ಬೆಂಗಳೂರು(ಫೆ.೧೬, ಕುಲಾಲ್ ವರ್ಲ್ಡ್ ನ್ಯೂಸ್) : ರಾಜ್ಯ ಕಾರ್ಮಿಕ ಇಲಾಖೆಯು ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೆ ತಂದಿದ್ದು, ಈ ಸೌಲಭ್ಯದಿಂದ ವಂಚಿತರಾಗಿದ್ದ ಕುಂಬಾರ ಜನಾಂಗವನ್ನು ಸೇರ್ಪಡೆಗೊಳಿಸಲಾಗಿದ್ದು, ರಾಜ್ಯ ಬಜೆಟ್ ನಲ್ಲಿ ಸೀಎಂ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾಪ ಮಾಡಿ, ಅನುದಾನ ಬಿಡುಗಡೆ ಮಾಡಿದ್ದಾರೆ.
ರಾಜ್ಯ ಕಾರ್ಮಿಕ ಇಲಾಖೆಯು ಅಸಂಘಟಿತ ಕಾರ್ಮಿಕರಿಗಾಗಿ ಯೋಜನೆಯನ್ನು 2011 ಜೂನ್ನಿಂದ ಪ್ರಾರಂಭಿಸಿತ್ತು. ಈ ವ್ಯಾಪ್ತಿಗೆ ಹಲವಾರು ಕುಶಲಕರ್ಮಿ ಸಮುದಾಯಗಳು ಸೇರಿವೆ. ಆದರೆ ಕುಂಬಾರ ಸಮುದಾಯವು ಇದರಿಂದ ಹೊರತಾಗಿತ್ತು. ಈ ಬಗ್ಗೆ ಹಲವು ಸಂಘಟನೆಗಳು ಸರಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗಷ್ಟೇ ಪ್ರಮೋದ್ ಮಧ್ವರಾಜ್ ಸಹಿತ ಹಲವು ಸಚಿವರಿಗೆ ಮನವಿ ಸಲ್ಲಿಸಿ ಈ ಯೋಜನೆಯನ್ನು ಕುಂಬಾರರಿಗೂ ದೊರಕಿಸಿಕೊಂಡುವಂತೆ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಮುಖಂಡರು ಒತ್ತಾಯಿಸಿದ್ದರು.
ಫೆ. ೧೬ರಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಸಂಘಟಿತ ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರಿಗೂ ಸಹ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗುವುದು. ಇದರೊಂದಿಗೆ 25 ಕೋಟಿ ರೂ. ವೆಚ್ಚದಲ್ಲಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ತಮ್ಮ ಸರ್ಕಾರವು ಕಳೆದ 5 ವರ್ಷಗಳಲ್ಲಿ ಕಾರ್ಮಿಕ ರಾಜ್ಯ ವಿಮಾ ಇಲಾಖೆಗೆ 1339 ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಕಳೆದ ಸಾಲಿನಲ್ಲಿ 30.73 ಲಕ್ಷ ವಿಮಾದಾರರಿಗೆ ಕಾರ್ಮಿಕ ರಾಜ್ಯ ವಿಮಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು. 4 ಕೋಟಿಗೂ ಅಧಿಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ದಿಗಾಗಿ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಎರಡೂ ವರ್ಗದ ಕಾರ್ಮಿಕರಿಗಾಗಿ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಾರ್ಖಾನೆ ಕಾರ್ಮಿಕರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂದ 60 ವರ್ಷಗಳಿಗೆ ಏರಿಸಲಾಗಿದೆ. ಕಟ್ಟಡ ಕಾರ್ಮಿಕರ ಗೃಹ ನಿರ್ಮಾಣ ಮುಂಗಡ ಮೊತ್ತವನ್ನು 50,000 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಅಡಿ ಪರಿಹಾರ ಮೊತ್ತವನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸವಿತಾ ಸಮಾಜ, ತಿಗಳ, ಮಡಿವಾಳ, ಕುಂಬಾರ ಜಾತಿಗಳ ಅಭಿವೃದ್ಧಿಗೆ 100 ಕೋಟಿ ಮೀಸಲು: ಸರಕಾರ ಈ ಬಾರಿಯೂ ಕುಂಬಾರ ಸಮುದಾಯ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡದೇ ಈ ಹಿಂದಿನಂತೆ ಸವಿತಾ ಸಮಾಜ, ತಿಗಳ ಸಮಾಜ, ಮಡಿವಾಳ ಈ ನಾಲ್ಕು ಸಮಾಜಕ್ಕೆ ಒಟ್ಟು ನೂರು ಕೋಟಿ ಅನುದಾನ ಮೀಸಲಿಟ್ಟಿದೆ.