಇತ್ಯಾದಿ ಕೃತಿಗಳೊಂದಿಗೆ ಗಮನ ಸೆಳೆದಿರುವ ಕುಂ.ವೀರಭದ್ರಪ್ಪ ಇದೀಗ ‘ಕತ್ತೆಗೊಂದು ಕಾಲ’ ಕಾದಂಬರಿ ಹೊರ ತಂದಿದ್ದಾರೆ. ನಿನ್ನ ಕೃತಿ ಬಿಡುಗಡೆಯಾದ ಸಂಭ್ರಮದಲ್ಲಿರುವ ಕುಂವೀ ಮಾತಾಡಿದ್ದು ಹೀಗೆ. (ಸಂದರ್ಶನ : ವಿದ್ಯಾರಶ್ಮಿ ಪೆಲತ್ತಡ್ಕ , ವಿಜಯ ಕರ್ನಾಟಕ)
ಒಂದಾದ ಮೇಲೊಂದರಂತೆ ಕಾದಂಬರಿ ಬರೆಯುತ್ತಿದ್ದೀರಲ್ಲ? ಇವಕ್ಕೆಲ್ಲ ಸರಕು ಎಲ್ಲಿಂದ ತರುತ್ತಿದ್ದೀರಿ?
ನಾನು ಬೆಂಗಳೂರಿನಂತಹ ನಗರಕ್ಕೆ ಬಂದು ಉಳಿದಿಲ್ಲದೆ, ಹಳ್ಳಿಯಲ್ಲೇ ಉಳಿದಿರುವುದು ಇದೇ ಕಾರಣಕ್ಕೆ. ನನ್ನ ನಿಕಟ ಸಂಪರ್ಕ ಇರುವುದು ಅಕ್ಷರ ಗೊತ್ತಿಲ್ಲದ ಪ್ರಪಂಚದ ಜತೆ. ಹೀಗಾಗಿ ನನ್ನಲ್ಲಿ ಅನುಭವದ್ರವ್ಯ ಸಾಕಷ್ಟಿದೆ. ಮತ್ತೊಂದಿದೆ. ನನಗೆ ಬದುಕು – ಬರಹ ಬೇರೆಯಲ್ಲ. ಎರಡೂ ಒಂದೇ. ಆ ಕಾರಣಕ್ಕಾಗಿ ನಾನು ಸಮಾಜದ ಎಲ್ಲ ಸಂಕಟಗಳ ಜತೆ ಭಾಗಿಯಾಗುತ್ತೇನೆ. ಅವುಗಳ ಪರಿಹಾರಕ್ಕೆ ನನ್ನ ಮಿತಿಯೊಳಗೆ ಕೆಲಸ ಮಾಡುತ್ತೇನೆ. ಇನ್ನೊಂದು ನನ್ನ ಬಗ್ಗೆ ನನಗೆ ಇರುವ ಗೌರವ ಅಂದರೆ , ಯಾವ ರಾಜಕೀಯ ಪಕ್ಷದ ಮುಲಾಜಿಗೂ ನಾನು ಒಳಗಾಗಿಲ್ಲ. ಯಾವ ಸೈಟ್ಗೂ ಅಪ್ಲೈ ಮಾಡಿಲ್ಲ. ಯಾವ ಅಕಾಡೆಮಿ ಹುದ್ದೆಗೂ ಆಸೆಪಟ್ಟಿಲ್ಲ. ಹೀಗಾಗಿ ಬರೆಯಲು ನನ್ನದೇ ಆದ ಸ್ಪೇಸ್ ನನಗಿದೆ, ಸ್ವಾತಂತ್ರ್ಯವಿದೆ. ಬರೆಯುವುದೂ ನನಗೆ ಗೋಲ್ಡ್ ಕೋಸ್ಟ್ನಲ್ಲಿ ನಡೆಯುವ ಕಾಮನ್ವೆಲ್ತ್ ಕ್ರೀಡೆಯಷ್ಟೇ ಖುಷಿಯನ್ನು ಕೊಡುತ್ತದೆ.
