ರಾಜ್ಯದಲ್ಲಿ ಅತಿ ಹೆಚ್ಚು ಗಣೇಶನ ಮೂರ್ತಿ ಉತ್ಪಾದಿಸಿ ತಮ್ಮ ಕುಲಕಸುಬಿನ ಕಲೆಯನ್ನೆ ಜೀವನ್ನವನ್ನಾಗಿ ಮಾಡಿಕೊಂಡು ವರ್ಷ ಪೂರ್ತಿ ವಿಘ್ನನಿವಾರಕನನ್ನು ತಯಾರಿಸುವಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಿನ ಕುಂಬಾರರ ಕುಟುಂಬಗಳು ನಿರತವಾಗಿವೆ. ಗೋಕಾಕ ಜಲಪಾತದಿಂದ 4ಕಿ.ಮೀ ದೂರದಲ್ಲಿರುವ ಕೊಣ್ಣೂರಿನಲ್ಲಿ ಕಳೆದ 50 ವರ್ಷಗಳಿಂದಲೂ ಸುಮಾರು 10 ಕುಂಬಾರರ ಕುಟುಂಬಗಳು ಸಂಪೂರ್ಣವಾಗಿ ಪರಿಸರ ಸ್ನೇಹಿ ಮಣ್ಣಿನಂದಲೆ ಪ್ರತಿ ವರ್ಷ 2ರಿಂದ 2.5ಲಕ್ಷ ಗಣಪತಿ ಮೂರ್ತಿಗಳನ್ನು ತಯಾರಿಸಿ ರಾಜ್ಯದ ಮೂಲೆ ಮೂಲೆಗಳು ಸೇರಿದಂತೆ ನೆರೆ ರಾಜ್ಯಗಳಿಗೂ ಕಳುಹಿಸುತ್ತಾರೆ.
ಇಲ್ಲಿನ ಕುಂಬಾರರ ಮುಖ್ಯ ಸಮಸ್ಯೆ ಏನೆಂದರೆ ಇಲ್ಲಿ ತಯಾರಿಸುವ ಗಣಪತಿಗೆ ಎಲ್ಲಾ ಕಡೆಯಿಂದಲೂ ಭರಪೂರ ಬೇಡಿಕೆಯಿದೆ. ಆದರೆ ಮೂರ್ತಿಗಳನ್ನು ತಯಾರಿಸಿ ಇಡಲು ಸ್ಥಳವಿಲ್ಲದಿರುವುದರಿಂದ ಜನರ ಬೇಡಿಕೆಗೆ ತಕ್ಕಂತೆ ಗಣಪತಿ ಮೂರ್ತಿಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲವೆಂದು ಎಂದು ಕುಂಬಾರ ಸಂಘದ ಅಧ್ಯಕ್ಷರಾದ ಸುರೇಶ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಥಳವಿಲ್ಲದೆ ರಸ್ತೆ ಪಕ್ಕ,ಬಸ್ಸ್ ನಿಲ್ದಾಣ ಹಾಗೂ ಸಿಕ್ಕ ಸಿಕ್ಕಲ್ಲಿ ಮೂರ್ತಿಗಳನ್ನು ಇಡುವುದು ಅನಿವಾರ್ಯವಾಗಿದ್ದರಿಂದ ಮಳೆಗಾಲದಲ್ಲಿ ಶೇಕಡಾ 10ರಿಂದ 15ರಷ್ಟು ಮೂರ್ತಿಗಳು ನಾಶವಾಗಿ ನಷ್ಟನುಭಿವಿಸಬೇಕಾಗುತ್ತದೆ. ನಮಗೆ ಸರಕಾರ ಎಲ್ಲಾದರು ಖಾಲಿ ಜಾಗವನ್ನು ನೀಡಿದರೆ ನಾವು ಜನರ ಬೇಡಿಕೆಗೆ ತಕ್ಕಂತೆ ಮೂರ್ತಿಗಳನ್ನು ತಯಾರಿಸಿ ಪೂರೈಸುತ್ತೆವೆ ಹಾಗೂ ಆಗುತ್ತಿರುವ ನಷ್ಟದಿಂದ ಕೂಡ ಬಚಾವಾಗುತ್ತೆವೆ ಎನ್ನುತಾರೆ ಸುರೇಶ.
