ಮಂಗಳೂರು(ಫೆ.೦೮, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೆಲವರ ಬಾಳಿನಲ್ಲಿ ವಿಧಿ ಏನೆಲ್ಲಾ ಆಟವಾಡಿಸಿಬಿಡುತ್ತದೆ. ಸುಂದರ ಬದುಕನ್ನು ನರಕವಾಗಿಸಿ ಬಿಡುತ್ತದೆ. ಕಳೆದ 25 ವರ್ಷಗಳಿಂದ ಟಿಪ್ಪರ್ ಲಾರಿ ಓಡಿಸಿ ತನ್ನ ಪುಟ್ಟ ಸಂಸಾರವನ್ನು ಸಲಹುತ್ತಿದ್ದವರ ಮೇಲೆ ಬದುಕು ಯಾಕೆ ಮುನಿದು ಬಿಟ್ಟಿತೊ? ಏಕಾಏಕಿ ಪಾರ್ಶ್ವವಾಯುವಿಗೆ ತುತ್ತಾಗಿ ಕೈಕಾಲಿನ ಸ್ವಾಧೀನ ಕಳೆದುಕೊಂಡು ಆಸ್ಪತ್ರೆಯ ಸೂರು ದಿಟ್ಟಿಸುತ್ತಾ ಮಂಚದ ಮೇಲೆ ಬಿದ್ದುಕೊಂಡಿರುವ ಇವರ ಭವಿಷ್ಯ ತುಂಬಾ ಕತ್ತಲು. ಗಂಡನ ಸ್ಥಿತಿ ನೋಡಿ ಹೆಂಡತಿ ಸದ್ದಿಲ್ಲದೆ ಕಣ್ಣಿರಾಗುತ್ತಿದ್ದರೆ, ಈಗಷ್ಟೇ ಪ್ರಪಂಚ ಕಾಣುತ್ತಿರುವ ಪುಟ್ಟ ಹೆಣ್ಣು ಮಗು ತಂದೆಯ ಆರೈಕೆ ಮಾಡುತ್ತಾ, ತಮ್ಮ ಪರಿಸ್ಥಿತಿಯನ್ನು ನೆನೆದು ತಮ್ಮ ಪುಟ್ಟ ಕೈಗಳನ್ನು ಜೋಡಿಸಿ ದೇವರನ್ನು ಪ್ರಾರ್ಥಿಸುತ್ತಿವೆ. ಅಂದ ಹಾಗೆ ಈ ನತದೃಷ್ಟನ ಹೆಸರು ಬಾಲಕೃಷ್ಣ ಮೂಲ್ಯ.
ವಾಮಂಜೂರು ಪರಾರಿ ಗ್ರಾಮದವರಾದ ಬಾಲಕೃಷ್ಣ (40 ವರ್ಷ)ಅವರು ಬದುಕಿನ ಬಂಡಿಯನ್ನು ಮುನ್ನಡೆಸಲು ಟಿಪ್ಪರ್ ಚಾಲನೆ ಮಾಡುತ್ತಿದ್ದರು. ಬದುಕು ಚೆನ್ನಾಗಿ ಮುನ್ನಡೆಯುತ್ತಿತ್ತು. ಈ ನಡುವೆ ಹಗಲು ರಾತ್ರಿ ಎನ್ನದೆ ದುಡಿದ ಪರಿಣಾಮವೋ ಏನೋ ಆರೋಗ್ಯದಲ್ಲಿ ಏರುಪೇರಾಗಿದ್ದು ಗಮನಕ್ಕೆ ಬರಲಿಲ್ಲ. ಹೀಗಾಗಿ ಅದೊಂದು ಕರಾಳದಿನ ಏಕಾಏಕಿ ರಕ್ತದೊತ್ತಡ ಹೆಚ್ಚಾಗಿ ಪಾರ್ಶ್ವವಾಯು (ಪ್ಯಾರಲೈಸಿಸ್)ಗೆ ಈಡಾದರು. ಮೆದುಳಿನ ರಕ್ತಸಂಚಾರಕ್ಕೆ ಇದ್ದಕ್ಕಿದ್ದ ಹಾಗೆ ಅಡಚಣೆ ಬಂದಿದ್ದರ ಪರಿಣಾಮ ಅಂಗ ಬಲಹೀನತೆಗೆ ತುತ್ತಾಗಿದ್ದು, ಕೂಡಲೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಇಲ್ಲಿ ಹಲವು ಸಮಯ ಚಿಕಿತ್ಸೆ ಪಡೆದ ಪರಿಣಾಮ ಸ್ವಲ್ಪ ಚೇತರಿಸಿಕೊಂಡರೂ ಸಹಜ ಸ್ಥಿತಿಗೆ ಬಂದು ನಡೆದಾಡಲು ಸಾಧ್ಯವಾಗಲಿಲ್ಲ. ಆದರೆ ಆಸ್ಪತ್ರೆ ವೆಚ್ಚ ಮಾತ್ರ ಮೂರು ಲಕ್ಷ ರೂ. ದಾಟಿತ್ತು. ಹೊಟ್ಟೆಬಟ್ಟೆ ಕಟ್ಟಿ ಕೂಡಿಟ್ಟಿದ್ದ ಅಲ್ಪ ಹಣದಿಂದ ಹಾಗು ಸಂಬಂಧಿಕರ ನೆರವಿನಿಂದ ಆಸ್ಪತ್ರೆಯಿಂದ ಮುಕ್ತಿ ದೊರೆಯಿತು. ಹೀಗೆ ಮೂರು ತಿಂಗಳು ಮನೆಯಲ್ಲಿದ್ದು, ಸರಿಯಾದ ಚಿಕಿತ್ಸೆ/ಆರೈಕೆ ಇಲ್ಲದೆ ಪೂರ್ತಿ ಸೊರಗಿದ ಬಾಲಕೃಷ್ಣ ಅವರನ್ನು ಬಳಿಕ ಅಶೋಕನಗರದ ಕರ್ನಾಟಕ ಆಯುರ್ವೇದಿಕ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇವರ ಕುಟುಂಬಕ್ಕೆಈಗ ಆಸ್ಪತ್ರೆಯೇ ಮನೆ ಎಂಬಂತಾಗಿದೆ.