‘ಶ್ವಾನಾವಲಂಬನಕರಿ’ ಬಂತು. ಇದೀಗ ಕತ್ತೆಗೊಂದು ಕಾಲ. ಇದೇನು ಪ್ರಾಣಿಗಳೇ ನಿಮ್ಮ ಕಾದಂಬರಿಗಳ ವಸ್ತುವಾಗಿವೆಯಲ್ಲ?
ಆಂಗ್ಲ ಲೇಖಕ ಜಾರ್ಜ್ ಆರ್ವೆಲ್ ‘ಅನಿಮಲ್ ಫಾರ್ಮ್’ ಅಂತ ಬರೆದ. ಆತ ಇಲ್ಲಿ ಇಡೀ ಜಗತ್ತಿನ ಸಾರ್ವಕಾಲಿಕ ವಿದ್ಯಮಾನಗಳನ್ನು ಪ್ರಾಣಿಗಳ ಮೂಲಕವೇ ಕನೆಕ್ಟ್ ಮಾಡುತ್ತಾ ಹೋಗುತ್ತಾನೆ. ಇದಲ್ಲದೆ ನಮ್ಮ ಜಾನಪದ ಕಥೆಗಳಲ್ಲಿಯೂ ಪ್ರಾಣಿಗಳೇ ಮುಖ್ಯಪಾತ್ರ. ಎಲ್ಲಾ ದೃಷ್ಟಿಯಿಂದಲೂ ಪ್ರಾಣಿಗಳು, ಕ್ರಿಮಿಕೀಟಗಳು ಮನುಷ್ಯರಿಗಿಂತ ಮೇಲು. ಅವುಗಳಲ್ಲಿನ ಸಾಮಾಜಿಕ, ಸಾಂಸ್ಕೃತಿಕ ನಿಷ್ಠೆ ನಮಗಿಂತ ಮೇಲಿನದು. ಈ ಕಾರಣಕ್ಕೆ ನಾಯಿ, ಕೋಳಿ(ಕೂಗುವ ಕೋಳಿ), ಕತ್ತೆ ಮೊದಲಾದ ಪ್ರಾಣಿಗಳು ನನಗೆ ಇಷ್ಟ. ಇವೆಲ್ಲ ನಮ್ಮ ಜಾನಪದ ಸಂಸ್ಕೃತಿಯೊಡನೆ ನಿಕಟ ಸಂಪರ್ಕ ಇಟ್ಟಿದ್ದವು. ನಮ್ಮ ಅಜ್ಜಿಯೇ ಊಟ ಮಾಡುವಾಗ ಪ್ರಾಣಿ ಪಕ್ಷಿಗಳಿಗೆಂದು ಒಂದು ತುತ್ತು ಇಟ್ಟು ಊಟ ಮಾಡ್ತಿದ್ದರು. ಇದೀಗ, ನಟ ಸಲ್ಮಾನ್ ಖಾನ್ನನ್ನು ಜೈಲಿಗೆ ಕಳಿಸಿದ್ದು ಕೂಡ ಇದೇ ಬಗೆಯ ಪ್ರಾಣಿಪ್ರೀತಿ, ಪರಿಸರ ಪ್ರಜ್ಞೆಯೇ.