ತಮಗೆ ಕೊಣ್ಣೂರಿನಲ್ಲಿ ತಯಾರಿಸಿದ ಮೂರ್ತಿಗಳು ಬೇಕಾದಲ್ಲಿ 6 ತಿಂಗಳ ಮುಂಚಿತವಾಗಿಯೆ ಬೇಡಿಕೆಯನ್ನು ಸಲ್ಲಿಸಬೇಕು. ಇಲ್ಲಿ 25 ರೂ.ಗಳಿಂದ 20 ಸಾವಿರ ತನಕದ ಬೆಲೆಯ ಮೂರ್ತಿಗಳನ್ನು ತಯಾರು ಮಾಡಲಾಗುತ್ತದೆ. ಈ ಮೂರ್ತಿಗಳು ರಾಜ್ಯದ ಹಾಗೂ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂದ್ರ ಹಾಗೂ ತಮಿಳನಾಡಿನ ಕೆಲವು ಭಾಗಗಳಿಗೂ ಸರಬರಾಜು ಆಗುತ್ತವೆ. ರಾಜ್ಯದ ಅನೇಕ ಕಡೆಗಳಲ್ಲಿ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಾರೆ. ಆದರೆ ಸುಮಾರು 2.5 ಲಕ್ಷ ಗಣೇಶನ ಮೂರ್ತಿ ಪ್ರತಿವರ್ಷ ತಯಾರಿಸುವುದು ಕೊಣ್ಣೂರಿನಲ್ಲಿ ಮಾತ್ರ ಎನ್ನಲಾಗುತ್ತಿದೆ.
ಇಲ್ಲಿನ ಕುಂಬಾರರ ಸಮಸ್ಯೆಗಳಲ್ಲಿ ಕೆಂಪು ಮಣ್ಣಿನ ಲಭ್ಯತೆಯೂ ಒಂದಾಗಿದೆ. ಮಣ್ಣಿನ ಲಭ್ಯತೆ ತೀರಾ ಕಡೆಮೆಯಾಗಿದೆ. ಮೂರ್ತಿ ತಯಾರಿಕೆ ವರ್ಷ ಪೂರ್ತಿ ನಡೆಯುತ್ತದೆ. ಮಣ್ಣು ಶೇಖರಣೆ ಮಾಡಿಕೊಂಡು ವಿಜಯದಶಮಿಯಂದು ಮಣ್ಣಿಗೆ ಪೂಜೆ ಮಾಡಿ ಮೂರ್ತಿ ತಯಾರಿಕೆಗೆ ಪ್ರಾರಂಭಿಸಲಾಗುತ್ತದೆ. ಸುಮಾರು 300ಜನ ಕೆಲಸಗಾರರು ಪ್ರತಿನಿತ್ಯ ಕೆಲಸದಲ್ಲಿ ನಿರತರಾಗಿರುತ್ತಾರೆ. ಮೊದಲು ಕೆಲಸಗಾರರ ಸಮಸ್ಯೆ ಇದ್ದಿತ್ತು ಆದರೆ ಈಗ ಜಾತಿ ಬೇದ-ಬಾವ ಇಲ್ಲದೆ ಎಲ್ಲಾ ಜಾತಿಯವರು ಕೆಲಸಕ್ಕೆ ಬರುತ್ತಾರೆ. ಮುಖ್ಯವಾಗಿ ಮಹಿಳೆಯರು, (ಮುಸ್ಲಿಂ ಮಹಿಳೆಯರು ಸೇರಿ) 50ಕ್ಕೂ ಹೆಚ್ಚು ಜನ ಮಹಿಳೆಯರು ಕೆಲಸಕ್ಕೆ ಬರುತ್ತಾರೆ.
