ಮಂಗಳೂರು(ಫೆ.೧೧, ಕುಲಾಲ್ ವರ್ಲ್ಡ್ ನ್ಯೂಸ್): ಸಮಾಜದ ಕಡು ಬಡವರ, ಅಶಕ್ತರ ಕಷ್ಟದಲ್ಲಿ ಕೈ ಜೋಡಿಸಿ ಅವರ ಬಾಳಿನಲ್ಲಿ ಸಣ್ಣದೊಂದು ಆಶಾಕಿರಣ ಮೂಡಿಸಲು ತಮ್ಮಿಂದಾದ ಆಳಿಲು ಸೇವೆ ಸಲ್ಲಿಸುತ್ತಿರುವ `ಕುಲಾಲ್ ವರ್ಲ್ಡ್’ ಪುರುಷ ಮತ್ತು ಮಹಿಳಾ ವಾಟ್ಸಪ್ ಗ್ರೂಪಿನ ಸದಸ್ಯರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಾಲ್ಕು ಕುಟುಂಬಗಳಿಗೆ ಒಟ್ಟು 1,49,500/ ರೂ. ನೆರವು ನೀಡಿ ಸಾಂತ್ವನ ಹೇಳಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ನೆರಳಕಟ್ಟೆಯ ನಾರಾಯಣ ಕುಲಾಲ್ -ಸಾವಿತ್ರಿ ದಂಪತಿಯ ಪುತ್ರ ಗಗನ್, ವಾಹನ ಅಪಘಾತದಿಂದ ಎಡಗಾಲಿನ ಪಾದ ಮತ್ತು ಬಲಗಾಲಿನ ಶಕ್ತಿ ಕಳೆದುಕೊಂಡ ಕುಂಪಲ ನಿವಾಸಿ ಉಮೇಶ್ ಮತ್ತು ಶಾರದಾ ಅವರ ಪುತ್ರ ರೋಹಿತಾಶ್ವ, ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಜೇಶ್ವರ ಕುಂಜತ್ತೂರು ತೂಮಿನಾಡಿನ ವಿಶ್ವನಾಥ ಮೂಲ್ಯ ಅವರ ಪತ್ನಿ ಗೀತಾ ಅವರ ಕರುಣಾಜನಕ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ನೆರವು ನೀಡುವಂತೆ ವಿನಂತಿಸಿತ್ತು. ಇದಕ್ಕೆ ಸ್ಪಂದಿಸಿರುವ `ಕುಲಾಲ್ ವರ್ಲ್ಡ್’ ವಾಟ್ಸಪ್ ತಂಡ ಸಹೃದಯಿ ದಾನಿಗಳಿಂದ ಹಣ ಸಂಗ್ರಹ ನಡೆಸಿತ್ತು. ಅದರಂತೆ ಒಟ್ಟು ರೂ. 1,39,500/- ಸಂಗ್ರಹಗೊಂಡಿತ್ತು. ಈ ಹಣವನ್ನು ಮೂರು ಕುಟುಂಬಕ್ಕೆ ಸಮಾನ ಪಾಲು ಮಾಡಿ ಚೆಕ್ ವಿತರಿಸಲಾಗಿದೆ. ಅದರಂತೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಗಗನ್ ಕುಟುಂಬಕ್ಕೆ 46,500. ರೂ, ರೋಹಿತಾಶ್ವ ಕುಟುಂಬಕ್ಕೆ 46,500 ರೂ, ಕ್ಯಾನ್ಸರ್ ಪೀಡಿತ ಗೀತಾ ಅವರಿಗೆ 46,500 ರೂ, ನೆರವು ನೀಡಲಾಗಿದೆ.
ಈ ಮಧ್ಯೆ ಪಾರ್ಶ್ವವಾಯು ಪೀಡಿತರಾದ ವಾಮಂಜೂರು ಪರಾರಿ ನಿವಾಸಿ ಬಾಲಕೃಷ್ಣ ಮೂಲ್ಯ ಅವರ ಕುರಿತು ವೆಬ್ ಸೈಟ್ ನಲ್ಲಿ ವರದಿ ಪ್ರಕಟಿಸಿದ್ದು, ಇವರ ಸ್ಥಿತಿಯನ್ನು ಕಂಡು ಮೊದಲೇ ನೆರವು ನೀಡಿದ್ದ ಕೆಲ ದಾನಿಗಳು ಮತ್ತೆ ಹೆಚ್ಚುವರಿ ಹಣ ಕಳಿಸಿ ಈ ಕುಟುಂಬಕ್ಕೂ ನೆರವು ನೀಡುವಂತೆ ವಿನಂತಿಸಿಕೊಂಡಿದ್ದರು. ಆ ಮೂಲಕ ಸಂಗ್ರಹವಾದ 10,000 ರೂ. ತುರ್ತು ನೆರವನ್ನು ಈ ಕುಟುಂಬಕ್ಕೆ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನೀಡಲಾಯಿತು. ಕ್ಯಾನ್ಸರ್ ಪೀಡಿತ ಗೀತಾ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಗಿದ್ದು, ಅವರ ಪರವಾಗಿ ಸಂಬಂಧಿ ವೈಶಾಲಿ ಕುಲಾಲ್ ಅವರು ಚೆಕ್ ಸ್ವೀಕರಿಸಿದರು.