ಕಂಗೆಟ್ಟ ಕುಟುಂಬ
ಮನೆಯ ಆಧಾರಸ್ತಂಭವಾಗಿದ್ದ ಬಾಲಕೃಷ್ಣ ದೇಹದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರಿಂದ ಪತ್ನಿ ರಜನಿ ಮತ್ತು ಐದು ವರ್ಷದ ಪುಟ್ಟ ಹೆಣ್ಣು ಮಗು ಗಗನ್ಯ ಕಂಗೆಟ್ಟು ದಿಕ್ಕು ತೋಚದಂತಾದರು. ಗೃಹಿಣಿಯಾಗಿ ಮನೆವಾರ್ತೆ ನೋಡಿಕೊಂಡಿದ್ದ ರಜನಿ ಅವರಿಗೆ ಹೊರಪ್ರಪಂಚದ ಜ್ಞಾನವಿರಲಿಲ್ಲ. ಇದರಿಂದ ಇವರ ಕುಟುಂಬವು ಚಿಕಿತ್ಸೆಯ ಖರ್ಚು, ದೈನಂದಿನ ಜೀವನ ನಿರ್ವಹಣೆಗೆ ಹೆಣಗಾಡುವ ಪರಿಸ್ಥಿತಿ ಎದುರಾಯಿತು. ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರನ್ನು ನೋಡಿಕೊಳ್ಳುವುದು, ಜೊತೆಗೆ ಮಗುವಿನ ಆರೈಕೆ, ಜೀವನ ನಿರ್ವಹಣೆ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಯಿತು.
ಕೆಲ ದಿನ ಊಟಕ್ಕೂ ಪರದಾಡಿದ ಇವರು, ಮುಂದಿನ ದಾರಿ ಕಾಣದೇ ಪತಿ ದಾಖಲಾಗಿದ್ದ ಆಸ್ಪತ್ರೆಯಲ್ಲೇ ಪುಟ್ಟದೊಂದು ಕೆಲಸ ನೀಡುವಂತೆ ಕೇಳಿಕೊಂಡರು. ಇವರ ಸ್ಥಿತಿ ಕಂಡು ಕರುಣೆ ತೋರಿದ ಆಸ್ಪತ್ರೆ ಆಡಳಿತ ವರ್ಗ ಆಯಾ ಆಗಿ ಇವರನ್ನು ಕೆಲಸಕ್ಕೆ ಸೇರಿಕೊಂಡಿದೆ. ಕಳೆದ ಒಂದೂವರೆ ವರ್ಷಗಳಿಂದ ಆಸ್ಪತ್ರೆಯೇ ಈ ಕುಟುಂಬಕ್ಕೆ ಮನೆ. ಅಲ್ಲಿಂದಲೇ ಮಗು ಗಗನ್ಯ ಅಂಗನವಾಡಿಗೆ ಹೋಗುತ್ತಾ, ಅಮ್ಮನಿಲ್ಲದ ವೇಳೆ ತಂದೆಯ ಆರೈಕೆ ಮಾಡುತ್ತಾ ಬದುಕು ಸವೆಸುತ್ತಿರುವುದನ್ನು ಕಂಡಾಗ ಎಂತಹವರ ಕಲ್ಲು ಹೃದಯವೂ ಕರಗುತ್ತದೆ. ಗಂಡನ ಚಿಕಿತ್ಸೆಯ ಖರ್ಚು, ದೈನಂದಿನ ಜೀವನ ನಿರ್ವಹಣೆ, ಮಗುವಿನ ಭವಿಷ್ಯಕ್ಕಾಗಿ ಹೆಣಗಾಡುತ್ತ ಸಂಕಷ್ಟದಲ್ಲಿರುವ ರಜನಿ ಅವರ ಕುಟುಂಬಕ್ಕೆ ಸಹಾಯ ಹಸ್ತದ ಅವಶ್ಯಕತೆಯಿದೆ. ಮಾನವೀಯ ಸಹೃದಯೀ ದಾನಿಗಳು ಈ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದರೆ ಆಧಾರ ಕಳೆದುಕೊಂಡ ಕುಟುಂಬಕ್ಕೆ ತುಸು ನೆಮ್ಮದಿ ಸಿಕ್ಕಂತಾಗುತ್ತದೆ.
ಬಡ ಕುಟುಂಬಕ್ಕೆ ಸಹಾಯಹಸ್ತ ನೀಡಲು ಬಯಸುವ ಇಚ್ಛೆಯುಳ್ಳವರು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.
Name: Rajani
Bank: Canara Bank
A/c num: 3060 108 001488
IFSC code: CNRB0003060
Branch: Vamanjoor
Mobile: +91 70901 27844
ಚಿತ್ರ-ಮಾಹಿತಿ : ಸುಚಿತಾ ಗುರುಪ್ರಸಾದ್ ಕುಲಾಲ್, ಬಜಪೆ
——–—