ಕುಂಬಾರ ಸಮುದಾಯಕ್ಕೆ ರಾಜಕೀಯ ಸ್ಥಾನಮಾನದ ಅಗತ್ಯತೆ ಇದೆ : ಕೋಟ ಶ್ರೀನಿವಾಸ ಪೂಜಾರಿ ಅಭಿಮತ
ಕುಂದಾಪುರ (ಮಾ.೧೩, ಕುಲಾಲ್ ವರ್ಲ್ಡ್ ನ್ಯೂಸ್) : ವೃತ್ತಿ ಆಧಾರದಲ್ಲಿ ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಹುಟ್ಟಿದ್ದು ಇದೀಗ ಬಲಿಷ್ಟ ಸಮುದಾಯಗಳು ಚಿಕ್ಕ-ಪುಟ್ಟ ಸಮುದಾಯಗಳ ಅವಕಾಶವನ್ನು ಕಸಿದುಕೊಳ್ಳುತ್ತಿವೆ. ಇದು ಬದಲಾಗಬೇಕು; ಚಿಕ್ಕ-ಪುಟ್ಟ ಶೋಷಿತ ಸಮುದಾಯಗಳಿಗೂ ರಾಜಕೀಯ, ಸಾಮಾಜಿಕ ಸ್ಥಾನಮಾನ ಸಿಗಬೇಕಾದ ಅಗತ್ಯ ಇದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಅಭಿಪ್ರಾಯ ಪಟ್ಟರು.
ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ ಹೆಂಗವಳ್ಳಿ ಘಟಕದ ವತಿಯಿಂದ ಹೆಂಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿದ ಪ್ರಥಮ ವರ್ಷದ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ವಿದ್ಯಾನಿಧಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಕುಂಬಾರಿಕೆ ಇದು ನಶಿಸುತ್ತಿರುವ ಜಾತಿ ಉದ್ಯೋಗಗಳಲ್ಲಿ ಒಂದು. ಇದಕ್ಕೆ ಕಾಯಕಲ್ಪ ನೀಡಬೇಕಾದ ಅಗತ್ಯತೆ ಇದೆ. ಕರ್ನಾಟಕದಾದ್ಯಂತ ಕುಂಬಾರ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿ ಇದ್ದು ಸಮುದಾಯದ ಮುಖ್ಯವಾಹಿನಿಗೆ ಇವರು ಬರಬೇಕಾಗಿದೆ. ಈ ನೆಲೆಯಲ್ಲಿ ಜಾತಿ ಸಂಘಟನೆಗಳು ಸ್ವಜಾತಿಯನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವುದು ಗಮನಾರ್ಹ ಎಂದು ಅವರು ಅಭಿಪ್ರಾಯ ಪಟ್ಟರು.
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಕುಂಬಾರ ಮಹಾಸಂಘದ ಗೌರವಾಧ್ಯಕ್ಷ, ಕುಲಾಲ ರತ್ನ ಡಾ. ಎಮ್ ವಿ ಕುಲಾಲ್ ಮಾತನಾಡಿ ಪ್ರಾಮಾಣಿಕತೆ ಮುಗ್ದತೆಗೆ ಹೆಸರಾದ ಕುಂಬಾರ ಸಮುದಾಯ ಈ ಸಮಾಜದಲ್ಲಿ ಸಾಕಷ್ಟು ತುಳಿತಕ್ಕೆ ಒಳಗಾಗಿದೆ. ಉನ್ನತ ಶಿಕ್ಷಣ, ಬಲಿಷ್ಟ ಸಂಘಟನೆ, ಸಾಮಾಜಿಕ ಜಾಗೃತ ಮನಸ್ಸು ಕುಲಾಲರಲ್ಲಿ ರೂಪುಗೊಳ್ಳಬೇಕಿದ್ದು ಜಾತಿ ಸಂಘಗಳು ಈ ನೆಲೆಯಲ್ಲಿ ಶ್ರೇಷ್ಟ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಕರಾವಳಿ ಕುಲಾಲ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ದಿಕ್ಸೂಚಿ ಭಾಷಣ ಮಾಡಿದರು. ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ ಹೆಂಗವಳ್ಳಿ ಘಟಕದ ಅಧ್ಯಕ್ಷರಾದ ಗೋವಿಂದ ಕುಲಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇಂಟಕ್ ರಾಜ್ಯ ಘಟಕದ ಅಧ್ಯಕ್ಷ ರಾಕೇಶ್ ಮಲ್ಲಿ, ಕರಾವಳಿ ಕುಲಾಲ ಯುವ ವೇದಿಕೆಯ ರಾಜ್ಯಧ್ಯಕ್ಷ ತೇಜಸ್ವಿರಾಜ್, ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರದ ಅಧ್ಯಕ್ಷರಾದ ನಿರಂಜನ ಎಂ. ಅಸೋಡು, ರಾಜ್ಯ ಕುಂಬಾರ ಮಹಾಸಂಘದ ಕರಾವಳಿ ವಿಭಾಗದ ಅಧ್ಯಕ್ಷರಾದ ಮಹಾಬಲ ಕುಲಾಲ್, ಕರಾವಳಿ ಕುಲಾಲ ಯುವ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಪ್ರಮುಖರಾದ ಲಯನ್ ಹರೀಶ್ ಕಾರಿಂಜ, ಬೈಂದೂರು ವಲಯದ ಅರಣ್ಯಾಧಿಕಾರಿ ಪ್ರಭಾಕರ ಎಂ. ಕುಲಾಲ್, ಕುಂದಾಪುರ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಹರೀಶ್ ಕುಲಾಲ್ ಕೆದೂರು, ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಕುಲಾಲ್, ಬೈಂದೂರು ವಿಧಾನಸಭಾ ಕ್ಷೇತ್ರದ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಮಂಜುನಾಥ ಕುಲಾಲ್ ಜನ್ಸಾಲೆ, ಹೆಂಗವಳ್ಳಿ ಗ್ರಾ.ಪಂ ಸದಸ್ಯೆ ಸರೋಜ ಉದಯ್ ಕುಲಾಲ್, ಹೆಂಗವಳ್ಳಿ ಯುವ ವೇದಿಕೆಯ ಉಪಾಧ್ಯಕ್ಷ ರಮೇಶ್ ಕುಲಾಲ್ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೋಶಾಧಿಕಾರಿ ವಸಂತ ಕುಲಾಲ್ ಸ್ವಾಗತಿಸಿದರು, ಉಪಾದ್ಯಕ್ಷ ರಮೇಶ್ ಕುಲಾಲ್ ವರದಿ ವಾಚಿಸಿದರು, ಅಥಿಲ ಕುಲಾಲ್ ಧನ್ಯವಾದ ಸಮರ್ಪಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂಧರ್ಭದಲ್ಲಿ ಹಿರಿಯ ನಾಗರಿಕ ಬೋಳು ಕುಲಾಲ್, ಕುಂಬಾರಿಕೆ ವೃತ್ತಿ ನೆಡೆಸುವ ಕೃಷ್ಣ ಕುಲಾಲ್, ಕಥೆಗಾರ ಮಂಜುನಾಥ್ ಹಿಲಿಯಾಣ, ಸಂಗೀತ ಕಲಾವಿದೆ ವಿಜಯಲಕ್ಷ್ಮಿ ಮೆಟ್ಟಿನಹೊಳೆ, ಧಾನಿಗಳಾದ ಪಾರ್ವತಿ ಜಯರಾಮ್ ಕುಲಾಲ್, ಉಷಾ ವಸಂತ ಕುಲಾಲ್ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯ್ತು. ಕುಲಾಲ ಸಮಾಜದ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಲಾ ವೈಭವ ಜರುಗಿತು. ಮನು ಹಂದಾಡಿ ಅವರಿಂದ ‘ನ್ಯಗಿ ಅಟ್ಟುಳಿ’ ಹಾಸ್ಯ ಕಾರ್ಯಕ್ರಮ ನಡೆಯಿತು.
__________________________________________________________________
ಕರಾವಳಿ ಕುಲಾಲ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ದಿಕ್ಸೂಚಿ ಭಾಷಣಗೈಯುತ್ತಾ ಜಾತಿ ಸಂಘ ಹಾಗೂ ಯುವ ಸಂಘಟನೆಗಳು ಮೂಲಭೂತ ಸಮಸ್ಯೆಗಳಾದ ಶಿಕ್ಷಣ, ಆರೋಗ್ಯ, ವಸತಿ ಸಮಸ್ಯೆಗಳಿಗಾಗಿ ಸ್ಪಂದಿಸಬೇಕು, ಸಾಮಾಜಿಕ ನ್ಯಾಯಕ್ಕಾಗಿ ಹಕ್ಕೋತ್ತಾಯ ಮಾಡಬೇಕು. ಹೊಡೆದಾಟ-ಬಡಿದಾಟ ಮಾಡುತ್ತಾ ರಾಜಕೀಯ ಕಚ್ಚಾಟಕ್ಕೆ ಇಳಿಯಬಾರದು. ಲಿಂಗತಾರತಮ್ಯದ ಕುರಿತು ಯುವಕ ಸಂಘಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವುದರ ಜೊತೆ ಜೊತೆಗೆ ಹೆಣ್ಣು ಭ್ರೂಣ ಹತ್ಯೆಯನ್ನು ವಿರೋಧಿಸಿ ಮಹಿಳಾ ಶಿಕ್ಷಣದ ಅಗತ್ಯತೆಯ ಅರಿವನ್ನು ಮೂಡಿಸಬೇಕು. ಈ ನೆಲೆಯಲ್ಲಿ ಕುಲಾಲ ಯುವ ವೇದಿಕೆಗಳು ಜಾತಿ ಸಂಘಟನೆಯ ಕೆಲಸಗಳ ಜೊತೆ ಜೊತೆಯಲ್ಲಿ ಸಾಮಾಜಿಕ ಜಾಗೃತಿಯ ಕೆಲಸವನ್ನು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.
_____________________________________________________________________