ವಚನ, ಕಾವ್ಯ, ಕವನಗಳ ಮೂಲಕ ಕ್ರಾಂತಿಯನ್ನು ಎಬ್ಬಿಸಿದ ಕವಿ ಸರ್ವಜ್ಞ : ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ಅನುಭವಗಳಿಂದ ವಚನಗಳ ಮೂಲಕ ಲೋಕದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಕವಿ ಸರ್ವಜ್ಞ. ಸಾಮಾಜಿಕ ತಾರತಮ್ಯಗಳಿಂದ ನರಳುತ್ತಿದ್ದ ಸಮಾಜದಲ್ಲಿ ಸಮಾನತೆ ಮೂಡಿ ಸಲು, ಜನರಲ್ಲಿ ಬದಲಾವಣೆಗಳನ್ನು ತರಲು ಶಕ್ತರ ವಿರುದ್ಧ ವಚನ, ಕಾವ್ಯ, ಕವನಗಳ ಮೂಲಕ ಕ್ರಾಂತಿಯನ್ನು ಎಬ್ಬಿಸಿದ ಕ್ರಾಂತಿಕಾರಿ ಕವಿ ಸರ್ವಜ್ಞ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಉಡುಪಿ ಇವರ ಸಹಯೋಗದೊಂದಿಗೆ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾವು ಚರಿತ್ರೆಯನ್ನು ಗಮನಿಸಿದಾಗ, ಮಹಾನ್ ಸಾಧಕರ ಜೀವನವನ್ನು ಅಭ್ಯಸಿಸಿದಾಗ ಅವರೆಲ್ಲರೂ ತುಳಿತಕ್ಕೊಳಗಾದವರು ಹಾಗೂ ಹಿಂದುಳಿದ ಸಮಾಜದಲ್ಲಿ ಜನಿಸಿದವರು ಎಂಬುದು ಗಮನೀಯ. ವಾಲ್ಮೀಕಿ, ವೇದವ್ಯಾಸ, ಅಂಬಿಗರ ಚೌಡಯ್ಯ, ಕನಕದಾಸ, ಪುರಂದರ ದಾಸರು ಎಲ್ಲರೂ ಸಾಮಾಜಿಕ ಚಳವಳಿಯನ್ನು ಇದೇ ಮಾದರಿಯಲ್ಲಿ ಮುಂದುವರಿಸಿ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು ಎಂದು ಸಚಿವರು ನುಡಿದರು.
ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಸರ್ವಜ್ಞನ ವಚನಗಳೊಂದಿಗೆ ಕವಿಯನ್ನು ಸ್ಮರಿಸಿದರು. ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ಶರತ್ಕುಮಾರ್ ಬೈಲಕೆರೆ, ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಧನಂಜಯ ಕುಂದರ್, ರಾಜ್ಯ ಕುಂಬಾರರ ಮಹಾಸಂಘದ ಗೌರವಾಧ್ಯಕ್ಷ ಡಾ.ಎಂ.ವಿ.ಕುಲಾಲ್, ಸಂಘಟನಾ ಕಾರ್ಯದರ್ಶಿ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಶಂಕರ್ ಕುಲಾಲ್ ಪೆರಂಪಳ್ಳಿ, ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಎಸ್. ಹೆಗ್ಡೆ ಉಪಸ್ಥಿತರಿದ್ದರು.
ಕವಿ ಸರ್ವಜ್ಞರ ಕುರಿತು ಡಾ.ಎಂ.ಅಣ್ಣಯ್ಯ ಕುಲಾಲ್ ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ನಿರ್ದೇಶಕ ಡಾ.ಬಿ. ದೇವದಾಸ ಪೈ ಸ್ವಾಗತಿಸಿದರು. ಯಶವಂತ್ ಬನ್ನಂಜೆ ಮತ್ತು ಬಳಗದಿಂದ ವಚನಗಾಯನ ನಡೆಯಿತು.