ಕೊಣ್ಣೂರ ಗಣಪನಿಗೆ ಬೇಡಿಕೆ ಹೆಚ್ಚು: ಇಲ್ಲಿನ ಗಣೇಶನಿಗೆ ಅಪಾರ ಬೇಡಿಕೆ ಏಕೆಂದರೆ ಇಂದಿನ ಆಧುನಿಕ ಕಾಲದಲ್ಲಿಯೂ ಇಲ್ಲಿನ ಕುಂಬಾರರು ಸಂಪೂರ್ಣವಾಗಿಯೂ ಕೆಂಪು ಮಣ್ಣಿನಿಂದಲೆ ಮೂರ್ತಿಗಳನ್ನು ತಯಾರಿಸುದರಿಂದ ಇದು ಪರಿಸರಕ್ಕೆ ಹಾನಿಕಾರಕವಲ್ಲ. ಯಾವುದೆ ರಾಸಯನಿಕ ಪದಾರ್ಥ ಮೂರ್ತಿ ತಯಾರಿಕೆಗೆ ಸಂದರ್ಭದಲ್ಲಿ ಸೇರ್ಪಡೆ ಮಾಡುವುದಿಲ್ಲ. ಇದರಿಂದ ಇಲಿನ ಗಣಪತಿಗೆ ಪರಿಸರ ಸ್ನೇಹಿ ಗಣಪತಿ ಎಂದು ಕರೆಯಲಾಗುತ್ತದೆ. ಹಲವು ವಿಧದ ವಿನ್ಯಾಸದ ಗಣಪತಿಗಳನ್ನು ತಯಾರಿಸುತ್ತಾರೆ. ಹಬ್ಬಕ್ಕೆ ಮೂರು ತಿಂಗಳು ಇರುವ ಮೊದಲೆ ಮೂರ್ತಿಗಳನ್ನು ಮಾರಾಟಗಾರರು ತೆಗೆದುಕೊಂಡು ಹೋಗಲು ಪ್ರಾರಂಭಿಸುತ್ತಾರೆ.
ಈ ಗ್ರಾಮದಲ್ಲಿನ ಅನೇಕ ಕುಟುಂಬಗಳಿಗೆ ಈ ಮೂರ್ತಿ ತಯಾರಿಕೆ ಉದ್ಯೋಗವೆ ಜೀವನಾಧಾರವಾಗಿದೆ. ಘಟಪ್ರಭಾ ನದಿಯ ದಂಡೆಯಲ್ಲೆಯೆ ಮೂರ್ತಿಗಳನ್ನು ತಯಾರಿಸುತ್ತಿರುತ್ತಾರೆ. ಹಲವಾರು ಬಾರಿ ನದಿ ಉಕ್ಕಿದಾಗಲೂ ಇಲ್ಲಿನ ಗಣಪತಿ ತಯಾರಿಕಾ ಕೇಂದ್ರದಲ್ಲಿ ಹಾನಿಯಾಗಿದೆ. ಜನಪ್ರತಿನಿದಿಗಳು, ಅಧಿಕಾರಿಗಳು ಇಲ್ಲಿಗೆ ಬಂದು ಆಕರ್ಷಕ ಗಣಪತಿ ಮೂರ್ತಿಯನ್ನು ನೋಡಿ ಮೆಚ್ಚುಗೆ ಪಡುತ್ತಾರೆ ವಿನಹಃ ಇವರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಸೌಲಭ್ಯ ಒದಗಿಸುವ ಪ್ರಯತ್ನವನ್ನು ಮಾಡಲಿಲ್ಲ.
ಆದ್ದರಿಂದ ಅನೇಕ ತೊಂದರೆಗಳಲ್ಲಿಯು ಕೂಡ ತಮ್ಮ ಕುಲಕಸುಬವನ್ನು ಮುಂದುವರಿಸಿಕೊಂಡು ಹೊರಟಿರುವ ಕೊಣ್ಣೂರಿನ ಕಂಬಾರರ ಕುಟುಂಬಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ನೆರವು ನೀಡುವ ಅವಶ್ಯಕತೆ ಇದೆ.