ಕಾರ್ಕಳ(ಫೆ.೧೩, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸುಂದರ ಜೀವನ ನಿರ್ವಹಣೆಯ ಕನಸು ಕಂಡು ವಿವಾಹವಾದ ಯುವಕನೊಬ್ಬ ವರ್ಷ ಕಳೆಯುವುದರೊಳಗೆ ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಅಲ್ಪ ಆದಾಯದಲ್ಲೇ ಜೀವನ ನಡೆಸುತ್ತಿದ್ದ ಕುಟುಂಬ ಚಿಕಿತ್ಸೆಗೆ ಹಣವಿಲ್ಲದೆ ಕಂಗೆಟ್ಟು ಕುಳಿತಿದೆ. ಕಾರ್ಕಳ ತಾಲೂಕು ಇನ್ನಾ ಗ್ರಾಮದ ಗಾಂದೊಟ್ಟು ಈಶ್ವರ ಬಂಜನ್ ಮತ್ತು ರತ್ನಾ ದಂಪತಿಯ ಪುತ್ರ ಶಶಿಕಾಂತ್ ಬಂಗೇರ (31ವರ್ಷ) ಕಿಡ್ನಿ ವೈಫಲ್ಯಕ್ಕೀಡಾಗಿ ಸಾಕಷ್ಟು ನೋವು ಅನುಭವಿಸುತ್ತಿರುವ ನತದೃಷ್ಟನ ಕಣ್ಣೀರ ಕಥೆ ಇದು..
ವೃತ್ತಿಯಲ್ಲಿ ಮೆಕ್ಯಾನಿಕಲ್ ಫಿಟ್ಟರ್ ಆಗಿ ದುಡಿಯುತ್ತಾ ನೆಮ್ಮದಿಯಲ್ಲಿದ್ದ ಶಶಿಕಾಂತ್ ಒಂದು ವರ್ಷದ ಹಿಂದಷ್ಟೇ ಸ್ವಾತಿ ಎಂಬಾಕೆಯನ್ನು ವಿವಾಹವಾಗಿ ಸುಖ ಜೀವನ ನಡೆಸುವ ವೇಳೆಯಲ್ಲೇ ಕ್ರೂರ ವಿಧಿಗೆ ಈ ಸಂಸಾರದ ಖುಷಿಯನ್ನು ನೋಡಿ ಹೊಟ್ಟೆ ಕಿಚ್ಚಾಯಿತೇನೋ..? ಪತ್ನಿ ಗರ್ಭಿಣಿಯಾದ ಖುಷಿಯಲ್ಲಿದ್ದ ಶಶಿಕಾಂತ್ ಗೆ ಆಘಾತ ಕಾದಿತ್ತು. ಅದೊಂದು ದಿನ ಇದ್ದಕ್ಕಿದ್ದಂತೆ ವಿಪರೀತ ಹೊಟ್ಟೆನೋವು, ವಾಂತಿಯಿಂದ ಬಳಲಿದ ಇವರನ್ನು ವೈದ್ಯರಿಗೆ ತೋರಿಸಿದಾಗ ಎರಡೂ ಕಿಡ್ನಿ ವೈಫಲ್ಯಗೊಂಡು ವಿಷಮ ಸ್ಥಿತಿಗೆ ತಲುಪಿರುವುದು ಗೊತ್ತಾಗಿತ್ತು. ಮೊದಲೇ ತಿಳಿದಿದ್ದರೆ ಗುಣಪಡಿಸಬಹುದಾಗಿದ್ದ ಆರಂಭದ ಹಂತಗಳನ್ನು ಮೀರಿ ಸಂಪೂರ್ಣ ಕೆಟ್ಟು ನಿಂತಿರುವ ಮೂತ್ರಪಿಂಡ ತನ್ನ ಕೆಲಸವನ್ನು ನಿಲ್ಲಿಸುವ ಹಂತ ತಲುಪಿದ್ದು ತುರ್ತಾಗಿ ಕಿಡ್ನಿ ಬದಲಾವಣೆಯೊಂದೇ ಮುಂದೆ ಜೀವ ರಕ್ಷಣೆಗಿರುವ ಪರಿಹಾರ. ಸದ್ಯ ಆರೋಗ್ಯ ಸುಧಾರಣೆಗೆ ‘ಕಿಡ್ನಿ ಡಯಾಲಿಸಿಸ್’ ಅನಿವಾರ್ಯವಾಗಿದ್ದು, ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಗೆ ಒಳಗಾಗಬೇಕಾಗಿದೆ.