________________________________________
ಸರ್ವಜ್ಞ ಸಂಶೋಧನಾ ಕೇಂದ್ರ ಸ್ಥಾಪನೆಗೆ ಗುರುಬಸವ ಕುಂಬಾರ ತಿಪ್ಪೇಸ್ವಾಮಿ ಒತ್ತಾಯ
ಚಿತ್ರದುರ್ಗ: ತ್ರಿಪದಿಗಳ ಮೂಲಕ ಸಮಾಜಕ್ಕೆ ಸಂದೇಶ ಸಾರಿದ ಸರ್ವಜ್ಞನ ಜನ್ಮಸ್ಥಳ ಮತ್ತು ಸಮಾಧಿ ಸ್ಥಳವನ್ನು ಸರ್ಕಾರ ಅಭಿವೃದ್ಧಿಪಡಿಸಿ, ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಕುಂಬಾರ ಗುರುಪೀಠದ ಗುರುಬಸವ ಕುಂಬಾರ ತಿಪ್ಪೇಸ್ವಾಮಿ ಒತ್ತಾಯಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ತರಾಸು ರಂಗಮಂದಿರದಲ್ಲಿ ನಡೆದ ‘ಕವಿ ಸರ್ವಜ್ಞ ಜಯಂತಿ’ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಇತ್ತೀಚೆಗೆ ನಾವು ಹಾವೇರಿ ಜಿಲ್ಲೆ ಮಾಸೂರಿನಲ್ಲಿರುವ ಕವಿ ಸರ್ವಜ್ಞನ ಜನ್ಮಸ್ಥಳ ಮತ್ತು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದೆವು. ಅಲ್ಲಿನ ಪರಿಸ್ಥಿತಿ ಕಂಡು ಮನಸ್ಸಿಗೆ ತುಂಬಾ ನೋವಾಯಿತು. ರಾಜ್ಯದಲ್ಲಿ ಬಸವ ಗುರುಪೀಠ, ಕನಕ, ವಾಲ್ಮೀಕಿ ಗುರುಪೀಠ ಸೇರಿದಂತೆ ಹಲವು ದಾರ್ಶನಿಕರ ಗುರುಪೀಠಗಳಿಗೆ ಸರ್ಕಾರ ಅನುದಾನ ನೀಡಿ, ಅಭಿವೃದ್ಧಿಪಡಿಸಿದೆ. ಅದೇ ರೀತಿ ಈ ಸ್ಥಳವನ್ನು ಅಭಿವೃದ್ದಿಪಡಿಸಿ, ಸಂಶೋಧನಾ ಕೇಂದ್ರ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.
————————————————————————————————————–
ಚಿಂತಾಮಣಿಯಲ್ಲಿ ನಡೆದ ಸರ್ವಜ್ಞ ಜಯಂತಿ
ಕವಿ ಸರ್ವಜ್ಞರ ಬಗ್ಗೆ ಸಂಶೋಧನೆಯಾಗಲಿ : ಬಸವ ಗುಂಡಯ್ಯ ಸ್ವಾಮೀಜಿ
ತೆಲಸಂಗ: ಕವಿ ಸರ್ವಜ್ಞ ಜನರಿಗೆ ಸಾಮಾನ್ಯ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಸೇರಿದಂತೆ ಹಲವು ಅಂಕುಡೊಂಕುಗಳನ್ನು ತಿದ್ದಿದ ದೇಶದ ಮಹಾನ್ ಶಕ್ತಿ ಎಂದು ಕುಂಬಾರ ಗುರುಪೀಠದ ಶ್ರೀ ಬಸವ ಗುಂಡಯ್ಯ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಮಂಗಳವಾರ ಕವಿ ಸರ್ವಜ್ಞ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಭರತ ದೇಶದಲ್ಲಿ ವೇದ, ಉಪನಿಷತ್ಗಳನ್ನು ಜನರಿಗೆ ತಿಳಿಯುವ ಭಾಷೆಯಲ್ಲಿ ತ್ರಿಪದಿ ವಚನಗಳ ಮೂಲಕ ತಿಳಿಸಿದ್ದಾರೆ. ಸರ್ವಜ್ಞರ ಬಗ್ಗೆ ಸಂಶೋಧನೆ ಆಗಬೇಕು. ಕುಂಬಾರ ಸಮುದಾಯ ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರು.
ಮಾಜಿ ಕಾಡಾ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ವಿಷಯವಿಲ್ಲ. ಅವರು ಶಿಕ್ಷ ಣ, ಕೃಷಿ, ಸ್ತ್ರೀಯರ ಮಹತ್ವವನ್ನು ತ್ರಿಪದಿಗಳಲ್ಲಿ ತಿಳಿಸಿದ್ದರು. ಕನ್ನಡ ಪದ ಪುಂಜದ ಪಿತಾಮಹರಾಗಿದ್ದವರು ಎಂದರು.
