ಮಂಗಳೂರು(ಮಾ.೨೨, ಕುಲಾಲ್ ವರ್ಲ್ಡ್ ನ್ಯೂಸ್ ): ಯುವ ಕಾಂಗ್ರೆಸ್ ಮುಖಂಡ ತೇಜಸ್ವಿರಾಜ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಿಗೆ ಎರಡೂವರೆ ತಿಂಗಳು ಜೈಲು ಶಿಕ್ಷೆ ಹಾಗೂ 1 ಸಾವಿರ ರೂ.ದಂಡ ವಿಧಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅರುಣಾಚಲ ಪ್ರದೇಶದ ಚೌಖಮ್ ಜಿಲ್ಲೆಯ ದಿಲೀಪ್ ಕುಮಾರ್ (20) ಹಾಗೂ ಒಡಿಸ್ಸಾದ ಬಾಲ್ಡ ತಾಲೂಕಿನ ರಘುನಾಥ ಹೆಂಬ್ರಾಮ್ (23) ಶಿಕ್ಷೆಗೊಳಗಾದ ಅಪರಾಧಿಗಳು.
ಇವರು ಸೆಕ್ಯುರಿಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2016 ಆ.15ರಂದು ಸಂಜೆ 5 ಗಂಟೆಗೆ ಯುವ ಕಾಂಗ್ರೆಸ್ ಮುಖಂಡ ತೇಜಸ್ವಿರಾಜ್ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಸಿಟಿ ಸೆಂಟರ್ ಬಳಿ ಬಂದಿದ್ದರು. ರಸ್ತೆಗೆ ಅಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್ನ್ನು ಬದಿಗೆ ಸರಿಸುವಂತೆ ದಿಲೀಪ್ ಕುಮಾರ್ಗೆ ಹೇಳಿದಾಗ ಆತ ಹಿಂದಿ ಭಾಷೆಯಲ್ಲಿ ಬೈದು ತನ್ನ ಕೈಯ್ಯಲ್ಲಿದ್ದ ವಾಕಿಟಾಕಿಯಿಂದ ಹಲ್ಲೆ ನಡೆಸಿದ್ದ. ರಘುನಾಥ ಹೆಂಬ್ರಾಮ್ ಕೈಯಿಂದ ಹಲ್ಲೆ ಮಾಡಿದ್ದ. ಈ ಬಗ್ಗೆ ತೇಜಸ್ವಿರಾಜ್ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. 2016 ಆ.16ರಿಂದ ಅ.27ರ ತನಕ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ನ್ಯಾಯಾಧೀಶ ಕೆ.ಎಸ್.ಬೀಳಗಿ ಅವರು ಪ್ರಕರಣದ ವಿಚಾರಣೆ ನಡೆಸಿ, ಅಪರಾಧಿಗಳು ಈಗಾಗಲೇ ಜೈಲ್ನಲ್ಲಿದ್ದ ಅವಧಿಯನ್ನು ಶಿಕ್ಷೆ ಎಂದು ಪರಿಗಣಿಸಿದ್ದು, 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಾಕ್ಷದ ಕೊರತೆಯಿಂದ ಕೊಲೆ ಯತ್ನ ಆರೋಪ ಖುಲಾಸೆಗೊಂಡಿದೆ. ಸರಕಾರದ ಪರವಾಗಿ ಸರಕಾರಿ ಪ್ರಾಸಿಕ್ಯೂಟರ್ ಕುದ್ರಿಯಾ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.