ಮಂಗಳೂರು(ಮಾ.೩೦, ಕುಲಾಲ್ ವರ್ಲ್ಡ್ ನ್ಯೂಸ್) : ‘ಮಂಜಣ್ಣ ಸೇವಾ ಬ್ರಿಗೇಡ್’ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡುತ್ತಿರುವ ಮನೋಜ್ ಕುಲಾಲ್ ಕೋಡಿಕೆರೆ ಅವರ ಮೇಲೆ ಹಫ್ತಾ ವಸೂಲಿ ಮತ್ತು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಕೇಸ್ನಲ್ಲಿ ಸಿಲುಕಿ ಹಾಕಿಸುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಮನೋಜ್ ಕೋಡಿಕೆರೆ ಅವರ ಪತ್ನಿ ಸೌಮ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜೈಲಿನಲ್ಲಿ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಆದ ಕೇಸಿನಲ್ಲಿ ನನ್ನ ಪತಿಗೂ ಹಫ್ತಾ ವಸೂಲಿ ಪ್ರಕರಣಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಸಮಾಜ ಸೇವೆ ಮಾಡುತ್ತಿರುವ ನನ್ನ ಪತಿಯ ಏಳಿಗೆಯನ್ನು ಸಹಿಸದ ಕೆಲವರು ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹಫ್ತಾ ವಸೂಲಿ ಪ್ರಕರಣದ ಆರೋಪಿಯಾಗಿರುವ ಕಲ್ಲಡ್ಕ ಮಿಥುನ್ ಪೂಜಾರಿ ಮತ್ತು ಆಕಾಶ ಭವನದ ತಿಲಕ್ರಾಜ್ ಜತೆ ಯಾವುದೇ ವ್ಯವಹಾರದಲ್ಲಿ ನನ್ನ ಪತಿ ಶಾಮೀಲಾಗಿಲ್ಲ.
ತಿಲಕ್ನ ಪರಿಚಯ ಮಾತ್ರ ನನ್ನ ಪತಿಗೆ ಇತ್ತು. ಕೋಡಿಕೆರೆಯಲ್ಲಿ ನನ್ನ ಪತಿಯ ಏಳಿಗೆ ಮತ್ತು ಸಮಾಜ ಸೇವೆಯನ್ನು ನೋಡಿ ಆಗದವರು, ಜಾತಿವಾದಿ ಎನಿಸಿಕೊಂಡಿರುವ ಸುರತ್ಕಲ್ನ ಬಿಜೆಪಿ ಮುಖಂಡರು, ಭೂಗತ ಜಗತ್ತಿನ ಸಂಪರ್ಕವಿರುವ ಕೆಲವು ವ್ಯಕ್ತಿಗಳು ನನ್ನ ಪತಿಯ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರನ್ನು ಬೇರೆ ಬೇರೆ ಕೇಸಿನಲ್ಲಿ ಸಿಲುಕಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆಪಾದಿಸಿದರು.
ನಾವು ಈಗಲೂ ವಾಸವಾಗಿರುವುದು ಬಾಡಿಗೆ ಮನೆಯಲ್ಲಿ. ಅಕ್ರಮ ಚಟುವಟಿಕೆಯಲ್ಲಿ ನನ್ನ ಪತಿ ಇದ್ದಿದ್ದರೆ ಸ್ವಂತ ಮನೆಯಲ್ಲಿ ನಾವಿರುತ್ತಿದ್ದೆವು. ನಿರಪರಾಧಿಯಾದ ನನ್ನ ಪತಿಯ ವಿರುದ್ಧ ಸುಳ್ಳಾರೋಪ ದಾಖಲಾಗಿರುವುದರಿಂದ ಅವರು ಬಂಧನ ಭೀತಿಯಿಂದ ಕಣ್ತಪ್ಪಿಸಿದ್ದಾರೆ. ಅವರ ಸಂಪಾದನೆಯಿಂದ ನಮ್ಮ ಜೀವನ ಸಾಗುತ್ತದೆ. ಅವರಿಲ್ಲದೇ ನಮ್ಮ ಜೀವನ ಶೋಚನೀಯವಾಗಿದೆ. ದಕ್ಷ ಅಧಿಕಾರಿಗಳಾದ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಯವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮನೋಜ್ ತಾಯಿ ಭವಾನಿ, ಅಕ್ಕ ಶಶಿಕಲಾ, ತಮ್ಮ ದಯಾನಂದ ಹಾಗೂ ಪತ್ನಿ ಸಂಗೀತಾ ಉಪಸ್ಥಿತರಿದ್ದರು.