ಬಿ.ಜಿ.ನಾಗನೂರ, ರಾಮಣ್ಣ ಕುಂಬಾರ, ಸುಭಾಷ ಕುಂಬಾರ, ಶ್ರೀಶೈಲ ಬಳಗಾನೂರ, ಅಪ್ಪಾಸಿ ಕುಂಬಾರ, ಗುರುರಾಜ ಕುಂಬಾರ, ಸದಾನಂದ ಕುಂಬಾರ, ಕಾಶೀನಾಥ ಕುಂಬಾರ, ಸುರೇಶ ಕುಂಬಾರ, ಮಲ್ಲಣ್ಣ ಕುಂಬಾರ, ವಿಠಲ ಕುಂಬಾರ, ಕಿರಣ ಕುಂಬಾರ, ಗುರು ಕುಂಬಾರ, ಎಂ.ಎನ್.ಬಣೋಶಿ, ಚನಬಸು ಕುಂಬಾರ, ಕರೆಪ್ಪ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
______________________________________
ನಮ್ಮ ಸಂಸ್ಕೃತಿ, ಮೂಲ ಉದ್ಯೋಗ ಮರೆಯದಿರಿ : ಸಂಸದ ಸುರೇಶ ಅಂಗಡಿ
ಬೆಳಗಾವಿ: ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ನಾವೆಲ್ಲರೂ ನೆಮ್ಮದಿಯಿಂದ ಬಾಳಬೇಕು ಎಂದು ತಿಳಿಸಿಕೊಟ್ಟ ಮಹಾನ್ ಪುರುಷ ಸರ್ವಜ್ಞರ ಆದರ್ಶಗಳನ್ನು ಪಾಲಿಸಬೇಕು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕಂಬಾರರು, ಕುಂಬಾರರು ಹಾಗೂ ಬಡಿಗೇರ ಸಮಾಜದವರು ತಮ್ಮ ಮೂಲ ಕಸುಬುಗಳನ್ನು ಮರೆತಿರುವುದರಿಂದ ಇಂದು ನಮ್ಮ ದೇಶಕ್ಕೆ ಹೊರ ದೇಶದಿಂದ ಯುದ್ಧ ಸಾಮಗ್ರಿ ಮತ್ತು ಇತರ ಕರಕುಶಲಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬಂದಿದೆ. ನಮ್ಮ ಸಂಸ್ಕೃತಿ ಮತ್ತು ಮೂಲ ಉದ್ಯೋಗ ಮುಂದುವರಿಸಿಕೊಂಡು ಹೋಗುವುದರಿಂದ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ಕಿವಿಮಾತು ಹೇಳಿದರು.
ತತ್ವಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಐ.ಎಸ್. ಕುಂಬಾರ ಮಾತನಾಡಿ, ಎಲ್ಲ ವಿಷಯಗಳನ್ನು ಬಲ್ಲವರು ಎಲ್ಲರ ಮನದಲ್ಲಿ ಇರುತ್ತಾರೆ. ಅದೇ ರೀತಿ ಸರ್ವಜ್ಞರು ಸರ್ವಕಾಲಕ್ಕೂ ಸಮಾನರು ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ನಗರ ಅಶೋಕ ವೃತ್ತದಲ್ಲಿ ಸರ್ವಜ್ಞ ಜಯಂತಿ ಮೆರವಣಿಗೆಗೆ ಸಂಸದ ಸುರೇಶ ಅಂಗಡಿ ಚಾಲನೆ ನೀಡಿದರು.
ಕರ್ನಾಟಕ ಪ್ರದೇಶ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಬಿ.ಜಿ. ಕುಂಬಾರ, ದಲಿತ ಮುಖಂಡ ಮಲ್ಲೇಶ ಚೌಗಲೆ, ಈರಪ್ಪ ಕುಂಬಾರ, ಮೇಘಾ ಕುಂಬಾರ, ಶಿವಾನಂದ ಕುಂಬಾರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ನಿರೂಪಿಸಿದರು.
______________________________________________________________________
ಸರ್ವಜ್ಞ ಸಾಮಾಜಿಕ ಕಾಯಿಲೆಯ ವೈದ್ಯ : ಕೆ.ಟಿ.ಪ್ರವೀಣ ಕುಮಾರ್
ನಗರದ ಕೊಟ್ಟೂರೇಶ್ವರ ಮಠದ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುಂಬಾರ ಸಂಘದ ವತಿಯಿಂದ ಆಯೋಜಿಸಿದ್ದ ತ್ರಿಪದಿ ಕವಿ ಸರ್ವಜ್ಞರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಕುಂಬಾರ ಸಮಾಜದ ಜನರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸಂಘಟನೆ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಸಮಾಜದ ಜನರು ಗಂಭೀರ ಚಿಂತನೆ ಮಾಡಬೇಕಾಗಿದೆ. ರಾಜ್ಯ ಸರಕಾರ ಕೈಗೊಂಡ ಜಾತಿ ಗಣತಿಯ ಪ್ರಕಾರ ಕುಂಬಾರ ಸಮಾಜದ ಜನಸಂಖ್ಯೆಯನ್ನು ಕೇವಲ ನಾಲ್ಕು ಲಕ್ಷ ವೆಂದು ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಈ ಸಂಖ್ಯೆ 16 ಲಕ್ಷ ಕ್ಕೂ ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಜನರು ಎಚ್ಚೆತ್ತು ಸಂಘಟನೆಯನ್ನು ಬಲಪಡಿಸಲು ಮುಂದಾಗಬೇಕು ಎಂದರು.