ಈ ದೃಷ್ಟಿಯಿಂದ ಕತ್ತೆ ತಳವರ್ಗದ ಸಮುದಾಯದ ವ್ಯಕ್ತಿಯ ಪ್ರತಿರೂಪ. ಅದು ಅಲಕ್ಷಿತ ಪ್ರಪಂಚ. ನಾನು ರಾಜಮಂಡ್ರಿಯಲ್ಲಿದ್ದಾಗ ಕತ್ತೆಯನ್ನು ಹುಡುಕಿಕೊಂಡು ಬಂದರು. ಮನೆಯ ಎದುರು ಕತ್ತೆಯ ಹಾಲನ್ನು ಹಿಂಡಿಕೊಟ್ಟರು. ಬೆಂಗಳೂರಿನಲ್ಲೂ ಮನೆಮನೆಗಳ ಮುಂದೆ ಕತ್ತೆಯನ್ನು ಹಿಡಿದುಕೊಂಡು ಬರುವುದನ್ನು ನೋಡಿದ್ದೇನೆ, ಜನರು ಅದರ ಹಾಲು ಕರೆಸಿ ಮಕ್ಕಳಿಗೆ ಕುಡಿಸುತ್ತಾರೆ ಕೂಡ. ಕತ್ತೆಯ ಹಾಲು ಬಹಳ ಪೌಷ್ಟಿಕಾಂಶವುಳ್ಳದ್ದು. ಆದರೆ, ಈಗ ನೋಡಿದರೆ ಹಸುವನ್ನೇ ಹುಲಿಯ ಸ್ಥಾನಕ್ಕೆ ನಿಲ್ಲಿಸುತ್ತಿದ್ದಾರೆ. ಹಸು ಹುಲಿಯಂತಾಗಿದೆ. ಇದು ಸಹಜ ಪ್ರಕೃತಿಗೆ ವಿರುದ್ಧವಾದುದು. ಇವೆಲ್ಲದಕ್ಕೆ ಪ್ರತಿರೋಧವಾಗಿ ಈ ಕಾದಂಬರಿ ರಚನೆಯಾಗಿದೆ.
ಕತ್ತೆಯ ರೂಪಕ ಏನನ್ನು ಹೇಳುತ್ತದೆ?
ಒಂದು ಬಕೆಟ್ನಲ್ಲಿ ಸ್ವಲ್ಪ ನೀರನ್ನು ಹಾಕಿದಾಗ ಅದು ಅದರಲ್ಲೆಲ್ಲ ಹರಡಿಕೊಳ್ಳುತ್ತದೆ. ಅದೇ ರೀತಿ, ಪ್ರಾಣಿಯೊಂದನ್ನು ಎತ್ತರಕ್ಕೇರಿಸಿದಾಗ ಏನಾಗುತ್ತದೆ ಅನ್ನುವುದು ಕಥೆ. ಒಂದು ಕತ್ತೆಯನ್ನು ಪೀಠಾಧ್ಯಕ್ಷನನ್ನಾಗಿ ಮಾಡಲಾಗುತ್ತದೆ. ಅದರ ಮೂತ್ರವನ್ನೇ ಪವಿತ್ರ ಅನ್ನುತ್ತಾರೆ. ಗರ್ಭಧಾರಣೆಗೂ ಅದು ಪೂರಕ ಔಷಧ ಎನ್ನಲಾಗುತ್ತದೆ. ವಿಶ್ವಸುಂದರಿಯೊಬ್ಬಳು ಅದಕ್ಕೆ ರೂಪದರ್ಶಿಯಾಗುತ್ತಾಳೆ. ಹೀಗೆ ಕಥೆ ಬೆಳೆಯುತ್ತದೆ.
ಮುಂದೆ ಯಾವ ಕೃತಿ ಬರಲಿದೆ?
‘ಒಳಚರಂಡಿ’ ಅನ್ನುವ ಕೃತಿ ಬರಿತಿದ್ದೇನೆ. ಬೆಂಗಳೂರಿನ ಭೂಮಿಯ ಒಳಭಾಗ ಬೇರೆಯೇ ಇದೆ. ಇಲ್ಲಿನ ಸಿಟಿ ಪ್ಲಾನಿಂಗ್ ಮಾಡಿದ್ದು 70 ವರ್ಷಗಳ ಹಿಂದೆ. ಇಷ್ಟೆಲ್ಲ ಜನರು ಇಲ್ಲಿ ಬಂದು ನೆಲೆಸುತ್ತಾರೆ ಎಂಬ ಮುಂದಾಲೋಚನೆ ಇಲ್ಲದೇ ಮಾಡಿದ ಪ್ಲಾನ್ ಇದು. ಈಗ ನಾವು ಪ್ರಯಾಣಿಸುವಾಗಲೆಲ್ಲ ಒಳಚರಂಡಿಯ ಕೊಳಚೆ ಹೊರ ಸಿಡಿಯುತ್ತದೆ. ಹಾಗೆಯೇ ಇಲ್ಲಿನ ಸಾಮಾಜಿಕ, ರಾಜಕೀಯ ಭ್ರಷ್ಟಾಚಾರವೂ. ಇವೆಲ್ಲವನ್ನೂ ಇಟ್ಟುಕೊಂಡು ಬರೆಯುತ್ತಿದ್ದೇನೆ.
