ಕಾರ್ಕಳ(ಮಾ.೨೫, ಕುಲಾಲ್ ವರ್ಲ್ಡ್ ನ್ಯೂಸ್): ಯುವ ಜನತೆಯಲ್ಲಿ ಸೇವಾ ಚಿಂತನೆ ತುಂಬಬೇಕೆಂಬ ಸಂಕಲ್ಪದೊಂದಿಗೆ ಕೆಲ ಯುವಕ-ಯುವತಿಯರು ಸೇರಿಕೊಂಡು ರಚಿಸಿದ್ದ `ಕುಲಾಲ ಚಾವಡಿ’ ವಾಟ್ಸಪ್ ಬಳಗದ ಮಿತ್ರರು ಬಡ ಅಶಕ್ತ ಕುಟುಂಬವನ್ನು ಗುರುತಿಸಿ ಸಮಾನ ಮನಸ್ಕ ಯುವಕರಿಂದ ಹಣ ಸಂಗ್ರಹಿಸಿ ಕಣ್ಣೀರು ಒರೆಸುವ ಕಾಯಕವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಗಾಂದೊಟ್ಟು ಈಶ್ವರ ಬಂಜನ್ ಮತ್ತು ರತ್ನಾ ದಂಪತಿಯ ಪುತ್ರ ಶಶಿಕಾಂತ್ ಬಂಗೇರ ಅವರಿಗೆ ಒಟ್ಟು 88,500 ರೂ. ಧನ ಸಹಾಯ ವಿತರಿಸಿದ್ದಾರೆ.
ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿರುವ ಶಶಿಕಾಂತ್ ಚಿಂತಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಈ ಹಿಂದೆ ವರದಿ ಮಾಡಿ, ಧನ ಸಹಾಯ ನೀಡುವಂತೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ `ಕುಲಾಲ ಚಾವಡಿ’ ವಾಟ್ಸಪ್ ಮಿತ್ರರು ತಮ್ಮ ಗ್ರೂಪಿನ ಸದಸ್ಯ ಹೃದಯ ಕುಲಾಲ್ ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಸಮಾನಮನಸ್ಕ ದಾನಿಗಳು ಸ್ಪಂದಿಸಿ ನೆರವು ನೀಡಿದ್ದರು. ಹೀಗೆ ಸಂಗ್ರಹಗೊಂಡ ಹಣವನ್ನು ಮಾರ್ಚ್ ೨೫ರಂದು ಅಪರಾಹ್ನ ಕಾರ್ಕಳ ಕುಲಾಲ ಸಂಘದ ಕಚೇರಿಯಲ್ಲಿ ಹಿರಿಯರ ಉಪಸ್ಥಿತಿಯಲ್ಲಿ ಶಶಿಕಾಂತ್ ಅವರಿಗೆ ಹಸ್ತಾ೦ತರ ಮಾಡಲಾಯಿತು.
ಹಣ ನೀಡುವ ಸಂದರ್ಭ ಕಾರ್ಕಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಬೋಜ ಕುಲಾಲ್ ಬೇಳಂಜೆ, ದ.ಕ ಕುಲಾಲ ಮಾತೃ ಸಂಘದ ಕಾರ್ಯದರ್ಶಿ ಪ್ರಸಾದ್ ಕುಲಾಲ್ ಸಿದ್ಧಕಟ್ಟೆ, ಕುಲಾಲ ಚಾವಡಿ ಗ್ರೂಪ್ ನ ಅಡ್ಮಿನ್ ಸಂತೋಷ್ ಕುಲಾಲ್ ಪದವು ಸದಸ್ಯರಾದ ದಿವಾಕರ್ ಎಂ ಬಂಗೇರ, ಹೃದಯ್ ಕುಲಾಲ್, ಸತೀಶ್ ಕಜ್ಜೋಡಿ, ಕೃಷ್ಣ ಮೂಲ್ಯ ಕಾರ್ಕಳ, ಸದಾನಂದ ಮೂಲ್ಯ ನಕ್ರೆ, ರವಿ ಕುಲಾಲ್ ಕಡ್ತಲ, ಹೇಮಂತ್ ಕುಮಾರ್ ಕಿನ್ನಿಗೋಳಿ, ಅರುಣ್ ಕುಲಾಲ್ ಮೂಳೂರು, ರಶ್ಮಿ ಮೂಲ್ಯ ಬೆಳ್ಮಣ್, ಸಂಗೀತಾ ಕುಲಾಲ್ ಬೋಳ ಮೊದಲಾದವರು ಉಪಸ್ಥಿತರಿದ್ದರು.
ಶಶಿಕಾಂತ್ ಅವರ ಕುರಿತ ಹಿಂದಿನ ವರದಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.