ಪ್ರೊಬೇಷನರಿ ಎಸಿ ಪ್ರಸನ್ನಕುಮಾರ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಸರ್ವಜ್ಞನ ವಚನಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.
ಪ್ರೊಬೇಷನರಿ ತಹಸೀಲ್ದಾರ ಶಂಕ್ರಪ್ಪ ಮಾತನಾಡಿ, ಸರ್ವಜ್ಞ ಸಮಾಜಕ್ಕೆ ವೈದ್ಯನಂತಿದ್ದು ಎಂತಹ ಸಮಸ್ಯೆಗಳಿದ್ದರೂ, ತ್ರಿಪದಿಗಳ ಮೂಲಕ ಅವುಗಳಿಗೆ ಪರಿಹಾರ ಕಲ್ಪಿಸಿದ ಧೀಮಂತ ವ್ಯಕ್ತಿಯಾಗಿದ್ದಾರೆ. ಅವರು ನೀಡಿದ ಸಂದೇಶಗಳು ಇಂದಿಗೂ ನಿತ್ಯನೂತನವಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತರ ಬರೆಯುವಾಗ ತ್ರಿಪದಿಗಳನ್ನು ಉಲ್ಲೇಖಿಸಿದರೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯ. ಇದು ತಮ್ಮ ಸ್ವಂತ ಅನುಭವ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರುಕ್ಮಿಣಿ ಸಾವುಕಾರ, ಬಿಜೆಪಿ ಮುಖಂಡರಾದ ಭಾರತಿ ಜಂಬಗಿ, ಅರುಣಕುಮಾರ ಪೂಜಾರ, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ನಗರಸಭೆ ಅಧ್ಯಕ್ಷೆ ಆಶಾ ಗುಂಡೇರ ಮಾತನಾಡಿದರು.
ಸ್ಥಳೀಯ ವಿರಕ್ತಮಠದ ಗುರುಬಸವಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶೇರುಖಾನ ಕಾಬೂಲಿ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಮಂಜುನಾಥ ಓಲೇಕಾರ, ಗ್ರಾಮೀಣ ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ, ಕೆ.ಶಿವಲಿಂಗಪ್ಪ, ಡಿವೈಎಸ್ಪಿ ಅನಿಲಕುಮಾರ ಭೂಮರಡ್ಡಿ, ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಕೊಟ್ರೇಶ ಕೆಂಚಪ್ಪನವರ, ಗೌ.ಅಧ್ಯಕ್ಷ ಬಿದ್ದಾಡೆಪ್ಪ ಚಕ್ರಸಾಲಿ, ಶಹರ ಸಿಪಿಐ ನಲವಾಗಿಲ ಮಂಜುನಾಥ ಅತಿಥಿಗಳಾಗಿ ಆಗಮಿಸಿದ್ದರು.
ಇತಿಹಾಸ ಸಂಶೋಧಕ ಪ್ರೊ.ಮಂಜುನಾಥ ಬುರಡಿಕಟ್ಟಿ ಸರ್ವಜ್ಞನ ಕುರಿತು ಉಪನ್ಯಾಸ ನೀಡಿದರು. ವಿ.ಬಿ.ಕುಂಬಾರ, ಸಂಪತ್ಕುಮಾರ ಪೂಜಾರ, ಮಹಲಿಂಗಪ್ಪ ಸಾಲಿಮನಿ, ಬಸಪ್ಪ ಕೆಂಚಪ್ಪನವರ, ನೀಲಪ್ಪ ಚಕ್ರಸಾಲಿ, ಮಲ್ಲಮ್ಮ ಕುಂಬಾರ, ಮೀನಾಕ್ಷ ಮ್ಮ ಚಕ್ರಸಾಲಿ, ಮಂಜುಳಾ ಚಕ್ರಸಾಲಿ ಮತ್ತು ಇತರರು ಇದ್ದರು.
ಇದಕ್ಕೂ ಪೂರ್ವದಲ್ಲಿ ನಗರದ ಮಿನಿವಿಧಾನಸೌಧದ ಬಳಿಯಿಂದ ಸರ್ವಜ್ಞನ ಭಾವಚಿತ್ರವನ್ನು ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರಂಭದ ಸ್ಥಳಕ್ಕೆ ತರಲಾಯಿತು.