ನಿಮ್ಮ ಬರೆಯುವ ಕ್ರಮ ಹೇಗೆ? ಕಾದಂಬರಿ ಬರೆವ ಮುನ್ನ ಸಿದ್ಧತೆ ಮಾಡುತ್ತೀರಾ?
ನಾನು ಪ್ರವಾಸ ಮಾಡ್ತೇನೆ, ಓದುತ್ತೇನೆ. ಸಾಹಿತ್ಯೇತರ ಕಾರಣಗಳಿಗೂ ಹಲವು ಕೃತಿಗಳನ್ನು ಓದುತ್ತೇನೆ. ಶಿಲಾಶಾಸನ, ಇತಿಹಾಸ, ಜ್ಯೋತಿಷ್ಯ ಇತ್ಯಾದಿ ಎಲ್ಲ ವಿಷಯಗಳನ್ನು ಇಟ್ಟುಕೊಂಡು ಓದುತ್ತೇನೆ. ಸಿನಿಮಾ ನೋಡುತ್ತೇನೆ. ನನ್ನ ಬಳಿಯೇ ಎರಡು-ಮೂರು ಸಾವಿರದಷ್ಟು ಸಿನಿಮಾ ಸಂಗ್ರಹವಿದೆ. ಸಂಗೀತ ಕೇಳುತ್ತೇನೆ. ಹಿಂದೂಸ್ತಾನಿ ಸಂಗೀತವೆಂದರೆ ನನಗಿಷ್ಟ. ಯುವಜನಾಂಗದ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿರುತ್ತೇನೆ. ಇವೆಲ್ಲದರ ಜತೆ ನನ್ನದೇ ಲಯ ಕಂಡುಕೊಂಡು ಬರೆಯಲು ಪ್ರಯತ್ನ ಪಡುತ್ತೇನೆ. ಬರೆಯುತ್ತೇನೆ, ಸರಿ ಕಾಣದಿದ್ದರೆ ಅಳಿಸುತ್ತೇನೆ, ಮತ್ತೆ ಬರೆಯುತ್ತೇನೆ. ಹೀಗಾಗಿ ನನಗೆ ದಿನಕ್ಕೆ 24 ಗಂಟೆಯೂ ಕಡಿಮೆಯೇ.
ಕ್ರಿಯೇಟಿವ್ ಲೇಖಕನಿಗೆ ಅವನದ್ದೇ ಆದ ಭಾಷೆ, ಜಗತ್ತು ಇರುತ್ತದೆ. ಅವನ ಜಗತ್ತಿನೊಳಗೇ ಕೃತಿಯೊಂದು ಸಿದ್ಧವಾಗುತ್ತದೆ. ನಾವು ಹೊರಜಗತ್ತಿನ ಜತೆಗೆ ಹೊಂದಿರುವ ಸಂಬಂಧದ ಮೇಲೆ ಅದು ಶ್ರೀಮಂತವಾಗುವ ಬಗೆ ಅವಲಂಬಿತವಾಗಿದೆ. ನಮ್ಮೊಳಗಿನ ಪ್ರಪಂಚ ಸಿರಿವಂತವಾದಷ್ಟೂ ನಮ್ಮ ಸೃಜನಶೀಲ ಕೃತಿಗಳೂ ಚೆಂದವಾಗುತ್ತವೆ ಎಂದು ನಾನು ನಂಬಿದ್ದೇನೆ.