ರಟ್ಟಿಹಳ್ಳಿ(ಏ.೧೨, ಕುಲಾಲ್ ವರ್ಲ್ಡ್ ನ್ಯೂಸ್) :ವರಕವಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಬಗೆಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ವರಕವಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ರಟ್ಟಿಹಳ್ಳಿ ತಾಲೂಕು ಕಚೇರಿಯಲ್ಲಿ ಬುಧವಾರ ಉಪ ತಹಸೀಲ್ದಾರ್ ಮಂಜುಳಾ ಹೆಗಡಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷ ರಾಜು ಕೆ. ಸುಣಗಾರ ಮಾತನಾಡಿ, ಸರ್ವಜ್ಞ ಹುಟ್ಟಿ, ಬೆಳೆದು, ಐಕ್ಯ ಹೊಂದಿದ ಸ್ಥಳ ಮಾಸೂರು ಗ್ರಾಮ. 2011ರಲ್ಲಿ ಗ್ರಾಮಸ್ಥರು ಮಾಸೂರು ಬಂದ್ ಮಾಡಿದ ಫಲವಾಗಿ 2012ರಲ್ಲಿ ಸರ್ವಜ್ಞನ ಪ್ರಾಧಿಕಾರ ಘೊಷಿಸಲಾಯಿತು. ಆದರೆ, 2012ರಿಂದ ಇಂದಿನವರೆಗೂ ಸರ್ವಜ್ಞನ ಅಭಿವೃದ್ಧಿ ಪ್ರಾಧಿಕಾರ ರಚನೆಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದನ್ನು ಖಂಡಿಸಿ 2017ರಲ್ಲಿ ಮತ್ತೆ ಮಾಸೂರು ಬಂದ್ ಮಾಡಲಾಯಿತು. ಜಿಲ್ಲಾಧಿಕಾರಿ ಮಾಸೂರಿಗೆ ಭೇಟಿ ನೀಡಿ ಸರ್ವಜ್ಞನಿಗೆ ಸಂಬಂಧಿಸಿದ ಕುರುಹುಗಳನ್ನು ವೀಕ್ಷಿಸಿದ್ದರು. ಜತೆಗೆ ಸರ್ವಜ್ಞನ ಜನ್ಮಸ್ಥಳ ವಿವಾದವಿದ್ದು ಅದಕ್ಕಾಗಿ ಪ್ರಮುಖ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನೊಳಗೊಂಡ ಸತ್ಯಶೋಧನಾ ಸಮಿತಿ ರಚಿಸಬೇಕು. ಜನ್ಮಸ್ಥಳ ವಿವಾದಕ್ಕೆ ಅಂತ್ಯ ಕಾಣಿಸಬೇಕು ಎಂಬ ಗ್ರಾಮಸ್ಥರ ಮನವಿ ಸ್ವೀಕರಿಸಿದರೂ, ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಮುಖ್ಯಮಂತ್ರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದು, ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿದ್ದರೂ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
2017 ನವೆಂಬರ್ನಲ್ಲಿ ಕರ್ನಾಟಕ ಸರ್ಕಾರ ಸರ್ವಜ್ಞ ಪ್ರಾಧಿಕಾರಕ್ಕೆ ಶಾಂತಾ ಹುಲ್ಮನಿ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಿ, 6 ಸಿಬ್ಬಂದಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಆದರೆ, 2017-18ರ ಬಜೆಟ್ನಲ್ಲಿ ಸರ್ಕಾರ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ ಎಂದರು.
ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ತಕ್ಷಣ ಜಾರಿಗೆ ಬರುವಂತೆ ಮಾಸೂರಿನಲ್ಲಿಯೇ ಸ್ಥಾಪಿಸಬೇಕು, 2018-19ನೇ ಸಾಲಿನ ಬಜೆಟ್ನಲ್ಲಿ ಪ್ರಾಧಿಕಾರಕ್ಕೆ ಹೆಚ್ಚುವರಿ ಅನುದಾನ ನೀಡಬೇಕು, ಸರ್ವಜ್ಞ ಸಮಾಧಿಯನ್ನು ಸರ್ವಜ್ಞ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು, ಗ್ರಾಮದ ಕುಮದ್ವತಿ ನದಿಗೆ ಸೇತುವೆ ನಿರ್ವಿುಸಬೇಕು, ಮದಗ ಮಾಸೂರ ಕೆರೆಯ ಹೂಳು ತೆಗೆದು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಈ ಬೇಡಿಕೆಗಳನ್ನು ಶೀಘ್ರವೇ ಪರಿಹರಿಸದಿದ್ದರೆ ಮೇ 12ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ಮಾಸೂರು ಮತ್ತು ಸುತ್ತಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ತೀರ್ವನಿಸಿದ್ದು, ಈ ಕುರಿತು ಎಲ್ಲರ ಸಹಿ ಸಂಗ್ರಹಿಸಲಾಗತ್ತದೆ ಎಂದು ತಿಳಿಸಿದರು.
ನಾಗನಗೌಡ ಪಾಟೀಲ, ಮಲ್ಲೇಶಪ್ಪ ಗುತ್ತೆಣ್ಣನವರ, ಚಂದ್ರಹಾಸ ಪಾಟೀಲ, ವೆಂಕಟೇಶ ರೇವಣಕರ, ಸಮಿವುಲ್ಲಾ ಚಕ್ಕಲಿ, ಸುರೇಶ ಹಳಬಸಣ್ಣನವರ, ಬಾಸ್ಕರ ಶೆಟ್ಟರ್, ಮಾಲತೇಶ ಲಿಂಗದಹಳ್ಳಿ, ವೀರನಗೌಡ ಪಾಟೀಲ, ಸಿದ್ದಯ್ಯ ವೀರಕ್ತಮಠ, ಇದಾಯತ ಮುಲ್ಲಾ, ಇತರರು ಇದ್ದರು.