ಬೆಂಗಳೂರು(ಏ.೦೫, ಕುಲಾಲ್ ವರ್ಲ್ಡ್ ನ್ಯೂಸ್): ಸರಕಾರ ಹಿಂದುಳಿದ ವರ್ಗಗಳ ಸಂಘ/ಸಂಘಟನೆಗಳಿಗೆ ನಿವೇಶನ ಹಂಚಿಕೆ ಮಾಡಿ ಕುಂಬಾರರನ್ನು ಕಡೆಗಣನೆ ಮಾಡಿದ್ದಾರೆ ಎಂಬ ಕೂಗು ಕೇಳಿ ಬಂದ ಬೆನ್ನಿಗೇ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ತನ್ನ ಬಡಾವಣೆಯಲ್ಲಿ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಮೀಸಲಿಟ್ಟಿರುವ ನಿವೇಶನ (ಸಿ.ಎ ಸೈಟ್) ಮಂಜೂರು ಮಾಡಿದೆ.
ನೈಸ್ ರಸ್ತೆ ಹತ್ತಿರದ ಬನಶಂಕರಿ ೬ನೇ ಹಂತದಲ್ಲಿ 4,000 ಚ.ಅಡಿ ಅಳತೆಯ ನಿವೇಶನವನ್ನು 30 ವರ್ಷಗಳ ಗುತ್ತಿಗೆ ಆಧಾರದಲ್ಲಿ (ಲೀಜ್) ಹಂಚಿಕೆ ಮಾಡಿದೆ. ಈ ನಿವೇಶನದಲ್ಲಿ ಹುಡುಗಿಯರ ಹಾಸ್ಟೆಲ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಸರಕಾರ ಈ ಹಿಂದೆ ಸುಮಾರು ೩೬ ಜಾತಿ ಸಂಘಗಳಿಗೆ ನಿವೇಶನ ಹಂಚಿಕೆ ಮಾಡಿದ್ದು ಕುಂಬಾರ ಸಮುದಾಯವನ್ನು ಕಡೆಗಣಿಸಿದೆ ಎಂದು ದೂರಲಾಗಿತ್ತು. ಇದೀಗ ಕುಂಬಾರರ ಹಳೆ ಸಂಘ ಸಂಸ್ಥೆಗಳನ್ನು ಕಡೆಗಣಿಸಿ ಕೆಲ ವ್ಯಕ್ತಿಗಳ ವಶೀಲಿಬಾಜಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಘಕ್ಕೆ ನಿವೇಶನ ನೀಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಲಕ್ಷಣಗಳು ಕಾಣಿಸುತ್ತಿದೆ.