ಬಂಟ್ವಾಳ(ಫೆ.೦೧, ಕುಲಾಲ್ ವರ್ಲ್ಡ್ ನ್ಯೂಸ್): ನಾಗಾರಾಧನೆ ತುಳುನಾಡಿನ ಒಂದು ಜಾತ್ಯಾತೀತ ಚಿಂತನೆ. ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಧರ್ಮೀಯರು ಒಟ್ಟಾಗಿ ನಂಬಿ ಆಚರಿಸುವ ಒಂದು ಐಕ್ಯತೆಯ ಆಚರಣೆ. ಸಹಿಷ್ಣುತೆಗೆ ದೊಡ್ಡ ಮಾದರಿ ಹಾಗು ಪರಿಸರ ಉಳಿಸಲು ಹಿರಿಯರು ಹಾಕಿ ಕೊಟ್ಟ ಬಹು ದೊಡ್ಡ ಮಂತ್ರವಾಗಿದ್ದು, ಬಂಟ್ವಾಳ ಪರಿಸರದಲ್ಲಿ 1950 ರ ಹೊತ್ತಿಗೆ ಚೊಚ್ಚಲ ನಾಗ ಮಂಡಲ ಮಾಡಿದ ಕೀರ್ತಿ ಕುಲಾಲ ಮಠಕ್ಕಿದೆ ಎಂದು ವೈದ್ಯ, ಸಂಘಟಕ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ಕುಂಭೋದರಿ ದೇವಿ ಕ್ಷೇತ್ರ ಬಿಸಿರೋಡು ಇಲ್ಲಿಯ ಕರಂಬೇರ ಕುಟುಂಬಸ್ಥರ ಮೂಲಸ್ಥಾನ ದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ನಾಗ ಸಾನ್ನಿದ್ಯದಲ್ಲಿ ಶ್ರೀ ನಾಗಾಬ್ರಹ್ಮಾದಿ ಪರಿವಾರ ದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ನಾಗದರ್ಶನ ಸೇವೆ ಸಂದರ್ಭ ಧಾರ್ಮಿಕ ಉಪನ್ಯಾಸ ನೀಡಿದ ಅವರು, ಕದಡಿದ, ಹದಗೆಟ್ಟ ತುಳುನಾಡಿಗೆ ಎಸಿ ರೂಮಲ್ಲಿ ಕುಳಿತು ಸೂರ್ಯ-ಚಂದ್ರನತ್ತ ಸೂಕ್ಷ್ಮದರ್ಶಕದ ಮೂಲಕ ನೋಡುವ ವಿಜ್ಞಾನಿಗಳಾಗಲಿ ಕಟ್ ಅಂಡ್ ಪೇಸ್ಟ್ ಮಾಡುವ ಪಂಡಿತ ಪಾಮರರಾಗಲಿ ರಾಜಕಾರಣಿಗಳಿಗೆ ಬಹುಪರಾಕ್ ಹೇಳುವ ಎಡ ಬಲ ಪಂಥದ ಬುದ್ದಿ ಜೀವಿಗಳಾಗಲಿ, ಸಮಾಜ ಸೇವೆಯ ಸೋಗಿನ ರಾಜಕಾರಣಿಗಳ ಅಗತ್ಯವಿಲ್ಲ. ಅದರ ಬದಲಿಗೆ ಜನರ ಮಧ್ಯೆ ಇದ್ದು ಅವರ ನೋವು ನಲಿವನ್ನ ಅರಿತು ಮಾನವ ಜೀವ ಜೀವಗಳ ನಡುವಿನ ಮಾನವೀಯ ಹೃದಯಗಳನ್ನ ಬೆಸೆಯುವ ಸಮಾಜ ವಿಜ್ಞಾನಿಗಳು ಬೇಕು ಎಂದರು.
ಮುಂದುವರಿದು ಮಾತನಾಡಿದ ಅವರು, ಎಲ್ಲಾ ಬರಿಯವರು ತಮ್ಮ ತಮ್ಮ ಮೂಲ ಸ್ಥಾನಗಳಲ್ಲಿ ಧಾರ್ಮಿಕ ಸೇವೆಯ ಜೊತೆ ತಮ್ಮ ತಮ್ಮ ಕುಟುಂಬದವರ ನೋವು ನಲಿವು ಕಷ್ಟ ಕಾರ್ಪಣ್ಯ- ಮದುವೆ ಮುಂತಾದ ಕೆಲಸಗಳಲ್ಲಿ ಕೈ ಜೋಡಿಸಬೇಕು. ಕರಂಬೇರ ಕುಟುಂಬದವರು ವಿದ್ಯಾನಿಧಿಗೆ ಚಾಲನೆ ಕೊಟ್ಟು ಎಲ್ಲಾ ಬರಿಯವರಿಗೆ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತುಳುನಾಡಿನ ಪ್ರಕೃತಿ ಹಾಗು ಪರಿಸರ ನಮಗೆ ನಾಗನ ಕೊಡುಗೆ. ಅದನ್ನ ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ಕೊಡಬೇಕಾಗಿದೆ. ಕುಲಾಲ ಮಠ ದಲ್ಲಿ ಮತ್ತಷ್ಟು ಧಾರ್ಮಿಕ ಕಾರ್ಯಗಳಾಗಲಿ ಎಂದು ಶುಭ ಹಾರೈಸಿದರು.
ನಡುಬೊಟ್ಟು ದೇವಸ್ಥಾನದ ಧರ್ಮದರ್ಶಿ ರವಿ ಎನ್ ಮಾತನಾಡಿ, ವಿಜ್ಞಾನ, ಹಣ-ಅಂತಸ್ಸಿನ ಹಿಂದೆ ಬಿದ್ದು ಅಹಂಕಾರದಿಂದ ಅಜ್ಞಾನಿಗಳಾಗಿ ಧರ್ಮ ಕರ್ಮದ ಸೂಕ್ಷ್ಮತೆ ಅರಿಯದೆ ತಪ್ಪು ಮಾಡ ಮಾಡಬಾರದು. ಧಾರ್ಮಿಕ ಚಿಂತನೆಗಳಿಂದ ಸುಜ್ಞಾನ ಗಳಿಸಬೇಕೆಂದರು. ಕರಂಬೇರ ಕುಟುಂಬಸ್ಥರು ಹಾಗು ಪರಿಸರದ ಸಾವಿರಾರು ಮಂದಿ ಭಕ್ತರು ನಾಗಾರಾಧನೆಯಲ್ಲಿ ಭಯ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.