ಜೀವನ ಅತಂತ್ರ
ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು ಸಣ್ಣ ಆದಾಯದಲ್ಲಿ ಜೀವನ ನಡೆಸುತ್ತಿದ್ದ ಶಶಿಕಾಂತ್ ತನ್ನ ಅನಾರೋಗ್ಯದ ಕುರಿತಂತೆ ಅರಿವಿಲ್ಲದೆ ವರ್ಷದ ಹಿಂದೆ ವಿವಾಹವಾಗಿದ್ದು ಪತ್ನಿ ಸ್ವಾತಿ ಇದೀಗ ತುಂಬು ಗರ್ಭಿಣಿಯಾಗಿದ್ದಾರೆ. ಈ ಮಧ್ಯೆ ಮಾರಣಾಂತಿಕ ಕಾಯಿಲೆಯಿಂದ ಜೀವನ ಅತಂತ್ರವಾಗಿದ್ದು ಮುಗ್ದತೆಯೇ ಮೈವೆತ್ತ ಪತ್ನಿಯ ಕಣ್ಣೀರು, ಮಗನ ದಯನೀಯ ಸ್ಥಿತಿಯ ಕಂಡು ಮರುಗುವ ತಾಯಿ ರತ್ನಾ ಅವರನ್ನು ಕಂಡರೆ ಕಲ್ಲು ಮನಸ್ಸು ಕೂಡಾ ಮಂಜಾಗುತ್ತದೆ.
ಎಲ್ಲರನ್ನೂ ಆಕರ್ಷಿಸುವಂತಿದ್ದ ಸದೃಢ ದೇಹ ಸ್ವರೂಪ ಹೊಂದಿದ್ದ ಶಶಿಕಾಂತ್ ದಿನೇ ದಿನೇ ಕೃಶವಾಗುತ್ತಿದ್ದಾನೆ. ಮಗನ ಜೀವ ಉಳಿಸಿಕೊಳ್ಳಲು ಕಿಡ್ನಿ ಕಸಿ ಮಾಡಲೇಬೇಕಾದ ಅನಿವಾರ್ಯ ಎದುರಾಗಿದ್ದು, ಕಿಡ್ನಿ ಖರೀದಿಸುವ ಸಾಮರ್ಥ್ಯ ಇಲ್ಲದ ಕಾರಣ ತಾಯಿಯೇ ತನ್ನ ಒಂದು ಕಿಡ್ನಿಯನ್ನು ಕರುಳಕುಡಿಗೆ ಕಸಿ ಮಾಡಿಸಲು ಮುಂದಾಗಿದ್ದಾರೆ. ಈ ಸಂಬಂಧ ಕೊಯಮತ್ತೂರಿನ Kovai Medical Center ನಲ್ಲಿ ಅಗತ್ಯ ಪರೀಕ್ಷೆಗಳನ್ನು ಪೂರೈಸಿದ್ದು, ಕಿಡ್ನಿ ಟ್ರಾನ್ಸ್ಪ್ಲ್ಯಾಂಟ್ ಮಾಡಲು 8 ರಿಂದ 9 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಜ್ಞವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆ ವೆಚ್ಚ ಭರಿಸುವುದೇ ಕಷ್ಟ
ಸದ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಬಾರಿ ‘ಡಯಲಿಸಿಸ್’ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಶಶಿಕಾಂತ್ ಇದುವರೆಗೆ ಚಿಕಿತ್ಸೆಗಾಗಿಯೇ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಈ ಕುಟುಂಬ ಡಯಲಿಸಿಸ್ ಗೆ ಹಣ ಹೊಂದಿಸುವುದಕ್ಕಾಗಿಯೇ ಸಾಲ ಸೋಲ ಮಾಡಿ ಕಂಗಾಲಾಗಿದೆ. ಇನ್ನು ಕಿಡ್ನಿ ಕಸಿ ಮಾಡಲು ಅಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ವಿಫಲವಾಗಿದ್ದು ಬರಿಗೈಯಾಗಿರುವ ಕುಟುಂಬ, ನೆರವಿಗೆ ಹಂಬಲಿಸುತ್ತಿದೆ. ಸಂಘ-ಸಂಸ್ಥೆಗಳು, ಸಮುದಾಯದ ದಾನಿಗಳು ಈ ಬಡ ಕುಟುಂಬಕ್ಕೆ ಆಸರೆಯಾಗಿ ಇದೀಗ ನಿಲ್ಲಬೇಕಿದೆ. ಈ ಬಡ ಕುಟುಂಬಕ್ಕೆ ನಿಮ್ಮ ದುಡಿಮೆಯ ಕಿಂಚಿತ್ ಹಣನೀಡಿ. ಆ ಕಿಂಚಿತ್ ಹಣವೇ ಒಟ್ಟು ಸೇರಿ ದೊಡ್ಡ ಮೊತ್ತ ಆದೀತು. ಕಣ್ಣೀರಿನಲ್ಲೇ ಕೈ ತೊಳೆಯುತ್ತಿರುವ ಈ ಬಡ ಕುಟುಂಬಕ್ಕೆ ಆಸರೆಯಾಗಬಯಸುವವರು ಇಲ್ಲಿ ನೀಡಿರುವ ಬ್ಯಾಂಕ್ ಖಾತೆಗೆ ಹಣಸಹಾಯ ಮಾಡಬಹುದು.
Shashikanth,
Syndicate Bank
Kanjarakatte Branch,
Karkala
A/c No. 01382200056384,
IFSC code : SYNB 0000218
Contact No: 7619146744
ಚಿತ್ರ-ಮಾಹಿತಿ : ಜಗದೀಶ್ ಕುಲಾಲ್ ತೋಕೂರು