(ಕುಲಾಲ್ ವರ್ಲ್ಡ್ ಡಾಟ್ ಕಾಮ್, 13, 03, 2018)
ಈ ಮನೆಗೆ ಬಾಗಿಲುಗಳಿಲ್ಲ.. ವಿದ್ಯುತ್ ಇಲ್ಲ, ಶೌಚಾಲಯವಿಲ್ಲ, ಜೋರಾಗಿ ಸುರಿಯುವ ಮಳೆಗೆ ಒಳ ಹೊಕ್ಕುವ ನೀರು, ಜೋರಾಗಿ ಬೀಸುವ ಗಾಳಿಗೆ ಹಾರುವ ಮೇಲ್ಛಾವಣಿ.. ಆಗಲೋ ಈಗಲೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಮುರುಕಲು ಮನೆಯಲ್ಲಿ ದಯನೀಯ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಒಬ್ಬಂಟಿ ಹಿರಿಜೀವ ತುತ್ತು ಅನ್ನಕ್ಕೂ ಪರದಾಡುತ್ತಾ ಬದುಕು ನಡೆಸುತ್ತಿದೆ..
ಇದು ಯಾವುದೋ ಕುಗ್ರಾಮದಲ್ಲಿರುವ ಕುಟುಂಬ ಸ್ಥಿತಿಯಲ್ಲ. ಹಲವಾರು ವಿಧದಲ್ಲಿ ಅಭಿವೃದ್ಧಿಯ ಪಥ ಹಿಡಿದಿರುವ ಮಂಗಳೂರು ಸುರತ್ಕಲ್ ಕೃಷ್ಣಾಪುರದ ಏಳನೇ ಬ್ಲಾಕ್ ನಲ್ಲಿ ವಾಸವಾಗಿರುವ ವೃದ್ಧೆಯ ಶೋಚನೀಯ ಸ್ಥಿತಿ. ಸಂಸಾರದ ಜಂಜಾಟವನ್ನು ಮಕ್ಕಳ ಹೆಗಲಿಗೇರಿಸಿ, ಮೊಮ್ಮಕ್ಕಳ ಜತೆ ಕಾಲ ಕಳೆಯುವ ವಯಸ್ಸದು. ಆದರೆ ವಿಧಿಬರೆಹ ಬೇರೇನೇ. ನಾವೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬಂತೆ ಈ ಹಿರಿಜೀವ ಲಕ್ಷ್ಮೀ ಮೂಲ್ಯ(೫೦ ವರ್ಷ) ಅವರ ಸ್ಥಿತಿ ಎಂಥವರ ಮನವನ್ನೂ ಕಲಕುತ್ತದೆ.
ಈಕೆ ಪ್ರಸ್ತುತ ವಾಸಿಸುತ್ತಿರುವ ಹಳೆಯ ಹಂಚಿನ ಮನೆ ಶೋಚನೀಯ ಸ್ಥಿತಿಯಲ್ಲಿದೆ. ಈ ಮನೆಗೆ ಬಾಗಿಲುಗಳಿಲ್ಲ.. ಸ್ನಾನಕ್ಕೆ ಸ್ನಾನ ಗೃಹ ಇಲ್ಲ. ಶೌಚಕ್ಕೆ ಶೌಚಾಲಯ ಕೂಡ ಇಲ್ಲ. ಮಾನಸಿಕವಾಗಿ ಅಸ್ವಸ್ಥರಂತೆ ವರ್ತಿಸುವ ಇವರ ಪತಿ ಹೆಸರು ಕೇಶವ ಎಂದು ತಿಳಿಸಿದ್ದು, ಆತ ಎಲ್ಲಿದ್ದಾನೋ ತಿಳಿದಿಲ್ಲ. ಈ ಮಹಿಳೆಗೆ ಗೋಪಾಲ ಮೂಲ್ಯ ಎಂಬ ಹಿರಿ ಸಹೋದರನಿದ್ದು, ಇವರು ಕೂಲಿ ನಾಲಿ ಮಾಡುತ್ತಾ ಯಾವಾಗಲಾದರೊಮ್ಮೆ ಮನೆಗೆ ಬಂದು ಹೋಗುತ್ತಾರೆ. ಇವರು ತಂದು ಹಾಕಿದರಷ್ಟೇ ಹೊಟ್ಟೆಗೆ ಕೂಳು!
ಹೊಸಬೆಟ್ಟುವಿನ ಮಿತ್ತೊಟ್ಟು ಬಂಗೇರ ಕುಟುಂಬಕ್ಕೆ ಸೇರಿದವರಾದ ಲಕ್ಷ್ಮೀ ಅವರಿಗೆ ಲಕ್ಷ್ಮಣ ಎಂಬ ಅಣ್ಣ ಹಾಗೂ ಸುಂದರಿ ಎಂಬ ಅಕ್ಕ ಇದ್ದು ಇವರಿಬ್ಬರೂ ತೀರಿಕೊಂಡಿದ್ದಾರೆ. ಆ ಬಳಿಕ ಆಗೀಗ ಬಂದು ಹೋಗುವ ಅಣ್ಣನ ಜೊತೆ ಈ ಮನೆಯಲ್ಲಿ ವಾಸವಿದ್ದು, ಇತರ ಬಂಧುಗಳಿದ್ದರೂ ನಿರ್ಲಕ್ಷ್ಯದಿಂದ ಮೂಲೆಗುಂಪಾಗಿದ್ದಾರೆ. ಲಕ್ಷ್ಮೀ ಅವರು ಜನರ ಒಡನಾಟ ಸಂಪರ್ಕವಿಲ್ಲದೆ ಒಬ್ಬಂಟಿ ಜೀವನ ಸಾಗಿಸುತ್ತಿರುವುದರಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದು, ಕೆಲವೊಂದು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಇವರ ಬಳಿ ಓಟರ್ ಐಡಿ ಬಿಟ್ಟರೆ ರೇಷನ್ ಕಾರ್ಡು ಕೂಡ ಇದ್ದಂತಿಲ್ಲ.
ಬಡವರಿಗಾಗಿ ಕೇಂದ್ರ, ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ತಂದಿದ್ದರೂ ಅದು ಕಟ್ಟಕಡೆಯ ಕುಟುಂಬಕ್ಕೆ ತಲುಪುವುದಿಲ್ಲ ಎಂಬುದಕ್ಕೆ ಈ ಕುಟುಂಬ ತಾಜಾ ಉದಾಹರಣೆಯಾಗಿದೆ. ಇನ್ನು ಮಂಗಳೂರು ಹಾಗೂ ಸುರತ್ಕಲ್ ಆಸುಪಾಸಿನಲ್ಲಿ ಹಲವಾರು ಜಾತೀಯ ಸಂಘ-ಸಂಸ್ಥೆಗಳಿದ್ದರೂ ಪರದಾಟ ನಡೆಸುತ್ತಿರುವ ಈ ಕುಟುಂಬ ಅವರ ಕಣ್ಣಿಗೂ ಬೀಳದಿರುವುದು ಸೋಜಿಗದ ಸಂಗತಿ. ಇನ್ನಾದರೂ ಒಬ್ಬಂಟಿಯಾಗಿರುವ ಮಹಿಳೆಯ ಸಹಾಯಕ್ಕೆ ಬರಬೇಕಾಗಿದೆ.
ಚಿತ್ರ-ಮಾಹಿತಿ : ಹೇಮಂತ್ ಕುಮಾರ್ ಕಿನ್ನಿಗೋಳಿ