ಹಣ ನೀಡುವ ವೇಳೆ ವಿಶೇಷ ಅತಿಥಿಗಳಾಗಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಪ್ರಮುಖರಾದ ನವೀನ್ .ಪಿ.ಮಿಜಾರ್, ನೀತೂ ಅಜಿಲಮೊಗರು ಹಾಗೂ ಚಂದು ಕುಪ್ಪೆಪದವು ಭಾಗವಹಿಸಿ ಚೆಕ್ ವಿತರಿಸಿದರು. ಕುಲಾಲ್ ವರ್ಲ್ಡ್ ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ರಂಜಿತ್ ಕುಮಾರ್ ಮೂಡಬಿದ್ರೆ, ಹೇಮಂತ್ ಕುಮಾರ್ ಕಿನ್ನಿಗೋಳಿ, ನರೇಶ್ ಕೆ.ಟಿ ಬೆಳ್ತಂಗಡಿ ಹಾಗೂ ಸದಸ್ಯರಾದ ರಮೇಶ್ ಕುಮಾರ್ ವಗ್ಗ, ದಯಾನಂದ್ ಬಂಗೇರ ಮೂಡಬಿದ್ರೆ, ಪ್ರಶಾಂತ್ ಕುಲಾಲ್ ಶಕ್ತಿನಗರ, ಗುರುಪ್ರಸಾದ್ ಕುಲಾಲ್ ಬೆಳ್ತಂಗಡಿ, ಧನಂಜಯ ಕುಲಾಲ್ ಬೆಳ್ತಂಗಡಿ, ಕುಲಾಲ್ ವರ್ಲ್ಡ್ ಮಹಿಳಾ ವಾಟ್ಸಪ್ ಗ್ರೂಪಿನ ಸದಸ್ಯರಾದ ವೈಶಾಲಿ ಕುಲಾಲ್ ವಿಟ್ಲ, ಪೂಜಾ ವಿ ಕುಲಾಲ್ ಕೃಷ್ಣಾಪುರ, ಸುಚಿತಾ ಗುರುಪ್ರಸಾದ್ ಕುಲಾಲ್ ಬಜಪೆ ಮೊದಲಾದವರು ಉಪಸ್ಥಿತರಿದ್ದರು.
ಕುಲಾಲ್ ವರ್ಲ್ಡ್ ಡಾಟ್ ಕಾಮ್ ವರದಿಗೆ ಸ್ಪಂದಿಸಿರುವ ದೋಹಾ ಕತಾರ್ ಕುಲಾಲ ಮಿತ್ರರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಗಗನ್ ಖಾತೆಗೆ ನೇರವಾಗಿ 25 ಸಾವಿರ ರೂ. ಜಮೆ ಮಾಡಿದ್ದಾರೆ. ಹೀಗಾಗಿ `ಕುಲಾಲ್ ವರ್ಲ್ಡ್’ ಮೂಲಕ ಇದುವರೆಗೆ ಒಟ್ಟು 10,94,852/- ರೂ.(ಹತ್ತು ಲಕ್ಷದ ತೊಂಭತ್ತನಾಲ್ಕು ಸಾವಿರದ ಎಂಟುನೂರಾ ಐವತ್ತೆರಡು ರೂ) ನೇರವಾಗಿ ಸಂತ್ರಸ್ತರಿಗೆ ನೆರವು ನೀಡಿದಂತಾಗಿದೆ.
ಕೃತಜ್ಞತೆಗಳು
ಕುಲಾಲ್ ವರ್ಲ್ಡ್ ನ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿ, ಬಡ ರೋಗಿಗಳ ಕಣ್ಣೀರೊರೆಸುವ ದೃಷಿಯಿಂದ ಆರ್ಥಿಕ ನೆರವು ಒದಗಿಸಿದ ಸರ್ವ ಸಹೃದಯರಿಗೆ, ದೊಡ್ಡ ಮೊತ್ತದ ಆರ್ಥಿಕ ಸಹಾಯ ನೀಡಿದ ಬೆಹರೈನ್ ಕುಲಾಲ ಮಿತ್ರರಿಗೆ ಕುಲಾಲ್ ವರ್ಲ್ಡ್ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು, ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಂಜಿತ್ ಕುಮಾರ್ ಮೂಡಬಿದ್ರೆ, ನರೇಶ್ ಕೆ.ಟಿ ಬೆಳ್ತಂಗಡಿ, ಡಿ. ಎಸ್ ಕುಲಾಲ್ ಒಮಾನ್, ಮುಕೇಶ್ ಕುಲಾಲ್ ಕೊಲ್ಯ ಹಾಗೂ ಮಹಿಳಾ ವಾಟ್ಸಪ್ ಗ್ರೂಪ್ ನಿರ್ವಾಹಕರಾದ ದಯಾಲಕ್ಷ್ಮಿ ಬಂಗೇರ ಬೆಹರೈನ್, ರೇಣುಕಾ ಸಾಲ್ಯಾನ್ ಮುಂಬಯಿ, ರಶ್ಮಿ ಮೂಲ್ಯ ಬೆಳ್ಮಣ್ ಕೃತಜ್ಞತೆ ಸಲ್ಲಿಸಿದ್ದಾರೆ. (ಧನ ಸಹಾಯ ನೀಡಿ ಸಹಕರಿಸಿದವರ ವಿವರವನ್ನು ಸದ್ಯವೇ ಪ್ರಕಟಿಸಲಾಗುವುದು)