ಮಂಗಳೂರು(ಫೆ.೧೧, ಕುಲಾಲ್ ವರ್ಲ್ಡ್ ನ್ಯೂಸ್): ನಿರಂತರ ಸಮಾಜಮುಖಿ ಚಿಂತನೆಯಲ್ಲಿ ನಮ್ಮಿಂದ ಸಮಾಜಕ್ಕೆ ಏನಾದರೂ ನೀಡಬೇಕು ಎನ್ನುವ ಉದ್ದೇಶದಿಂದ `ತುಳುನಾಡ ಪೊರ್ಲು ಸೇವಾ ಟ್ರಸ್ಟ್’ ಸ್ಥಾಪಿಸಿ, ಈ ಮೂಲಕ ತಾವು ದುಡಿದ ದುಡಿಮೆಯಲ್ಲಿ ಪ್ರತಿ ತಿಂಗಳು ಒಂದಿಷ್ಟನ್ನು ಜನರ ಆರೋಗ್ಯ ಸುಧಾರಣೆಗಾಗಿ ಖರ್ಚು ಮಾಡುವ ಮೂಲಕ, ಹಲವಾರು ಬಡಕುಟುಂಬದ ಕಣ್ಣೀರು ಒರೆಸುವ ಕಾರ್ಯ ಮಾಡಿ ಗಮನಸೆಳೆದಿರುವ ಟ್ರಸ್ಟ್ ನ ಮೂರು ಮಂದಿ ರೂವಾರಿಗಳನ್ನು `ಕುಲಾಲ್ ವರ್ಲ್ಡ್’ ವತಿಯಿಂದ ಸನ್ಮಾನಿಸಲಾಯಿತು.
ಫೆ. ೧೧ರಂದು ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ `ಕುಲಾಲ್ ವರ್ಲ್ಡ್’ ವಾಟ್ಸಪ್ ತಂಡದ ವತಿಯಿಂದ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಾಲ್ಕು ಕುಟುಂಬಗಳಿಗೆ ನೆರವು ನೀಡಿದ ಸರಳ ಕಾರ್ಯಕ್ರಮದಲ್ಲಿ ಹಲವು ಬಡ ಕುಟುಂಬಗಳ ಪಾಲಿಗೆ ಬೆಳಕಾದ `ತುಳುನಾಡ ಪೊರ್ಲು ಸೇವಾ ಟ್ರಸ್ಟ್’ನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಟ್ರಸ್ಟ್ ನ ಪ್ರಮುಖರಾದ ನವೀನ್.ಪಿ.ಮಿಜಾರ್, ನೀತೂ ಅಜಿಲಮೊಗರು ಹಾಗೂ ಚಂದು ಕುಪ್ಪೆಪದವು ಇವರನ್ನು ಶಾಲು ಹೊದೆಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಕುಲಾಲ್ ವರ್ಲ್ಡ್ ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ನರೇಶ್ ಕೆ.ಟಿ ಬೆಳ್ತಂಗಡಿ, ಸದಸ್ಯರಾದ ರಮೇಶ್ ಕುಮಾರ್ ವಗ್ಗ, ದಯಾನಂದ್ ಬಂಗೇರ ಮೂಡಬಿದ್ರೆ, ಪ್ರಶಾಂತ್ ಕುಲಾಲ್ ಶಕ್ತಿನಗರ, ಗುರುಪ್ರಸಾದ್ ಕುಲಾಲ್ ಬೆಳ್ತಂಗಡಿ, ಧನಂಜಯ ಕುಲಾಲ್ ಬೆಳ್ತಂಗಡಿ, ಕುಲಾಲ್ ವರ್ಲ್ಡ್ ಮಹಿಳಾ ವಾಟ್ಸಪ್ ಗ್ರೂಪಿನ ವೈಶಾಲಿ ಕುಲಾಲ್ ವಿಟ್ಲ, ಪೂಜಾ ವಿ ಕುಲಾಲ್ ಕೃಷ್ಣಾಪುರ, ಸುಚಿತಾ ಗುರುಪ್ರಸಾದ್ ಕುಲಾಲ್ ಬಜಪೆ ಉಪಸ್ಥಿತರಿದ್ದರು.
ವರ್ಷಗಳ ಹಿಂದೆ ಸ್ಥಾಪಿಸಲಾದ `ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ಮೂಲಕ ಇದುವರೆಗೆ ಕುಲಾಲ ಕುಟುಂಬಗಳ ಸಹಿತ ಹಲವು ಅಶಕ್ತ ಕುಟುಂಬಗಳಿಗೆ ಸುಮಾರು 6 ಲಕ್ಷ ಕ್ಕೂ ಅಧಿಕ ಮೊತ್ತದ ನೆರವು ಸಂಗ್ರಹಿಸಿ ನೀಡಿ ಸಹಕರಿಸಿದೆ.